ಸಿನ್ಸಿನಾಟಿ (ಒಹಿಯೊ, ಯುಎಸ್‌ಎ): ಸಿನ್ಸಿನಾಟಿ ಟೆನಿಸ್ ಪಂದ್ಯಾವಳಿಯಲ್ಲಿ ತವರಿನ ನೆಚ್ಚಿನ ಆಟಗಾರ್ತಿ ಸೆರೆನಾ ವಿಲಿಯಮ್ಸ್ ದ್ವಿತೀಯ ಸುತ್ತಿನಲ್ಲಿ ಪರಾಭವಗೊಂಡು ಹೊರಬಿದ್ದಿದ್ದಾರೆ. ಜೆಕ್ ಗಣರಾಜ್ಯದ ಪೆಟ್ರಾ ಕ್ವಿಟೋವಾ 3 ಸೆಟ್‌ಗಳ ಕಾದಾಟದ ಬಳಿಕ ಸೆರೆನಾ ಅವರನ್ನು 6-3, 2-6, 6-3ರಿಂದ ಮಣಿಸಿದರು.
“ಸೆರೆನಾ ವಿರುದ್ಧ ಆಡುವುದೇ ಒಂದು ಹಿತಾನುಭವ. ಈ ಗೆಲುವು ಸಂತಸ ತಂದಿದೆ’ ಎಂದು ಕ್ವಿಟೋವಾ ಪ್ರತಿಕ್ರಿಯಿಸಿದ್ದಾರೆ. ಸರಿಯಾಗಿ 2 ಗಂಟೆ ಗಳ ಕಾಲ ಇವರ ಸ್ಪರ್ಧೆ ಸಾಗಿತು. ಸೆರೆನಾ ವಿಲಿಯಮ್ಸ್ ಜತೆಯಲ್ಲೇ ತವರಿನ ಆಟಗಾರ್ತಿಯರಾದ ಕೊಕೊ ವಾಂಡೆವೇಗ್, ವರ್ವರಾ ಲೆಪೆcಂಕೊ, ಅಲ್ಲೀ ಕಿಕ್ ಅವರೆಲ್ಲ ಸೋತು ಕೂಟದಿಂದ ಹೊರಬಿದ್ದಿದ್ದಾರೆ.
6ನೇ ಶ್ರೇಯಾಂಕದ ಕ್ಯಾರೋಲಿನಾ ಗಾರ್ಸಿಯಾ 2013ರ ಚಾಂಪಿಯನ್ ವಿಕ್ಟೋರಿಯಾ ಅಜರೆಂಕಾ ಅವರನ್ನು 6-4, 7-5ರಿಂದ ಮಣಿಸಿದರು. 2016ರ ವಿಜೇತೆ, ಜೆಕ್ ಗಣ ರಾಜ್ಯದ ಕ್ಯಾರೋಲಿನಾ ಪ್ಲಿಸ್ಕೋವಾ 6-3, 6-3ರಿಂದ ಪೋಲೆಂಡಿನ ಅಗ್ನಿಸ್ಕಾ ರಾದ್ವಂಸ್ಕಾ ಅವರಿಗೆ ಸೋಲುಣಿಸಿದರು. ಇದು ರಾದ್ವಂಸ್ಕಾ ವಿರುದ್ಧ ಆಡಿದ 8 ಪಂದ್ಯಗಳಲ್ಲಿ ಪ್ಲಿಸ್ಕೋವಾ ಸಾಧಿಸಿದ ಮೊದಲ ಗೆಲುವು. “ಈ ಪಂದ್ಯ ಸಂಪೂರ್ಣ ವಾಗಿ ನನ್ನ ಹಿಡಿತದಲ್ಲಿತ್ತು’ ಎಂಬು ದಾಗಿ ಪ್ಲಿಸ್ಕೋವಾ ಹೇಳಿದರು.
ಕ್ರೊವೇಶಿಯಾದ ಪೆಟ್ರಾ ಮಾರ್ಟಿಕ್ 12ನೇ ಶ್ರೇಯಾಂಕದ ರಶ್ಯನ್ ಎದುರಾಳಿ ದರಿಯಾ ಕಸತ್ಕಿನಾ ವಿರುದ್ಧ 4-6, 6-4, 6-3 ಅಂತರದಿಂದ ಗೆದ್ದು ಬಂದರು. ಬೆಲ್ಜಿಯಂನ ಎಲಿಸ್ ಮೆರ್ಟೆನ್ಸ್, ಆಸ್ಟ್ರೇಲಿಯದ ಆ್ಯಶ್ಲಿ ಬಾರ್ಟಿ ಕ್ರಮವಾಗಿ ಮ್ಯಾಗ್ಡಲೆನಾ ರಿಬರಿಕೋವಾ ಹಾಗೂ ಮಾರ್ಕೆಟಾ ವೊಂಡೌಸೋವಾ ವಿರುದ್ಧ ನೇರ ಸೆಟ್‌ಗಳ ಜಯ ಸಾಧಿಸಿದರು.
ಗೊಜೋವಿಕ್ ವಿರುದ್ಧ ಗೆದ್ದ ಫೆಡರರ್
ಸಿನ್ಸಿನಾಟಿ ಕೂಟದ ಪುರುಷರ ವಿಭಾಗದ ಸ್ಪರ್ಧೆಯಲ್ಲಿ ರೋಜರ್ ಫೆಡರರ್ ಗೆಲುವಿನ ಆರಂಭ ಕಂಡು ಕೊಂಡಿದ್ದಾರೆ. 7 ಸಲ ಸಿನ್ಸಿನಾಟಿ ಪ್ರಶಸ್ತಿ ಎತ್ತಿರುವ ಫೆಡರರ್, ಜರ್ಮನಿಯ ಪೀಟರ್ ಗೊಜೋವಿಕ್ ವಿರುದ್ಧ 6-4, 6-4 ಅಂತರದಿಂದ ಗೆದ್ದು ಬಂದರು. ಫೆಡರರ್ ಅವರಿನ್ನು ಆರ್ಜೆಂಟೀನಾದ ಲಿಯೋನಾರ್ಡೊ ಮೇಯರ್ ವಿರುದ್ಧ ಸೆಣಸಲಿದ್ದು, ಗೆದ್ದರೆ ಕ್ವಾರ್ಟರ್ ಫೈನಲ್ ತಲುಪಲಿದ್ದಾರೆ. ಮೇಯರ್ 7-6 (9-7), 6-4 ಅಂತರದಿಂದ ಫ್ರಾನ್ಸ್‌ನ ಲುಕಾಸ್ ಪೌಲಿಗೆ ಸೋಲುಣಿಸಿದರು.