Advertisement

ಕುವೆಂಪು ಕರ್ಮಭೂಮಿ ಮೈಸೂರಿನಲ್ಲಿ ಸ್ಮರಣೆ 

05:47 AM Dec 30, 2018 | |

ಮೈಸೂರು: ಶ್ರೀ ರಾಮಾಯಣ ಮಹಾದರ್ಶನಂ ಮಹಾ ಕಾವ್ಯದ ಮೂಲಕ ಕನ್ನಡಕ್ಕೆ ಪ್ರಪ್ರಥಮವಾಗಿ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ರಾಷ್ಟ್ರಕವಿ ಕುವೆಂಪು (ಕೆ.ವಿ.ಪುಟ್ಟಪ್ಪ)ಅವರ ಜನ್ಮ ದಿನವನ್ನು ಅವರ ಕರ್ಮಭೂಮಿ ಮೈಸೂರು ನಗರದ ವಿವಿಧೆಡೆ ವಿಶ್ವ ಮಾನವ ದಿನವನ್ನಾಗಿ ಆಚರಿಸಲಾಯಿತು.

Advertisement

ಜಿಲ್ಲಾಡಳಿತ ಸೇರಿದಂತೆ ನಗರದ ವಿವಿಧ ಸಂಘ ಸಂಸ್ಥೆಗಳು, ಶಾಲಾ-ಕಾಲೇಜುಗಳಲ್ಲಿ ಕುವೆಂಪು ಅವರ 115ನೇ ಜನ್ಮ ದಿನವನ್ನು ವಿಶ್ವ ಮಾನವ ದಿನವನ್ನಾಗಿ ಆಚರಿಸುವ ಮೂಲಕ ರಸಋಷಿಗೆ ನುಡಿನಮನ ಸಲ್ಲಿಸಲಾಯಿತು.

ನಗರದ ವಿವಿಧೆಡೆ ಕುವೆಂಪು ಅವರ ಜೀವನ-ಸಾಧನೆ ಕುರಿತ ಉಪನ್ಯಾಸ, ಗೀತ ಗಾಯನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭಗಳು ನಡೆದವು.  ಗನ್‌ಹೌಸ್‌ ಬಳಿಯ ವಿಶ್ವ ಮಾನವ ಉದ್ಯಾನದಲ್ಲಿರುವ ಕುವೆಂಪು ಪ್ರತಿಮೆ ಮತ್ತು ಮಾನಸ ಗಂಗೋತ್ರಿಯಲ್ಲಿರುವ ಕುವೆಂಪು ಪುತ್ಥಳಿಗೆ ವಿವಿಧ ಸಂಘಟನೆಗಳವರು ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.  

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ಕುವೆಂಪು ಜಯಂತ್ಯುತ್ಸವ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ಕಲಾಮಂದಿರದಲ್ಲಿ ಕುವೆಂಪು ದಿನಾಚರಣೆ ಆಚರಿಸಲಾಯಿತು. ಮೈಸೂರು ಮಹಾ ನಗರಪಾಲಿಕೆ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ವಿಶ್ವಮಾನವ ಉದ್ಯಾನದಲ್ಲಿ ಕುವೆಂಪು ಅವರ 115ನೇ ಜನ್ಮ ದಿನಾಚರಣೆ ಹಾಗೂ ಕುವೆಂಪು ಗೀತ ಗಾಯನ ನಡೆಯಿತು. 

ಜನಚೇತನ ಟ್ರಸ್ಟ್‌ ಹಾಗೂ ಬಿಜೆಪಿ ರೈತ ಮೋರ್ಚಾ ವತಿಯಿಂದ ಕುವೆಂಪು ಜನ್ಮ ದಿನ ಆಚರಣೆ ಅಂಗವಾಗಿ ನೈಸರ್ಗಿಕ ಕೃಷಿಕರಿಗೆ ಸನ್ಮಾನ ಮಾಡಲಾಯಿತು. ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದಲ್ಲಿ ಮೈಸೂರು ಕನ್ನಡ ವೇದಿಕೆ ವತಿಯಿಂದ ಕುವೆಂಪು ಅವರ ಜನ್ಮ ದಿನವನ್ನು ವಿಶೇಷವಾಗಿ ಆಚರಿಸಲಾಯಿತು. ಎಚ್‌.ಡಿ.ಕೋಟೆ ತಾಲೂಕು ಎನ್‌.ಬೇಗೂರು ಸರ್ಕಾರಿ ಶಾಲೆಯ ಗಿರಿಜನ ಮಕ್ಕಳು ಕುವೆಂಪು ರಚನೆಯ ಗೀತೆಗಳು ಹಾಗೂ ರಂಗ ಗೀತೆ ಹಾಡುವ ಮೂಲಕ ನುಡಿ ನಮನ ಸಲ್ಲಿಸಿದರು. 

Advertisement

ಕಾವೇರಿ ಬಳಗ ಮತ್ತು ಹಿರಣ್ಮಯಿ ಪ್ರತಿಷ್ಠಾನದವತಿಯಿಂದ ಡಿ.ಬನುಮಯ್ಯ ಬಾಲಕರ ಪ್ರೌಢಶಾಲೆಯಲ್ಲಿ ವಿಶ್ವ ಮಾನವ ದಿನವನ್ನಾಗಿ ಆಚರಿಸಲಾಯಿತು. ವಿಶ್ವಮಾನವ ವಿದ್ಯಾನಿಕೇತನವತಿಯಿಂದ ವಿಶ್ವ ಮಾನವ ದಿನ ಆಚರಣೆ ಮತ್ತು ಕುವೆಂಪು ವಿರಚಿತ ಗೀತೆಗಳ ಜಿಲ್ಲಾ ಮಟ್ಟದ ಗಾಯನ ಸ್ಪರ್ಧೆ ಆಯೋಜಿಸಲಾಗಿತ್ತು. 

ವಿಶ್ವ ಮಾನವ ಮೈಸೂರು ವಿವಿ ನೌಕರರ ವೇದಿಕೆ ವತಿಯಿಂದ ಕುವೆಂಪು ಜನ್ಮದಿನ ಆಚರಿಸಲಾಯಿತು. ಮಾನಸ ಗಂಗೋತ್ರಿಯ ಮುಖ್ಯದ್ವಾರದಲ್ಲಿರುವ ಕುವೆಂಪು ಪುತ್ಥಳಿಗೆ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್‌ ಕುಮಾರ್‌ ಮಾರ್ಲಾಪಣೆ ಮಾಡಿದರು. ಕುಲಸಚಿವ ಪ್ರೊ.ಆರ್‌.ರಾಜಣ್ಣ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next