Advertisement

ಕುಸುಮಾ ಸಹಿತ ಹಲವರು ಕಾಂಗ್ರೆಸ್‌ಗೆ

02:39 AM Oct 05, 2020 | Hari Prasad |

ಬೆಂಗಳೂರು: ದಿವಂಗತ ಐಎಎಸ್‌ ಅಧಿಕಾರಿ ಡಿ.ಕೆ. ರವಿ ಅವರ ಪತ್ನಿ ಕುಸುಮಾ ಅವರು ರವಿವಾರ ಕಾಂಗ್ರೆಸ್‌ ಸೇರಿದರು.

Advertisement

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪಕ್ಷದ ಸದಸ್ಯತ್ವ ನೀಡಿ, ಶಾಲು ಹಾಕಿ ಸ್ವಾಗತಿಸಿದರು.

ಆದರೆ, ಅಭ್ಯರ್ಥಿಯಾಗಿ ಘೋಷಣೆಯಾಗುವವರೆಗೂ ಯಾವುದೇ ಮಾಧ್ಯಮಗಳ ಜತೆ ಮಾತನಾಡದಂತೆ ಸೂಚನೆ ನೀಡಿದ್ದಾರೆ.

ಇದೇ ಸಂದರ್ಭದಲ್ಲಿ ಶಿರಾ ಕ್ಷೇತ್ರದ 90ಕ್ಕೂ ಹೆಚ್ಚು ವಕೀಲರು ಹಾಗೂ ಕ್ಷೇತ್ರದ ಜೆಡಿಎಸ್‌ ಮುಖಂಡರು ಕಾಂಗ್ರೆಸ್‌ ಸೇರ್ಪಡೆಗೊಂಡರು.

ಎರಡು ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡ್‌ಗೆ ಕಳುಹಿಸಲಾಗಿದ್ದು, ಶಿರಾಕ್ಕೆ ಮಾಜಿ ಸಚಿವ ಟಿ.ಬಿ. ಜಯಚಂದ್ರ ಹಾಗೂ ರಾಜರಾಜೇಶ್ವರಿ ನಗರಕ್ಕೆ ಕುಸುಮಾ ಎಚ್‌., ಎಚ್‌.ಸಿ. ಬಾಲಕೃಷ್ಣ ಹಾಗೂ ರಕ್ಷಾ ರಾಮಯ್ಯ ಅವರ ಹೆಸರು ಹಾಗೂ ಆಗ್ನೇಯ ಪದವೀಧರ ಕ್ಷೇತ್ರಕ್ಕೆ ರಮೇಶ್‌ ಬಾಬು ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ ಎಂದು ತಿಳಿದು ಬಂದಿದೆ.

Advertisement

ಈ ಸಂದರ್ಭ ಮಾತನಾಡಿದ ಡಿ.ಕೆ. ಶಿವಕುಮಾರ್‌, ಅಭ್ಯರ್ಥಿಗಳ ಪಟ್ಟಿಯನ್ನು ದಿಲ್ಲಿಗೆ ಶಿಫಾರಸು ಮಾಡಲಾಗುವುದು ಹಾಗೂ ಹೈಕಮಾಂಡ್‌ ಅಂತಿಮಗೊಳಿಸಲಿದೆ. ಶಿರಾದಲ್ಲಿ ಈ ಹಿಂದೆ ಜಯಚಂದ್ರ ಅವರು 10 ಸಾವಿರ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದರು. ಆದರೆ ಈಗ ಇಡೀ ಜಿಲ್ಲೆಯ ನಾಯಕರು ಒಂದಾಗಿದ್ದಾರೆ.

ರಾಜ್ಯ ಸರಕಾರದ ಬೆಳವಣಿಗೆಗಳಿಂದ ಬೇಸತ್ತು ಹಲವಾರು ಮಂದಿ ಮುಖಂಡರು ಕಾಂಗ್ರೆಸ್‌ ಸೇರಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನೂರು ಜನ ಮುಖಂಡರು ಪಕ್ಷಕ್ಕೆ ಸೇರಿದ್ದಾರೆ. ಮುಂದಿನ ದಿನಗಳಲ್ಲಿ ಸಾವಿರಾರು ಜನ ಪಕ್ಷ ಸೇರಲಿದ್ದಾರೆ ಎಂದು ಹೇಳಿದರು. ಕಾರ್ಯಾಧ್ಯಕ್ಷ ಸಲೀಂ ಅಹಮದ್‌, ಸಂಸದ ಡಿ.ಕೆ. ಸುರೇಶ್‌, ಬೆಂಗಳೂರು ಉತ್ತರ ಜಿಲ್ಲೆ ಕಾಂಗ್ರೆಸ್‌ ಅಧ್ಯಕ್ಷ ರಾಜಕುಮಾರ್‌, ಕುಸುಮಾ ಅವರ ತಂದೆ ಹನುಮಂತರಾಯಪ್ಪ ಮತ್ತಿತರರಿದ್ದರು.


ಶುಭ ಗಳಿಗೆಗೆ ಕಾದ ಕುಸುಮಾ
ಕಾಂಗ್ರೆಸ್‌ ಪಕ್ಷ ಸೇರಲು ಕೆಪಿಸಿಸಿ ಕಚೇರಿಗೆ ಆಗಮಿಸಿದ್ದ ಕುಸುಮಾ ಎಚ್‌. ಅವರು ಶುಭ ಗಳಿಗೆಗಾಗಿ ಸುಮಾರು ಒಂದು ಗಂಟೆ ಕಾಲ ಕಾದು ಕುಳಿತರು. ಬೆಳಗ್ಗೆ 10.40ಕ್ಕೆ ತಂದೆಯೊಂದಿಗೆ ಕೆಪಿಸಿಸಿ ಕಚೇರಿಗೆ ಆಗಮಿಸಿದ್ದ ಅವರು 11.45ಕ್ಕೆ ಪಕ್ಷದ ಸದಸ್ಯತ್ವವನ್ನು ಸ್ವೀಕರಿಸಿದರು. ಕುಸುಮಾ ತಮ್ಮ ಸದಸ್ಯತ್ವ ಪತ್ರದಲ್ಲಿ ಕುಸುಮಾ ಎಚ್‌. ಎಂದು ತಮ್ಮ ತಂದೆಯ ಹೆಸರನ್ನೇ ನಮೂದಿಸಿದ್ದಾರೆ. ಕುಸುಮಾ ಅವರ ತಂದೆ ಹನುಮಂತರಾಯಪ್ಪ ಕಾಂಗ್ರೆಸ್‌ ಸದಸ್ಯತ್ವ ಸ್ವೀಕರಿಸಿಲ್ಲ. ಜೆಡಿಎಸ್‌ ಸದಸ್ಯರಾಗಿಯೇ ಮುಂದುವರಿದಿದ್ದಾರೆ.

ನಮ್ಮಲ್ಲಿ ಸಣ್ಣಪುಟ್ಟ ವ್ಯತ್ಯಾಸ ಇದ್ದಿದ್ದು ನಿಜ. ನಾವೆಲ್ಲ ಒಟ್ಟಾಗಿ ಕೆಲಸ ಮಾಡಿದರೆ ಗೆಲುವು ಕಷ್ಟವಲ್ಲ. ಹಾಗೆಂದು ಗೆಲುವು ಸುಲಭವೂ ಇಲ್ಲ. ಬಿಜೆಪಿಯವರು ಹಣ ಹಂಚಿ ಗೆಲ್ಲುವ ಶಕ್ತಿ ಹೊಂದಿದ್ದಾರೆ. ಜನರು ಹಣದ ಹಿಂದೆ ಹೋಗದಂತೆ ನೋಡಿಕೊಳ್ಳಬೇಕು.
– ಡಾ| ಜಿ.ಪರಮೇಶ್ವರ್‌, ಮಾಜಿ ಉಪ ಮುಖ್ಯಮಂತ್ರಿ.

Advertisement

Udayavani is now on Telegram. Click here to join our channel and stay updated with the latest news.

Next