ಕೊರಟಗೆರೆ: ದಕ್ಷಿಣ ಭಾರತದ ಐತಿಹಾಸಿಕ ಕ್ಷೇತ್ರಗಳಲ್ಲಿ ಒಂದಾದ ಸುಪ್ರಸಿದ್ಧ ಕ್ಯಾಮೇನಹಳ್ಳಿ ಶ್ರೀ ಆಂಜನೇಯಸ್ವಾಮಿ ಪುಣ್ಯಕ್ಷೇತ್ರದಲ್ಲಿ ಫೆ.1ರಂದು ಶನಿವಾರ ರಥಸಪ್ತಮಿಯಂದು ಬ್ರಹ್ಮರಥೋತ್ಸವ ಅದ್ಧೂರಿಯಾಗಿ ನಡೆಯಿತು. ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ರಥದಲ್ಲಿ ರಾಮಲಕ್ಷ್ಮಣ, ಸೀತಾದೇವಿ ಮತ್ತು ಆಂಜನೇಯ ಸ್ವಾಮಿ ವಿಗ್ರಹ ಕೂರಿಸಿದ ತಕ್ಷಣ ಆಕಾಶದಲ್ಲಿ ಗರುಡ ತೇರಿನ ಸುತ್ತ 3 ಬಾರಿ ಪ್ರದಕ್ಷಿಣೆ ಹಾಕಿತು.
ವಿಶೇಷ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ತಹಶೀಲ್ದಾರ್ ಗೋವಿಂದರಾಜು ಚಾಲನೆ ನೀಡಿದರು. ಈ ವೇಳೆ ಭಕ್ತರ ಜೈಕಾರ ಮುಗಿಲು ಮುಟ್ಟಿತ್ತು. ದೇವಾಲಯ ಮತ್ತು ರಥೋತ್ಸವಕ್ಕೆ ಸಂಪೂರ್ಣ ಹೂವಿನ ಅಲಂಕಾರ ಮಾಡಲಾಗಿತ್ತು. ಜಾತ್ರೆಗೆ ಬಂದಿದ್ದ ಸಾವಿರಾರು ಭಕ್ತರಿಗೆ ಜಿಪಂ ಸದಸ್ಯ ಪಿ.ಎನ್.ಕೃಷ್ಣಮೂರ್ತಿ ದಾಸೋಹ ವ್ಯವಸ್ಥೆ ಮಾಡಿದ್ದರು.
ಭಕ್ತರ ಅನುಕೂಲಕ್ಕಾಗಿ ಕಲ್ಯಾಣ ಮಂಟಪ, ಕುಡಿಯುವ ನೀರು ಹಾಗೂ ನೆರಳಿನ ವ್ಯವಸ್ಥೆ ತಾಲೂಕು ಆಡಳಿತದ ವತಿಯಿಂದ ಕಲ್ಪಿಸಲಾಗಿತ್ತು. ಶನಿವಾರ ರಾತ್ರಿ ಮೈಲಿಗೆ ರಥೋತ್ಸವ, ಹೂವಿನ ಪಲ್ಲಕ್ಕಿ, ನಾಟಕ ಪ್ರದರ್ಶನ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ರಥೋತ್ಸವದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದರು.
ಸಿಪಿಐ ನದಾಫ್, ಇನ್ಸ್‌ಪೆಕ್ಟರ್ ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಡ್ಲಹಳ್ಳಿ ಅಶ್ವತ್ಥನಾರಾಯಣ್, ಜಿಲ್ಲಾ ಜೆಡಿಎಸ್ ಪ್ರದಾನಕಾರ್ಯದರ್ಶಿ ಮಹಾಲಿಂಗಪ್ಪ, ಜಿಪಂ ಮಾಜಿ ಸದಸ್ಯ ಕೃಷ್ಣಮೂರ್ತಿ, ಮಯೂರ ಗೋವಿಂದರಾಜು, ಹಾಲು ಒಕ್ಕೂಟದ ನಿರ್ದೇಶಕ ಈಶ್ವರಯ್ಯ, ಕೊಡ್ಲಹಳ್ಳಿ ವೆಂಕಟೇಶ್, ಕಂದಾಯ ಇಲಾಖೆಯ ನರಸಿಂಯಮೂರ್ತಿ ಇತರರಿದ್ದರು.
ಕ್ಯಾಮೇನಹಳ್ಳಿಯ ಕಮನೀಯ ಕ್ಷೇತ್ರಕ್ಕೆ ಕರಿಗಿರಿ ಕ್ಷೇತ್ರವೆಂದು ಪ್ರಸಿದ್ಧವಾಗಿರುವ ದೇವರಾಯನದುರ್ಗ ಉಪಕ್ಷೇತ್ರವಾಗಿದೆ. ಜಯಮಂಗಲಿ ಮತ್ತು ಗರುಡಚಲ ನದಿಗಳ ಸಂಗಮದ ಕ್ಷೇತ್ರದಲ್ಲಿ ವಾಯು ದೇವರು ಅವತಾರಶ್ರಯ ಅಂದರೆ ಹನುಮ-ಭೀಮ-ಮಧ್ವರೂಪ ಸನ್ನಿಧಾನವಿರುವ ಕ್ಯಾಮೇನಹಳ್ಳಿ ಆಂಜನೇಯಸ್ವಾಮಿ ಕ್ಷೇತ್ರ ಕಮನೀಯ ಕ್ಷೇತ್ರವೆಂದು ಪ್ರಸಿದ್ಧವಾಗಿದೆ.
-ಕೃಷ್ಣಾಚಾರ್, ಅರ್ಚಕ, ಕ್ಯಾಮೇನಹಳ್ಳಿ