ಉಡುಪಿ: ಸಿಂಡಿಕೇಟ್ ಬ್ಯಾಂಕಿನ ಕೃಷಿ ವಿಭಾಗದ ಮುಖ್ಯಸ್ಥರಾಗಿದ್ದ, ನಿವೃತ್ತ ಡಿಜಿಎಂ ದಿ| ಕೆ. ವಿಶ್ವನಾಥ ಬೆಳಿರಾಯ ಅವರ ನೆನಪಿನ ಕಾರ್ಯಕ್ರಮವು ಅವರ ಅಭಿಮಾನಿಗಳು ಮತ್ತು ಸಿಂಡಿಕೇಟ್ ಬ್ಯಾಂಕ್ ಅಗ್ರಿಕೋಸ್ ಅಸೋಸಿಯೇಶನ್ ಆಶ್ರಯದಲ್ಲಿ ಮಣಿಪಾಲದ ಸಿಂಡಿಕೇಟ್ ಬ್ಯಾಂಕಿನ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ (ಎಸ್‌ಐಬಿಎಂ) ಸೋಮವಾರ ನಡೆಯಿತು.
ಬ್ಯಾಂಕ್ ಮಾಜಿ ಸಿಎಂಡಿ ಡಾ| ಎನ್.ಕೆ. ತಿಂಗಳಾಯ ಅವರು ಕೆ.ವಿ. ಬೆಳಿರಾಯ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು. ಕೃಷಿಯ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಬೆಳಿರಾಯರು ಗ್ರಾಮೀಣ ಅಭಿವೃದ್ಧಿ ಯೋಜನೆಗಳಿಗೆ ಹೊಂದಿದ್ದ ದೂರದೃಷ್ಟಿತ್ವದಿಂದ ಬ್ಯಾಂಕುಗಳ ಅಭಿವೃದ್ಧಿಯೂ ಆಗಿದೆ. ಅವರ ಯೋಜನೆಗಳನ್ನು ಇತರ ಬ್ಯಾಂಕ್‌ಗಳು ಅನುಸರಿಸಿವೆ ಎಂದರು.
ಬೆಳಿರಾಯರ ಆಪ್ತ, ಸೆಲ್ಕೋ ಸೂರ್ಯ ಮಿತ್ರ ಪ್ರಶಸ್ತಿ ಪಡೆದ ಕೆ.ಎಂ. ಉಡುಪ ಅವರನ್ನು ಸಮ್ಮಾನಿಸಲಾಯಿತು. ರೈತರಿಗೆ ಅನುಕೂಲಕರ ಹೆಚ್ಚಿನ ಅಭಿವೃದ್ಧಿ ಯೋಜನೆಗಳನ್ನು ಸಿಂಡಿಕೇಟ್ ಬ್ಯಾಂಕ್ ಅನುಷ್ಠಾನಿಸಿದೆ. ಟಿ.ಎ. ಪೈ, ಕೆ.ಕೆ. ಪೈ ಅವರ ಕೊಡುಗೆ ಅವಿಸ್ಮರಣೀಯ. ಎಷ್ಟೋ ನಾಯಕರನ್ನು ಅವರು ಸೃಷ್ಟಿಸಿದ್ದಾರೆ. ಅಂತಹ ವ್ಯಕ್ತಿಗಳು ಸಮಾಜದಲ್ಲೇ ವಿರಳ. ಈ ಕಾರಣದಿಂದಲೇ ಬೆಳಿರಾಯರು ಸಹ ಸರಳ ವ್ಯಕ್ತಿಯಾಗಿದ್ದರು ಎಂದು ಹೇಳಿದ ಉಡುಪರು, ಕೃಷಿ ಪದವೀಧರರನ್ನು ಬ್ಯಾಂಕಿನ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಕೆಲಸಗಳಿಗೆ ಬಳಸಿಕೊಳ್ಳಬೇಕು ಎಂದು ಸಲಹೆ ಇತ್ತರು.
ಬೆಂಗಳೂರಿನ ಜನರಲ್ ಮ್ಯಾನೇಜರ್ ಎಂ. ಮೋಹನ್ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಕೆ.ವಿ. ಬೆಳಿರಾಯ ಮತ್ತು ಸ್ಮರಣ ಸಂಚಿಕೆಯ ಕುರಿತು ನಿವೃತ್ತ ಜಿಎಂ ಟಿ.ವಿ. ಭಟ್ ಮತ್ತು ನಿವೃತ್ತ ಮುಖ್ಯ ಪ್ರಬಂಧಕ ಹೇಮಂತ್ ಭಿಡೆ ಅವರು ಉಡುಪ ಅವರ ಕುರಿತು ಮಾತನಾಡಿದರು.
ಸಿಂಡಿಕೇಟ್ ಬ್ಯಾಂಕಿನ ಮಹಾಪ್ರಬಂಧಕರಾದ ಪಿ. ಮಧು, ವೀರೇಶ್ ಪಟ್ಟಣಶೆಟ್ಟಿ, ನಿವೃತ್ತ ಮಹಾಪ್ರಬಂಧಕರಾದ ಮಧುಸೂದನ, ಅನಂತಕೃಷ್ಣ, ಪಿ.ಎನ್.ಆರ್. ಭಟ್, ನಿವೃತ್ತ ಉಪಮಹಾಪ್ರಬಂಧಕ ಧನಂಜಯ, ಅನಂತರಾಮ, ಕೆ.ವಿ. ಬೆಳಿರಾಯ ಅವರ ಪುತ್ರ ಸುರೇಶ್ ಬೆಳಿರಾಯ ಉಪಸ್ಥಿತರಿದ್ದರು.
ನಿವೃತ್ತ ಮುಖ್ಯಪ್ರಬಂಧಕ ಶ್ರೀನಿವಾಸನ್ ಎನ್. ಸ್ವಾಗತಿಸಿದರು. ಉಪವಲಯ ಪ್ರಬಂಧಕ ಬಿ.ಆರ್. ಹಿರೇಮs… ವಂದಿಸಿದರು.