ಬೆಂಗಳೂರು: ನಿಗದಿಯಾದಂತೆ ದಿವಂಗತ ಐಎಎಸ್ ಅಧಿಕಾರಿ ಡಿ.ಕೆ ರವಿ ಪತ್ನಿ ಕುಸುಮಾ ಇಂದು ಕಾಂಗ್ರಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾದರು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಕಚೇರಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ್, ಸಂಸದ ಡಿ ಕೆ ಸುರೇಶ್ ಉಪಸ್ಥಿತಿಯಲ್ಲಿ ಕುಸುಮಾ ರವಿ ಕಾಂಗ್ರೆಸ್ ಸದಸ್ಯತ್ವ ಸ್ವೀಕರಿಸಿದರು.
ಕುಸುಮಾ ರವಿ ತಂದೆ, ಜೆಡಿಎಸ್ ಮುಖಂಡ ಹನುಮಂತರಾಯಪ್ಪ ಸ್ಥಳದಲ್ಲಿದ್ದರೂ ಕಾಂಗ್ರೆಸ್ ಸೇರ್ಪಡೆಯಾಗಿಲ್ಲ.
ಇದನ್ನೂ ಓದಿ:ಡಿ ಕೆ ರವಿ ಪತ್ನಿ ಕುಸುಮಾ ಇಂದು ಕಾಂಗ್ರೆಸ್ ಸೇರ್ಪಡೆ: ಏನಿದು ಕಾಂಗ್ರೆಸ್ ಹೊಸ ಪ್ಲ್ಯಾನ್?
ಆರ್. ಆರ್. ನಗರ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಕುಸುಮಾ ರವಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಆರ್.ಆರ್.ನಗರದಲ್ಲಿ ಸರ್ಪ್ರೈಸ್ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಈ ಹಿಂದೆ ಹೇಳಿದ್ದು, ಆ ಸರ್ಪ್ರೈಸ್ ಅಭ್ಯರ್ಥಿ ಕುಸುಮಾ ರವಿ ಅವರೇ ಎನ್ನಲಾಗಿದೆ.
ಡಿಕೆ ಶಿವಕುಮಾರ್, ಸಿದ್ದರಾಮಯ್ಯ, ರಾಮಲಿಂಗಾ ರೆಡ್ಡಿ ಮುಂತಾದವರು ಸೇರಿ ಅಭ್ಯರ್ಥಿಯ ಬಗ್ಗೆ ಅಂತಿಮ ನಿರ್ಧಾರ ಮಾಡಲಿದ್ದಾರೆ. ನಂತರ ಹೈಕಮಾಂಡ್ ಜೊತೆ ಚರ್ಚಿಸಿ ಅಂತಿಮವಾಗಿ ಘೋಷಣೆ ಮಾಡಲಿದ್ದಾರೆ.
ಕುಸುಮಾ ಅವರು ಚುನಾವಣೆಯಲ್ಲಿ ತನ್ನ ಮಗನ ಹೆಸರು ಹೇಳಿ ಮತ ಕೇಳಬಾರದು. ಚುನಾವಣೆ ಸಮಯದಲ್ಲಿ ನನ್ನ ಹೆಸರು ಬಳಸಿದರೆ ನಾನು ಸುಮ್ಮನಿರುವುದಿಲ್ಲ ಎಂದು ಡಿಕೆ ರವಿ ತಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.