ಮಲ್ಪೆ: ಕಡೆಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುತ್ಪಾಡಿ ಬಲಾಯಿಪಾದೆಯ ಗರೋಡಿ ರಸ್ತೆಯ ಬಹುಮಹಡಿ ವಾಣಿಜ್ಯ ಕಟ್ಟಡಗಳ ಡ್ರೈನೇಜ್ ನೀರನ್ನು ಕಟ್ಟಡದ ಹಿಂಬದಿಯ ತೋಡಿಗೆ ಹರಿಸುತ್ತಿದ್ದ, ತ್ಯಾಜ್ಯವನ್ನೂ ಈ ತೋಡಿಗೆ ಹಾಕುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕುತ್ಪಾಡಿ ಗ್ರಾಮದ ಬಲಾಯಿಪಾದೆ ಗ್ರಾಮಸ್ಥರು ಕಡೆಕಾರು ಗ್ರಾ.ಪಂ. ಪಿಡಿಒಗೆ ದೂರು ನೀಡಿದ್ದಾರೆ.
ಡ್ರೈನೇಜ್ ನೀರು ಹಾಗೂ ತ್ಯಾಜ್ಯ ತೋಡಿನಲ್ಲಿ ತುಂಬಿಕೊಂಡು ವಿಪರೀತ ದುರ್ವಾಸನೆ, ನೀರಿನಿಂದ ಉಂಟಾದ ಸೊಳ್ಳೆಗಳ ಕಾಟದಿಂದಾಗಿ ಈ ಪರಿಸರದ ಜನರಿಗೆ ಡೆಂಗ್ಯೂ, ಮಲೇರಿಯಾ ಮೊದಲಾದ ತೀವ್ರವಾದ ಆರೋಗ್ಯ ಸಮಸ್ಯೆ ಉಂಟಾಗಿದೆ. ಈ ದುರ್ವಾಸನೆಯಿಂದ ಪರಿಸರದಲ್ಲಿ ನಡೆದಾಡಲೂ ಆಗುತ್ತಿಲ್ಲ. ಡ್ರೈನೇಜ್ ನೀರಿನಿಂದ ಈ ಭಾಗದ ಬಾವಿಗಳ ನೀರು ಮಲೀನವಾಗಿದೆ.
ಕುತ್ಪಾಡಿ ಗ್ರಾಮದ ಪವಿತ್ರ ವ್ಯಾಘ್ರ ಚಾಮುಂಡಿ ಕ್ಷೇತ್ರದ ಗಡುವಾಡು ಆವರಣ ಈ ತೋಡಿಗೆ ತಾಗಿಕೊಂಡೆ ಇದೆ. ವ್ಯಾಘ್ರ ಚಾಮುಂಡಿ ಗಡುವಾಡು ಆವರಣದಲ್ಲಿ ಪುರಾತನ ಕಾಲದಿಂದಲೂ ಕುತ್ಪಾಡಿ ಗ್ರಾಮದ ಜನರೆಲ್ಲರೂ ಸೇರಿ ಸಂಪ್ರದಾಯ ಪ್ರಕಾರ ವರ್ಷಕ್ಕೆ ಮೂರು ಬಾರಿ ಧಾರ್ಮಿಕ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇದೀಗ ಡ್ರೈನೇಜ್ ನೀರು, ತ್ಯಾಜ್ಯದಿಂದಾಗಿ ಮಲೀನವಾಗಿ ಈ ಭಾಗದ ಜನರ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ.
ಉಗ್ರ ಹೋರಾಟದ ಎಚ್ಚರಿಕೆ
ತತ್‌ಕ್ಷಣ ಡ್ರೈನೇಜ್ ನೀರು, ತ್ಯಾಜ್ಯವನ್ನು ತೋಡಿಗೆ ಹಾಕುತ್ತಿರುವ ಕಟ್ಟಡಗಳ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಂಡು ಕುತ್ಪಾಡಿ ಗ್ರಾಮದ ಈ ಭಾಗದ ಜನರ ಆರೋಗ್ಯ ಸಮಸ್ಯೆ ಹಾಗೂ ಧಾರ್ಮಿಕ ಭಾವನೆಗಳನ್ನು ಮನಗೊಂಡು ಈ ಸಮಸ್ಯೆಯನ್ನು ಕೂಡಲೇ ಸರಿಪಡಿಸಬೇಕು. ಸಮಸ್ಯೆ ಹೀಗೆಯೇ ಮುಂದುವರಿದಲ್ಲಿ ಕುತ್ಪಾಡಿ ಗ್ರಾಮದ ಜನರೆಲ್ಲ ಸೇರಿ ಸಂಬಂಧಪಟ್ಟ ಇಲಾಖೆಯ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು ಎಂದು ದೂರಿನಲ್ಲಿ ತಿಳಿಸಲಾಗಿದೆ.