ನರಗುಂದ: 20ನೇ ಶತಮಾನದ ದೈತ್ಯ ಪ್ರತಿಭೆಯಾದ ಕುವೆಂಪು ಅವರು ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಯುಗದ ಕವಿ. ನಿಸರ್ಗ ಪ್ರೇಮಿಗಳಾಗಿದ್ದ ಅವರ ಸಾಹಿತ್ಯದಲ್ಲಿ ನೈಸರ್ಗಿಕ ಸಂಪತ್ತಿನ ವರ್ಣನೆಯಿದೆ,ಪ್ರಾಣಿ ಪಕ್ಷಿಗಳ ಮೇಲೆ ಪ್ರೀತಿಯಿದೆ ಎಂದು ಕೊಣ್ಣೂರಿನ ಸಿಆರ್‌ಪಿ ಸಂತೋಷ ತುರನೂರ ಬಣ್ಣಿಸಿದರು.
ಪಟ್ಟಣದ ಲಯನ್ಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಭೆ„ರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಹಾಗೂ ಲಯನ್ಸ್ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಏಕೀಕರಣ ಯೋಧರ ಯಶೋಗಾಥೆ-7 ಹಾಗೂ ಕುವೆಂಪುರವರ ಜಯಂತಿ ನಿಮಿತ್ಯ ವಿಶ್ವಮಾನವ ದಿನಾಚರಣೆ ಸಮಾರಂಭದಲ್ಲಿ ಕುವೆಂಪುರವರ ಬದುಕು-ಬರಹ ವಿಷಯವಾಗಿ ಅವರು ಉಪನ್ಯಾಸ ನೀಡಿದರು.
20ನೇ ಶತಮಾನದಲ್ಲಿ ಮಹಾಕಾವ್ಯ ರಚಿಸಿ ಕನ್ನಡ ಸಾರಸ್ವತ ಲೋಕಕ್ಕೆ ಕಳಶವನ್ನಿಟ್ಟ ಶ್ರೇಷ್ಠ ಕವಿ ಕುವೆಂಪು. ಮಾನಸ ಗಂಗೋತ್ರಿ ವಿಶ್ವವಿದ್ಯಾಲಯ ಸ್ಥಾಪಿಸಿ ಅದರಲ್ಲಿ ಮೂರು ವಿಭಾಗಗಳನ್ನಾಗಿ ವಿಭಾಗಿಸಿ ಉನ್ನತ ಶಿಕ್ಷಣಕ್ಕೆ ಹೊಸದೊಂದು ರೂಪ ಕೊಟ್ಟ ಅವರು, ಪ್ರತಿಯೊಬ್ಬರು ಜಾತಿಯಿಂದ ಮುಖ್ಯರಾಗಬಾರದು ಬದಲಾಗಿ ನೈತಿಕ ವ್ಯಕ್ತಿತ್ವದಿಂದ ಮುಖ್ಯರಾಗಬೇಕೆಂದರು. ಜಾತಿ ಸಂಕೋಲೆಯನ್ನು ಬಲವಾಗಿ ವಿರೋಧಿಸಿ ವಿಶ್ವಮಾನವ ಸಂದೇಶ ಸಾರಿದ ಮಹಾ ಮಾನವತಾವಾದಿ. ತಮ್ಮ ಜೀವಿತಾವಧಿವರೆಗೂ ಕನ್ನಡವನ್ನೇ ಉಸಿರಾಗಿಸಿಕೊಂಡು ಬದುಕಿದ ಕುವೆಂಪು ಅವರು ಕನ್ನಡದ ಅನರ್ಘ್ಯ ರತ್ನ ಎಂದರು.
ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಜಿ.ಟಿ.ಗುಡಿಸಾಗರ ಮಾತನಾಡಿ, ವಿದ್ಯಾರ್ಥಿಗಳು ಭತ್ತ ತುಂಬುವ ಗೋಣೆ ಚೀಲಗಳಾಗಬಾರದು. ಬದಲಾಗಿ ಭತ್ತ ಬೆಳೆಯುವ ಗದ್ದೆಗಳಾಗಬೇಕು. ರೈತಗೀತೆ ನೀಡಿದ ಕುವೆಂಪುರವರ ಸಾಹಿತ್ಯ ಸರ್ವಕಾಲಿಕವಾಗಿದೆ. ಜಾತ್ಯತೀತ ಮನೋಭಾವದವರಾಗಿದ್ದ ಅವರು ಬುದ್ಧ-ಬಸವ- ಅಂಬೇಡ್ಕರ್ ರಂತೆ ವೈಚಾರಿಕ ದೃಷ್ಟಿಕೋನ ಬೆಳೆಸಿಕೊಳ್ಳಬೇಕೆಂದರು.
ಸಾನಿಧ್ಯ ವಹಿಸಿದ್ದ ದೊರೆಸ್ವಾಮಿ ವಿರಕ್ತಮಠದ ಪೂಜ್ಯ ಶಾಂತಲಿಂಗ ಸ್ವಾಮಿಗಳು ಆಶೀರ್ವಚನ ನೀಡಿ, ವೈಚಾರಿಕ ಪ್ರಜ್ಞೆ ಹೊಂದಿದ್ದ ಕುವೆಂಪುರವರು ಕಾರ್ತಿಕದ ಕತ್ತಲಲ್ಲಿ ಆಕಾಶದೀಪವಾಗಿ ಬಂದೆ ಎಂದು ವಿಶ್ವ ಗುರು ಬಸವಣ್ಣನವರನ್ನು ಹೃದಯ ತುಂಬಿ ಹೊಗಳಿದರು. ಬಸವಾದಿ ಶಿವಶರಣರ ತತ್ವ-ಸಿದ್ಧಾಂತಗಳನ್ನು ಒಪ್ಪಿ ಅಪ್ಪಿಕೊಂಡಿದ್ದರು ಎಂದರು.
ಲಯನ್ಸ್ ಕ್ಲಬ್ ಕಾರ್ಯದರ್ಶಿ ಜಯಪ್ರಕಾಶ ಕಂಠಿ, ಖಜಾಂಚಿ ಸಿದ್ಧನಗೌಡ ಪಾಟೀಲ, ಪ್ರಾಚಾರ್ಯ ಎಸ್.ಜಿ.ಜಕ್ಕಲಿ ಉಪಸ್ಥಿತರಿದ್ದರು.ಡಾ|ಬಸವರಾಜ ಹಲಕುರ್ಕಿ ನಿರ್ವಹಿಸಿದರು.