ಹುಬ್ಬಳ್ಳಿ: ಧಾರವಾಡದ ಕೃಷಿ ವಿಶ್ವವಿದ್ಯಾಲಯಕ್ಕೆ ಡಾ| ಬಾಬು ಜಗಜೀವನರಾಮ್ ಅವರ ಹೆಸರು ನಾಮಕರಣ ಮಾಡುವ ಮೂಲಕ ಹಸಿರು ಕ್ರಾಂತಿ ಹರಿಕಾರನಿಗೆ ಗೌರವ ಸಲ್ಲಿಸಬೇಕು ಎಂದು ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ| ಜಿ.ಬಿ. ನಂದನ ಹೇಳಿದರು.
ಇಂದಿರಾ ಗಾಜಿನ ಮನೆಯಲ್ಲಿ ಬುಧವಾರ ನಡೆದ ಡಾ| ಬಾಬು ಜಗಜೀವನರಾಮ್ ಅವರ 110ನೇ ಜನ್ಮದಿನಾಚರಣೆಯ ಸಮಾರೋಪಸಮಾರಂಭದಲ್ಲಿ ಉಪನ್ಯಾಸ ನೀಡಿದರು. ಕೃಷಿ ಕ್ಷೇತ್ರಕ್ಕೆ ಜಗಜೀವನರಾಮ್ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಅವರ ಹೆಸರನ್ನು ಕೃಷಿ ವಿಶ್ವವಿದ್ಯಾಲಯಕ್ಕಿಡಬೇಕು.
ಅದೇ ರೀತಿ ಡಾ| ಬಾಬು ಜಗಜೀವನರಾಮ್ ಅವರಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದರು. ಬಾಬು ಜಗಜೀವನರಾಮ್ ಕೇವಲ ದಲಿತರಿಗೆ ಸೀಮಿತ ವ್ಯಕ್ತಿಯಲ್ಲ. ದೇಶಕ್ಕೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಎಲ್ಲರೂ ಮಹಾನ್ ವ್ಯಕ್ತಿಯನ್ನು ಸ್ಮರಿಸಬೇಕು. ಅವರ ಸಾಧನೆ ತಿಳಿದುಕೊಳ್ಳಬೇಕು ಎಂದು ಹೇಳಿದರು.
ಧರ್ಮಾಂತರದಿಂದ ಜಾತೀಯತೆ, ಅಸ್ಪೃಷ್ಯತೆ ನಿರ್ಮೂಲನೆ ಸಾಧ್ಯವಿಲ್ಲ. ಯಾವ ಧರ್ಮಕ್ಕೆ ಹೋದರೂ ಜಾತಿ ಎಂಬುದು ನೆರಳಿನಂತೆ ನಮ್ಮನ್ನು ಹಿಂಬಾಲಿಸುತ್ತದೆ. ವೇದಗಳನ್ನು ರಚನೆ ಮಾಡಿದವರು ದಲಿತರು. ಮಹಾಕಾವ್ಯಗಳಾದ ಮಹಾಭಾರತ ಹಾಗೂ ರಾಮಾಯಣ ಬರೆದವರು ಹಿಂದುಳಿದ ಜಾತಿ-ಜನಾಂಗದವರು.
ಆದ್ದರಿಂದ ಧರ್ಮಾಂತರ ಪರಿಹಾರವಲ್ಲ ಎಂದೇ ಜಗಜೀವನರಾಮ್ ತಿಳಿಸಿದ್ದರು ಎಂದರು. ಉಪಮಹಾಪೌರ ಲಕ್ಷ್ಮಿ ಬಿಜವಾಡ ಮಾತನಾಡಿದರು. ಪಾಲಿಕೆ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ, ಪಾಲಿಕೆ ಸದಸ್ಯ ಮೋಹನ ಹಿರೇಮನಿ, ಪ್ರೇಮನಾಥ ಚಿಕ್ಕತುಂಬಳ ಇದ್ದರು.
ಕಾರ್ಯಕ್ರಮಕ್ಕೂ ಮುನ್ನ ಭಾರತ ಮಿಲ್ ಮೈದಾನದಿಂದ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಯಿತು. ಚಾಣಕ್ಯಪುರಿ, ತೊರವಿ ಹಕ್ಕಲ, ಪಿ.ಬಿ.ರಸ್ತೆ, ಸಿದ್ಧಾರ್ಥ ಸರ್ಕಲ್, ಬಮ್ಮಾಪುರ ಓಣಿ, ತುಳಜಾಭವಾನಿ ಗುಡಿ, ದಾಜಿಬಾನ ಪೇಟೆ, ಸಂಗೊಳ್ಳಿ ರಾಯಣ್ಣ ಪ್ರತಿಮೆ, ಚನ್ನಮ್ಮ ವೃತ್ತದ ಮೂಲಕ ಇಂದಿರಾ ಗಾಜಿನ ಮನೆವರೆಗೆ ನಡೆಯಿತು.