ಸುಳ್ಯ : ಇಲ್ಲಿನ ಕೆ.ವಿ.ಜಿ. ಎಂಜಿನಿಯರಿಂಗ್ ಕಾಲೇಜಿನ ಇ ಆ್ಯಂಡ್ ಸಿ ವಿಭಾಗದ ವಿದ್ಯಾರ್ಥಿನಿಯರಾದ ಚೈತ್ರಾ ಜೆ.ಕೆ., ಹಿತಾಶ್ರೀ ಎಂ.ಟಿ., ನಮಿತಾ ಎನ್.ಎಂ. ಮತ್ತು ಪೂಜಾ ಐ. ತಮ್ಮ ಬಿ.ಇ. ಅಂತಿಮ ವರ್ಷದ ಶೈಕ್ಷಣಿಕ ಪ್ರಾಜೆಕ್ಟ್ ವರ್ಕ್‌ನ ಸಲುವಾಗಿ ಆಪ್ಟಿಕಲ್ ಫೈಬರ್ ಆಧಾರಿತ ರಕ್ತದ ಗುಂಪನ್ನು ಪತ್ತೆ ಮಾಡಿ, ದೃಢೀಕರಿಸುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದಾರೆ.
ರಕ್ತಕ್ಕೆ ಬೆಳಕನ್ನು ಹೀರುವ ಗುಣವಿದ್ದು, ಹೀರುವಿಕೆಯ ಆ ಪ್ರಮಾಣ ಗುಂಪಿನಿಂದ ಗುಂಪಿಗೆ ಬದಲಾಗುತ್ತದೆ. ಬೆಳಕು ರಕ್ತದ ಮಾದರಿಯೊಂದರ ಮೂಲಕ ಹಾದು ಹೋಗುವಾಗ ಭಾಗಶ: ಹೀರಲ್ಪಡು ವುದರಿಂದ, ಆ ಬೆಳಕಿನ ತೀವ್ರತೆಯ ಮಟ್ಟ ಇಳಿಮುಖವಾಗುತ್ತದೆ. ಬೆಳಕಿನ ತೀವ್ರತೆಯಲ್ಲಾದ ಈ ಇಳಿಮುಖ ಅಥವಾ ಕಡಿತವು ರಕ್ತದ ಮಾದರಿಯ ಗುಂಪಿನ ಮೇಲೆ ಅವಲಂಬಿತವಾಗಿದೆ ಎಂದು ವಿವರಿಸಿದ್ದಾರೆ. ಪ್ರಾಧ್ಯಾಪಕ ಪ್ರದೀಶ್ ಕೆ.ಪಿ. ಇವರ ಮಾರ್ಗದರ್ಶನದಲ್ಲಿ ಅಭಿವೃದ್ಧಿ ಪಡಿಸಿ, ಯಶಸ್ವಿಯಾಗಿ ಪರೀಕ್ಷಿಸಿದ್ದಾರೆ.ತೀವ್ರತೆ ಕ್ಷೀಣಗೊಂಡ ಈ ಬೆಳಕು ಫೋಟೋ ಡೈಯೋಡ್‌ನ ಮೇಲೆ ಬಿದ್ದಾಗ ವಿದ್ಯುತ್ ಸಂಕೇತವಾಗಿ ಪರಿವರ್ತಿತ ಗೊಳ್ಳುತ್ತದೆ. ಈ ಸಂಕೇತದ ಪರಿಮಾಣವು ಬೆಳಕು ಹಾದು ಬಂದ ರಕ್ತದ ಮಾದರಿಯ ಗುಂಪನ್ನು ಅವಲಂಬಿಸಿದೆ.
ಈ ಸಾಧನ ಬಳಸಿ ಕೊಟ್ಟ ರಕ್ತದ ಮಾದರಿಯ ಗುಂಪನ್ನು ಕೇವಲ ಎರಡು ನಿಮಿಷಗಳೊಳಗಾಗಿ ದೃಢೀಕರಿಸಬಹುದಾಗಿದ್ದು, ಇದನ್ನು ಆಸ್ಪತ್ರೆಗಳಲ್ಲಿ, ದವಾಖಾನೆಗಳಲ್ಲಿ, ಖಾಸಗಿ ರಕ್ತ ಪರೀûಾ ಕೇಂದ್ರಗಳಲ್ಲಿ ಮತ್ತು ಬ್ಲಿಡ್ ಬ್ಯಾಂಕ್‌ಗಳಲ್ಲಿ ರಕ್ತದ ಗುಂಪನ್ನು ಸುಲಭ ಹಾಗೂ ಶೀಘ್ರವಾಗಿ ಪತ್ತೆ ಮಾಡಲು ಉಪಯೋಗಿಸಬಹುದು.
ಈ ಪ್ರಾಜೆಕ್ಟ್ ಸಿದ್ಧಗೊಳಿಸಲು ವಿದ್ಯಾರ್ಥಿಗಳಿಗೆ ತಗಲಿರುವ ವೆಚ್ಚವು ಅಂದಾಜು 6,000. ಕಾಲೇಜಿನಲ್ಲಿ ನಡೆದ ಎಕ್ಸ್‌ಪೋ – 2017 ರ ಪ್ರಾಜೆಕ್ಟ್ ಪ್ರದರ್ಶನ ಮತ್ತು ಸ್ಪರ್ಧೆಯಲ್ಲಿ ಈ ಸಾಧನವು ಎಲ್ಲರ ಗಮನ ಸೆಳೆದಿದ್ದು, ಕಾಲೇಜಿನ ಪ್ರಾಂಶುಪಾಲ ಡಾ| ಎನ್.ಎ. ಜ್ಞಾನೇಶ್, ಉಪ ಪ್ರಾಂಶುಪಾಲರುಗಳಾದ ಡಾ| ಹೆಚ್. ಆರ್. ಶಿವಕುಮಾರ್ ಹಾಗೂ ಪ್ರೊ| ಕೆ.ವಿ. ದೇವದಾಸ್ ಮತ್ತು ಇ ಆ್ಯಂಡ್ ಸಿ ವಿಭಾಗದ ಮುಖ್ಯಸ್ಥ ಡಾ| ರವಿಕುಮಾರ್ ಎಂ.ಎಸ್. ಈ ವಿದ್ಯಾರ್ಥಿನಿಯರನ್ನು ಅಭಿನಂದಿಸಿದ್ದಾರೆ.
ಎ.ಒ.ಎಲ್.ಇ., ಸುಳ್ಯ ಇದರ ಪ್ರಧಾನ ಕಾರ್ಯದರ್ಶಿ ಡಾ| ರೇಣುಕಾ ಪ್ರಸಾದ್ ಕೆ.ವಿ. ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದಿಸಿದ್ದಾರೆ. 2016-17ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳ ವಿವಿಧ ಪ್ರಾಜೆಕ್ಟ್ಗಳ ಚಟುವಟಿಕೆಗಳಿಗೆ ಇ ಆ್ಯಂಡ್ ಸಿ ವಿಭಾಗದ ಪ್ರಾಧ್ಯಾಪಕ ವಿಜಯ ಕುಮಾರ್ ಕಾಣಿಚ್ಚಾರ್ ಸಮನ್ವಯಕಾರರಾಗಿ ಕಾರ್ಯನಿರ್ವಹಿಸಿದ್ದರು.