Advertisement

ಜಗತ್ತಿನ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಗೆ ಕುವೆಂಪು ವಿವಿ ಉಪನ್ಯಾಸಕರು

02:51 PM Oct 24, 2021 | Vishnudas Patil |

 ಶಿವಮೊಗ್ಗ: ಅಮೆರಿಕಾದ ಪ್ರತಿಷ್ಠಿತ ಸ್ಟ್ಯಾನ್‌ಫೋರ್ಡ್‌ ವಿಶ್ವವಿದ್ಯಾಲಯ ಹೊರತಂದಿರುವ ವಿಶ್ವದ ಟಾಪ್‌ ಶೇ.2 ವಿಜ್ಞಾನಿಗಳ ಪಟ್ಟಿಯಲ್ಲಿ ಕುವೆಂಪು ವಿವಿಯ ಡಾ| ಬಿ.ಜೆ. ಗಿರೀಶ್‌ ಮತ್ತು ಡಾ| ಬಿ.ಇ. ಕುಮಾರಸ್ವಾಮಿ ಅವರು ಸ್ಥಾನ ಪಡೆದಿದ್ದಾರೆ.

Advertisement

ಎಲ್ಸೇವಿಯರ್‌ ಸಂಸ್ಥೆ ಸಹಯೋಗದೊಂದಿಗೆ ಸ್ಟ್ಯಾನ್‌ ಫೋರ್ಡ್‌ ವಿಶ್ವವಿದ್ಯಾಲಯದ ಜೆರೋಯಿನ್‌ ಬಾಸ್‌, ಕೆವಿನ್‌ ಬೋಯಾಕ್‌ ಮತ್ತು ಜಾನ್‌ ಪಿ.ಎ. ಇವೊನ್ನಿಡಿಸ್‌ ಅವರ ನ್ನೊಳಗೊಂಡ ಸಂಶೋಧನಾ ತಂಡ ಸಿದ್ಧಪಡಿಸಿರುವ ವಿಶ್ವದ ಟಾಪ್‌ ಶೇ.2 ವಿಜ್ಞಾನಿಗಳ ಡೇಟಾಬೇಸ್‌ ಅಕ್ಟೋಬರ್‌ 19ರಂದು ಬಿಡುಗಡೆಯಾಗಿದ್ದು, ಅಂತರ್ಜಾಲದಲ್ಲಿ ಮುಕ್ತವಾಗಿ ಲಭ್ಯವಿದೆ. ಸಂಶೋಧನಾ ತಂಡವು ವಿಶ್ವದ ಸಂಶೋಧಕರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೈಗೊಂಡ ಸಂಶೋಧನಾ ಪ್ರಕಟಣೆಗಳು, ಸಂಶೋಧನಾ ಉಲ್ಲೇಖಗಳು, ಸಹಲೇಖನಗಳು, ಎಚ್‌-ಇಂಡೆಕ್ಸ್‌ ಸೇರಿದಂತೆ ಹಲವು ಸಂಯೋಜಿತ ಮಾನದಂಡಗಳನ್ನು ಬಳಸಿ ಜಾಗತಿಕವಾಗಿ ಅತ್ಯುತ್ತಮ ಒಂದು ಲಕ್ಷ ವಿಜ್ಞಾನಿಗಳನ್ನು ಗುರುತಿಸಿ ದತ್ತಾಂಶವನ್ನು ಪ್ರಕಟಿಸಿದೆ. ಪಟ್ಟಿಯು 22 ವಿಜ್ಞಾನ ವಿಷಯಗಳು ಮತ್ತು 176 ಉಪವಿಜ್ಞಾನ ವಿಷಯಗಳನ್ನು ವಿಂಗಡಿಸಿ ರಚಿಸಿರುವುದಾಗಿದ್ದು, ವೃತ್ತಿಜೀವಮಾನ ಸಾಧಕರು ಮತ್ತು 2021ನೇ ಸಾಲಿನ ಸಾಧಕರು ಎಂಬ ಎರಡು ವಿಭಾಗಗಳನ್ನು ಒಳಗೊಂಡಿದೆ. 2021ರ ಸಾಲಿನ ಉತ್ತಮ ವಿಜ್ಞಾನಿಗಳ ಪಟ್ಟಿಯಲ್ಲಿ 54804ನೇ ಸ್ಥಾನವನ್ನು ಪಡೆದಿರುವ ವಿವಿಯ ಗಣಿತವಿಜ್ಞಾನ ಸಹಪ್ರಾಧ್ಯಾಪಕ ಡಾ| ಬಿ.ಜೆ. ಗಿರೀಶ್‌ ಇಂಜಿನಿಯರಿಂಗ್‌, ಅನ್ವಯಿಕ ಭೌತಶಾಸ್ತ್ರ ಮತ್ತು ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ವಿಷಯಗಳ ಕುರಿತ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಇನ್ನು ಔದ್ಯೋಗಿಕ ರಸಾಯನಶಾಸ್ತ್ರ ವಿಭಾಗದ ಸಹ ಪ್ರಧ್ಯಾಪಕ ಡಾ| ಬಿ.ಇ. ಕುಮಾರಸ್ವಾಮಿ 165713ನೇ ಸ್ಥಾನದಲ್ಲಿದ್ದಾರೆ. ಈ ವರ್ಷದ ಪಟ್ಟಿಯಲ್ಲಿ ಭಾರತದ ವಿಶ್ವವಿದ್ಯಾಲಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ಸುಮಾರು 2042 ವಿಜ್ಞಾನಿಗಳು ಸ್ಥಾನ ಪಡೆದಿದ್ದಾರೆ. ಕಳೆದ ವರ್ಷ 1900 ವಿಜ್ಞಾನಿಗಳು ಸ್ಥಾನ ಪಡೆದಿದ್ದರು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ 114 ವಿಜ್ಞಾನಿಗಳು ಈ ಪಟ್ಟಿಯಲ್ಲಿದ್ದಾರೆ. ಕಳೆದ ಕೆಲವು ವರ್ಷಗಳಿಂದ ವಿವಿಯ ಸಂಶೋಧನಾ ಸಾಧನೆಗೆ ಪೂರಕವಾದ ಕಾರ್ಯ ಮಾಡುತ್ತಿರುವ ಈ ಇಬ್ಬರು ಅಧ್ಯಾಪಕರ ಸಾಧನೆಯು ಕುವೆಂಪು ವಿವಿಗೆ ಹೆಮ್ಮೆ ತಂದಿದೆ ಎಂದು ವಿವಿಯ ಕುಲಪತಿ ಪ್ರೊ| ಬಿ.ಪಿ. ವೀರಭದ್ರಪ್ಪ ಮತ್ತು ಕುಲಸಚಿವೆ ಜಿ. ಅನುರಾಧ ಅವರು ಅಭಿನಂದಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next