Advertisement

Kuvempu ಆಧ್ಯಾತ್ಮಿಕ ಚಿಂತನೆಯುಳ್ಳ ಶೇಷ್ಠ ಸಾಹಿತಿ: ಶೀರ್ಷೇಂದು ಮುಖ್ಯೋಪಾಧ್ಯಾಯ

08:32 PM Dec 29, 2023 | Team Udayavani |

ತೀರ್ಥಹಳ್ಳಿ: ಕುವೆಂಪು ಆಧ್ಯಾತ್ಮಿಕ ಚಿಂತನೆಯುಳ್ಳ ಶೇಷ್ಠ ಸಾಹಿತಿಯಾಗಿದ್ದು 20 ನೇ ಶತಮಾನದ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾಗಿದ್ದಾರೆ. ಕವಿಯ ಶ್ರೇಷ್ಠತೆ ಬರಹಗಳು ಓದುಗರ ಮನಸ್ಸಿನ ಮೇಲೆ ಗಾಢ ಪ್ರಭಾವವನ್ನು ಬೀರುತ್ತವೆ ಎಂದು ಕುವೆಂಪು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಬಂಗಾಳಿ ಸಾಹಿತಿ ಶೀರ್ಷೇಂದು ಮುಖ್ಯೋಪಾಧ್ಯಾಯ ಹೇಳಿದರು.

Advertisement

ರಾಷ್ಟ್ರಕವಿ ಕುವೆಂಪುರವರ 119 ನೇ ಜನ್ಮದಿನಾಚರಣೆಯ ಅಂಗವಾಗಿ ಕುಪ್ಪಳಿಯ ಹೇಮಾಂಗಣದಲ್ಲಿ ಶುಕ್ರವಾರ ನಡೆದ ವಿಶ್ವಮಾನವ ದಿನಾಚರಣೆಯಲ್ಲಿ ಪ್ರಶಸ್ತಿ ಫಲಕದೊಂದಿಗೆ 5 ಲಕ್ಷ ರೂ ಮೊತ್ತದ ಕುವೆಂಪು ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅವರು ”ಆಧ್ಯಾತ್ಮಿಕದೊಂದಿಗೆ ವೈಚಾರಿಕ ಚಿಂತನೆಯನ್ನೂ ಹೊಂದಿದ್ದ ಕುವೆಂಪು ಮೌಡ್ಯಾಚರಣೆಯನ್ನು ಕಟುವಾಗಿ ವಿರೋಧಿಸಿದ ಪ್ರಭಾವಿ ಲೇಖಕರಾಗಿದ್ದು ನಿಷ್ಠುರ ವ್ಯಕ್ತಿತ್ವವನ್ನೂ ಹೊಂದಿದ್ದರು. ರಾಮಕೃಷ್ಣ ಪರಮಹಂಸ, ರವೀಂದ್ರನಾಥ ಠಾಗೋರ್,ಅರವಿಂದರ
ಪ್ರಭಾವವೂ ಅವರ ಮೇಲಿತ್ತು. ಕುಪ್ಪಳಿಯ ಶ್ರೀಮಂತ ಪರಿಸರ ಕೂಡ ಅವರ ಬರಹಗಳಿಗೆ ಪೂರಕವಾಗಿವೆ. ಕನ್ನಡಿಗರ ಹೃದಯವಂತಿಕೆ ಮತ್ತು ಪ್ರಾಮಾಣಿಕತೆಯೂ ಮೆಚ್ಚುವಂತದ್ದು” ಎಂದರು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ವಿಶ್ವ ಮಾನವ ಸಂದೇಶವನ್ನು ಸಾರಿದ ಕುವೆಂಪುರ ಸಾಹಿತ್ಯ ದೇಶದ ಆಸ್ತಿಯಾಗಿದ್ದು ಕನ್ನಡಿಗರ ಹೃದಯದಲ್ಲಿ ಕವಿ ಶಾಶ್ವತವಾಗಿ ನೆಲೆಸಿದ್ದಾರೆ. ಮುಂದಿನ ಜನಾಂಗ ಅರಿಯುವಂತೆ ಅವರನ್ನು ಶಾಶ್ವತಗೊಳಿಸುವ ಕೆಲಸ ಆಗಬೇಕಿದೆ. ಕುವೆಂಪು ಕಲಾ ಮಂದಿರದ ನಿರ್ಮಾಣಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಸರ್ಕಾರದ ಕಡೆಯಿಂದ
ಆಗಬೇಕಿರುವ ಕೆಲಸಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿಯೂ ತಿಳಿಸಿದರು.

ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಡಾ. ಬಿ.ಎಲ್.ಶಂಕರ್ ಮಾತನಾಡಿ, ಸಾಂಸ್ಕೃತಿಕ ಕಾಳಜಿಯ ರಾಜಕಾರಣಿಗಳಿಂದಾಗಿ ಸ್ಥಾಪನೆಯಾಗಿರುವ ಕುವೆಂಪು ಪ್ರತಿಷ್ಠಾನ ರಾಷ್ಟ್ರದ ಗಮನ ಸೆಳೆಯುತ್ತಿದೆ. ಈ ದೇಶದ ಯಾವುದೇ ಸಾಹಿತಿಗೆ ಸಿಗದ ಗೌರವ ಕುವೆಂಪುರವರಿಗೆ ಸಂದಿದೆ. ಕವಿಯ ಹೆಸರಿನಲ್ಲಿ 3500 ಎಕರೆ ಪ್ರದೇಶ ಬಯೋರಿಸರ್ವರ್ ಪೋಷಣೆ ಮಾಡಲಾಗುತ್ತಿದೆ. ಇದರಿಂದ ರೈತರಿಗೆ ಸ್ವಲ್ಪ ಮಟ್ಟಿನ ಅಡಚಣೆಯಾಗಿದೆ. ಎಡ ಬಲ ಮಧ್ಯ ಹೀಗೇ ಎಲ್ಲಾ ಪಂಥೀಯರೂ ಕವಿಯನ್ನು ಉಲ್ಲೇಖಿಸುತ್ತಾರೆ. ಆದರೆ ಹೇಳುವಂತೆ ನಡೆದುಕೊಳ್ಳುತ್ತಾರೆಯೇ ಎಂಬುದು ಪ್ರಶ್ನೆಯಾಗಿದೆ ಎಂದರು.

Advertisement

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಕುವೆಂಪು ತಮ್ಮ ಕೃತಿಗಳ ಮೂಲಕ ಚಿರಂಜೀವಿಯಾಗಿದ್ದಾರೆ. ಅವರು ಕೊಟ್ಟಿರುವ ಸಂದೇಶ ಮನುಕುಲದ ಏಳಿಗೆಗೆ ಪೂರಕವಾಗಿದೆ. ಕವಿಯ ಹೆಸರಿನಲ್ಲಿ ನಾಡಿನ ಹೊರಗಿನವರಿಗೂ ರಾಷ್ಟ್ರೀಯ ಪುರಸ್ಕಾರ ನೀಡುತ್ತಿರುವುದು ಮತ್ತು ಪ್ರಶಸ್ತಿ ಪುರಸ್ಕೃತರ ಸಾಹಿತ್ಯ ಕೃತಿಯನ್ನು ಕನ್ನಡಕ್ಕೆ ತರ್ಜುಮೆ ಮಾಡುವ ಮೂಲಕ ಕನ್ನಡಿಗರಿಗೆ ಓದುವ ಅವಕಾಶ ಕಲ್ಪಿಸುತ್ತಿರುವುದು ಪ್ರಶಂಸನೀಯವಾಗಿದೆ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಡಾ.ಧರಣಿದೇವಿ ಮಾಲಗತ್ತಿ, ಬೆಂಗಳೂರಿನ ನೆಪ್ರೋ ಯುರಾಲಜಿ ಸ್ಥಾಪಕ ನಿರ್ದೆಶಕ ಡಾ.ಜಿ.ಕೆ.ವೆಂಕಟೇಶ್, ಶಿವಮೊಗ್ಗ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸ್ನೇಹಲ್ ಲೋಕಂಡೆ, ದೇವಂಗಿ ಗ್ರಾ ಪಂ ಅಧ್ಯಕ್ಷೆ ಗಿರಿಜಾ ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next