Advertisement

Subramanya: ಸಿಡಿಲು ಬಡಿದು ನವವಿವಾಹಿತ ಸಾವು: ವಿವಿಧೆಡೆ ಸಿಡಿಲು ಸಹಿತ ಮಳೆ

01:41 AM May 04, 2024 | Team Udayavani |

ಸುಬ್ರಹ್ಮಣ್ಯ/ ಬೆಂಗಳೂರು: ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಶುಕ್ರವಾರ ರಾಜ್ಯದ ಕೆಲವೆಡೆ ಸುರಿದ ಮಳೆ ತಂಪೆರೆದಿದೆ. ಹಾಗೆಯೇ ಸಿಡಿಲು ಬಡಿದು ಸುಬ್ರಹ್ಮಣ್ಯದಲ್ಲಿ ನವವಿವಾಹಿತನ ಸಹಿತ ರಾಜ್ಯದಲ್ಲಿ ಒಟ್ಟು ಮೂವರು ಮೃತಪಟ್ಟಿದ್ದಾರೆ. 25ಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿವೆ.

Advertisement

ಸಿಡಿಲು ಬಡಿದು ನವವಿವಾಹಿತ ರೊಬ್ಬರು ಮೃತಪಟ್ಟ ಘಟನೆ ಕಡಬ ತಾಲೂಕಿನ ಸುಬ್ರಹ್ಮಣ್ಯದಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ.

ಸುಬ್ರಹ್ಮಣ್ಯ ಗ್ರಾಮದ ಪರ್ವತಮುಖಿ ನಿವಾಸಿ ಸೋಮಸುಂದರ್‌ (34) ಮೃತಪಟ್ಟವರು. ಅವರು ತಾಯಿ, ತಂಗಿ, ಪತ್ನಿಯನ್ನು ಅಗಲಿದ್ದಾರೆ.

ಶುಕ್ರವಾರ ಸಂಜೆ ಸುಬ್ರಹ್ಮಣ್ಯ ಪರಿಸರದಲ್ಲಿ ಮಳೆ ಆರಂಭಕ್ಕೂ ಮೊದಲು ಗಾಳಿ, ಗುಡುಗು ಆರಂಭಗೊಂಡಿದ್ದು ಆಗ ಮನೆಯಂಗಳದಲ್ಲಿ ಒಣಗಲು ಹಾಕಿದ್ದ ಅಡಿಕೆಯನ್ನು ಸೋಮಸುಂದರ್‌ ಅವರು ರಾಶಿ ಮಾಡುವ ವೇಳೆ ಸಿಡಿಲು ಬಡಿಯಿತು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಆ ವೇಳೆಗಾಗಲೇ ಮೃತಪಟ್ಟಿದ್ದರು. ಸೋಮ ಸುಂದರ್‌ ಅವರು ಸುಬ್ರಹ್ಮಣ್ಯ ಸಮೀಪ ಕಾರ್‌ ವಾಷಿಂಗ್‌ ಉದ್ಯಮ ನಡೆಸಿಕೊಂಡಿದ್ದು, 15 ದಿನಗಳ ಹಿಂದೆಯಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಗಣಗಲು ಗ್ರಾಮದ ರತ್ನಮ್ಮ (55) ಕುರಿಗಳನ್ನು ಮೇಯಿಸಲು ತೆರಳಿದ್ದಾಗ ಸಿಡಿಲು ಬಡಿದು ಸಾವನ್ನಪಿದ್ದಾರೆ. ಈ ವೇಳೆ 20 ಕುರಿಗಳೂ ಮೃತಪಟ್ಟಿವೆ. ಮಡಿಕೇರಿ ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಬೆಟ್ಟಗೇರಿ ಗ್ರಾಮದಲ್ಲಿ ಸಿಡಿಲು ಬಡಿದು ಅಸ್ಸಾಂ ಮೂಲದ ಕಾರ್ಮಿಕ ಪ್ರಮಾತ್‌ ಗರ್ಮಾನಿ (37)ಸಾವನ್ನಪ್ಪಿದ್ದಾನೆ. ಕೊಳ್ಳೆಗಾಲದ ಹನೂರು ಬಳಿ ಸಿಡಿಲು ಬಡಿದು ಆಕಳುಗಳು ಸಾವನ್ನಪ್ಪಿವೆ.

Advertisement

ದಕ್ಷಿಣ ಕನ್ನಡದ ಪಶ್ಚಿಮ ಘಟ್ಟದ ತಪ್ಪಲು, ರಾಜಧಾನಿ ಬೆಂಗಳೂರು, ಮೈಸೂರು, ರಾಮನಗರ, ಹಾಸನ, ಮಂಡ್ಯ ಜಿಲ್ಲೆಗಳ ಹಲವೆಡೆ ಶುಕ್ರವಾರ ಮಧ್ಯಾಹ್ನದಿಂದ ಸಂಜೆಯ ವರೆಗೆ ಧಾರಾಕಾರ ಮಳೆಯಾಗಿದೆ. ಹಲವೆಡೆ ಹಾನಿಯುಂಟಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next