ಹುಬ್ಬಳ್ಳಿ: ಒಂದು ವರ್ಷದಲ್ಲಿ ಕುಸುಗಲ್ಲ-ಅಂಚಟಗೇರಿ ಬೈಪಾಸ್ ರಸ್ತೆ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.
ಅಂಚಟಗೇರಿಯಿಂದ ಕುಸುಗಲ್ಲ ರಸ್ತೆವರೆಗೂ ಬೈಪಾಸ್ ರಸ್ತೆ ಕಾಮಗಾರಿ ವೀಕ್ಷಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಯೋಜನೆ ತಯಾರಿಸುವಲ್ಲಿ ಸಾಕಷ್ಟು ಗೊಂದಲಗಳನ್ನು ಸೃಷ್ಟಿಸಲಾಗಿತ್ತು. ನಂತರದಲ್ಲಿ ಸಂಪೂರ್ಣ ಪರಿಶೀಲಿಸಿ ಯೋಜನೆ ಸಿದ್ಧಪಡಿಸಿದ ಪರಿಣಾಮ ಕೇಂದ್ರ ಸರಕಾರ ಒಪ್ಪಿಗೆ ನೀಡಿದೆ. ಮೂಲ ಯೋಜನೆಯಲ್ಲಿ ನೇಕಾರನಗರ-ತಿಮ್ಮಸಾಗರ ಒಳಸೇತುವೆ ನಮೂದಿಸದ ಪರಿಣಾಮ ಅನುಮತಿ ದೊರೆತಿಲ್ಲ. ಈ ಕುರಿತು ಶೀಘ್ರದಲ್ಲಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ಇದಕ್ಕೆ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.
ಭೂ ಸ್ವಾಧೀನ ಬಾಕಿ: ಶೇ.60 ಕಾಮಗಾರಿ ಪೂರ್ಣಗೊಂಡಿದ್ದು, ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಜಂಕ್ಷನ್ ನಿರ್ಮಾಣಕ್ಕೆ ಬೇಕಾದ ಭೂ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಈ ಕುರಿತು ಜಿಲ್ಲಾಧಿಕಾರಿಯೊಂದಿಗೆ ಸಭೆ ಮಾಡಲಾಗುವುದು. ಬೈಪಾಸ್ ರಸ್ತೆ ಕಾಮಗಾರಿಗೆ ಭೂಸ್ವಾಧೀನ ಪಡಿಸಿಕೊಳ್ಳದೆ ಕಾಮಗಾರಿ ನಡೆಸುತ್ತಿದ್ದರೆ ರೈತರು ಜಿಲ್ಲಾಧಿಕಾರಿಗೆ ದೂರು ನೀಡಿ ಆ ಪ್ರತಿಯೊಂದನ್ನು ನನಗೆ ಕೊಡಬಹುದು. ಅನ್ಯಾಯಕ್ಕೊಳಗಾದ ರೈತರಿಗೆ ನ್ಯಾಯ ಕೊಡಿಸುವ ಪ್ರಾಮಾಣಿಕ ಕೆಲಸ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು. ಮಾವನೂರು ಗ್ರಾಮದ ಜನತೆ ಬೈಪಾಸ್‌ಗೆ ಸಂಪರ್ಕ ಕಲ್ಪಿಸುವ ಬೇಡಿಕೆಯನ್ನು ಪರಿಗಣಿಸಲಾಗುವುದು ಎಂದರು.
ದಿಟ್ಟ ಕ್ರಮ ಕೈಗೊಳ್ಳಲಿ: ನಗರದ ಅಭಿವೃದ್ಧಿ ದೃಷ್ಟಿಯಿಂದ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿ ಒತ್ತುವರಿಯನ್ನು ಮುಲಾಜಿಯಿಲ್ಲದೇ ತೆರವುಗೊಳಿಸಬೇಕು. ಅಧಿಕಾರಿಗಳ ನಿರ್ಲಕ್ಷ್ಯದಿಂದ ನಗರದ ಅಭಿವೃದ್ಧಿ ಕುಂಠಿತವಾಗುತ್ತಿದೆ. ಯಾವುದೇ ಧರ್ಮದ ಧಾರ್ಮಿಕ ಕೇಂದ್ರಗಳಿದ್ದರೂ ತೆರವುಗೊಳಿಸಬೇಕು. ಯಾವುದೇ ಕಾರಣಕ್ಕೂ ಅಧಿಕಾರಿಗಳು ನುಣಚಿಕೊಳ್ಳುವ ಕೆಲಸ ಮಾಡಬಾರದು ಎಂದು ಸಚಿವ ಜೋಶಿ ಸೂಚಿಸಿದರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಅಧಿಕಾರಿಗಳಾದ ಎನ್.ಎಂ. ಕುಲಕರ್ಣಿ, ಕೃಷ್ಣರೆಡ್ಡಿ, ಬಿ.ಕೆ. ಸಿಂಗ್, ವಿಠuಲ ಪಡಸಲಗಿ ಇನ್ನಿತರರಿದ್ದರು.