ಅಡಹಳ್ಳಿ: ಅಥಣಿ ತಾಲೂಕಿನಲ್ಲಿ ದಾಳಿಂಬೆ ಬೆಳೆಗೆ ದುಂಡಾಣು (ಕ್ಯಾರ) ರೋಗ ತಗುಲಿ ಫಸಲು ನಾಶವಾಗಿದ್ದು, ಆರ್ಥಿಕ ಸಂಕಷ್ಟದಲ್ಲಿರುವ ರೈತನಿಗೆ ಆಘಾತ ತಂದಿಟ್ಟಿದೆ.
ತೆಲಸಂಗ ಹೋಬಳಿಯ ಅಡಹಳ್ಳಿ, ಕೊಟ್ಟಲಗಿ, ಕಕಮರಿ, ಕೋಹಳ್ಳಿ, ಸುಟ್ಟಟ್ಟಿ, ಸೇರಿದಂತೆ ಅನೇಕ ಗ್ರಾಮಗಳಲ್ಲಿ ರೈತರು ದಾಳಿಂಬೆ ಬೆಳೆಯ ಮೇಲೆ ಅವಲಂಬಿತರಾಗಿದ್ದು, ಈ ವರ್ಷ ಮಳೆಯ ಪ್ರಮಾಣ ಕಡಿಮೆ ಇದ್ದರೂ ದಾಳಿಂಬೆ ಬೆಳೆಗೆ ಕ್ಯಾರ ರೋಗ ಹರಡಿ ಬೆಳೆ ಸಂಪೂರ್ಣ ನಾಶವಾಗಿದೆ.
ಗಾಯದ ಮೇಲೆ ಬರೆ: ರೋಗ ಹತೋಟಿಗೆ ತರಲು ಪ್ರತಿ ಲೀಟರ್‌ಗೆ ನೂರರಿಂದ ಸಾವಿರದ ವರೆಗೆ ದುಬಾರಿ ಬೆಲೆಯ ಔಷಧ ಸಿಂಪಡಿಸಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಅನೇಕ ರೈತರು ಬೇಸಿಗೆಯಲ್ಲಿ ಟ್ಯಾಂಕರ್ ಮೂಲಕ ನೀರು ಹಾಕಿಸಿ ಗಿಡಗಳನ್ನು ಬದುಕಿಸಿ ಸಾಲಕ್ಕೆ ಈಡಾಗಿದ್ದಾರೆ. ಈ ರೋಗ ಗಾಯದ ಮೇಲೆ ಮತ್ತೂಂದು ಬರೆ ಎಳೆದಂತಾಗಿದೆ.
ಹತೋಟಿಗೆ ಬರದ ರೋಗ: ಹತೋಟಿಗಾಗಿ ಜೀವಾಣು ರಕ್ಷಕ, ಗೋಬ್ಬರ ಸೇರಿದಂತೆ ಎಲ್ಲಾ ಬಗೆಯ ಕ್ರಮಗಳನ್ನು ಕೈಗೊಂಡರೂ ಯಶಸ್ವಿಯಾಗಿಲ್ಲ. ಅನೇಕ ರೈತರು ದಾಳಿಂಬೆ ಸಹವಾಸವೇ ಸಾಕೆಂದು ಗಿಡಗಳನ್ನು ಕಡಿದು ಬೇರೆ ಬೆಳಗಳತ್ತ ಮುಖ ಮಾಡುತ್ತಿದ್ದಾರೆ. ಅನಾವೃಷ್ಟಿಯಿಂದ ಬಾಧಿತರಾಗಿರುವ ಅಥಣಿ ತಾಲೂಕಿನ ಅನಂತಪುರ ಹಾಗೂ ತೆಲಸಂಗ ಹೋಬಳಿ ದಾಳಿಂಬೆ ಬೆಳೆಯುವ ರೈತರಿಗೆ ಶೀಘ್ರವೇ ಸರ್ಕಾರ ಪರಿಹಾರ ನೀಡಬೇಕು ಎಂಬುದು ರೈತರ ಆಗ್ರಹವಾಗಿದೆ.
•ಪ್ರಕಾಶ ಪೂಜಾರಿ