ವಿಜಯಪುರ: ಕರ್ನಾಟಕದ ಅಖಂಡತೆ, ಸಾರ್ವಭೌಮತೆಗೆ ರಾಷ್ಟ್ರಕವಿ ಕುವೆಂಪು ಅವರು ನೀಡಿದ ಕೊಡುಗೆ ಅನುಪಮ ಎಂದು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ, ಶಾಸಕ ರಾಜು ಆಲಗೂರ ಅಭಿಪ್ರಾಯಪಟ್ಟರು.
ಶುಕ್ರವಾರ ಜಿಲ್ಲಾಡಳಿತ ನಗರದ ಕಂದಗಲ್ ಹನುಮಂತರಾಯ ಮಂದಿರದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಕವಿ ಕುವೆಂಪು ಜನ್ಮ ದಿನಾಚರಣೆ ಹಾಗೂ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯುಗದ ಕವಿ, ಜಗದ ಕವಿಯಾಗಿರುವ ಕುವೆಂಪು ಕನ್ನಡ ನಾಡು ಕಂಡ ಮಹಾನ್ ಲೇಖಕ. ಕನ್ನಡಕ್ಕೆ ಮೊಟ್ಟ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟು ನಾಡಿನ ಶ್ರೇಷ್ಠ ಹಿರಿಮೆ ದೇಶಕ್ಕೆ ಸಾರಿದ ಮಹಾನ್ ಚೇತನ ಎಂದರು.
ತಮ್ಮ ಪರಿಣಾಮಕಾರಿ ಸಾಹಿತ್ಯದ ಮೂಲಕ ನಾಡಿನ ಜನರಲ್ಲಿ ಆತ್ಮಗಳಲ್ಲಿ ಐಕ್ಯತೆಯ ಮಂತ್ರಬೀಜ ಬಿತ್ತಿದ ರಾಷ್ಟ್ರಕವಿ ಕುವೆಂಪು ಸಮಾನತೆ, ವೈಚಾರಿಕತೆ ಮತ್ತು ವೈಜ್ಞಾನಿಕ ಚಿಂತನೆಗಳ ಮೂಲಕ ಉತ್ತಮ ಸಮಾಜ ರೂಪಿಸಲು ನೆರವಾಗಿದ್ದಾರೆ ಎಂದರು.
ವಿಶ್ವಜ್ಯೋತಿ ಬಸವೇಶ್ವರರು, ದಮನಿತರ ಧ್ವನಿ ಜ್ಯೋತಿಬಾ ಫುಲೆ ಅವರಂಥ ಸಮಾನತೆಯ ಹರಿಕಾರರ ಸಂದೇಶಗಳ ಮೂಲಕ ಸ್ವಸ್ಥ ಸಮಾಜ ಮತ್ತು ಸ್ವಸ್ಥ ರಾಷ್ಟ್ರ ನಿರ್ಮಾಣಕ್ಕಾಗಿ ವಿಶ್ವ ಮಾನವ ಚಿಂತನೆಗಳನ್ನು ಪಸರಿಸಿದರು. ಪ್ರಾಧ್ಯಾಪಕರಾಗಿ, ಸಾಹಿತ್ಯದ ಮೂಲಕವೇ ನಾಡಿನ ಜನಮನಗಳಲ್ಲಿ ಜೀವಂತವಾಗಿದ್ದು ಎಂದಿಗೂ ಚಿರ ಸ್ಮರಣೀಯರಾಗಿದ್ದಾರೆ ಎಂದರು.
ಪತ್ರಕರ್ತ ಪರಶುರಾಮ ಶಿವಶರಣ ಮಾತನಾಡಿದರು. ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ, ಜಿಪಂ ಸಿಇಒ ಎಂ.ಸುಂದರೇಶಬಾಬು, ಉಪ ವಿಭಾಗಾಧಿಕಾರಿ ಶಂಕರ ವಣಕ್ಯಾಳ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ಡಿಡಿಪಿಐ ಪ್ರಸನ್ನಕುಮಾರ, ತಹಶೀಲ್ದಾರ್ ಎಂ.ಎನ್. ಬಳಿಗಾರ ಇದ್ದರು.