ಕುಷ್ಟಗಿ : ಇಲ್ಲಿನ ಕೆಇಬಿ ಪಕ್ಕದ ಪುರಸಭೆ 16 ವಾಣಿಜ್ಯ ಮಳಿಗೆಗಳಿಗೆ ಮೇ 11ರಂದು ನಿಗದಿಯಾಗಿದ್ದ ಟೆಂಡರ್ ಪ್ರಕ್ರಿಯೆಗೆ ಕುಷ್ಟಗಿ ನ್ಯಾಯಾಲಯ ತಡೆಯಾಜ್ಞೆ ವಿಧಿಸಿದೆ.
ಕುಷ್ಟಗಿ ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಕೆಇಬಿ ಪಕ್ಕದ ವಾಣಿಜ್ಯ ಮಳಿಗೆಗಳಿರುವ ಸ.ನಂ. 50/2, 6 ಎಕರೆ 12 ಗುಂಟೆ ಜಮೀನು ಮೂಲ ಮಾಲೀಕರದ ರಾಘವೇಂದ್ರ ಕುಲಕರ್ಣಿ ಹೆಸರಿನಲ್ಲಿದೆ. ಇವರು ನಿಧನದ ಬಳಿಕ, ಅವರ ಪುತ್ರ ಹನುಮಂತರಾವ್ ಕುಲಕರ್ಣಿ ಹೆಸರಿನಲ್ಲಿದೆ. ಜಾಗೆ ಓರ್ವ ವ್ಯಕ್ತಿಯ ಒಡೆತನದಲ್ಲಿದೆ. ಸದರಿ ಜಮೀನಿಲ್ಲಿ 16 ಮಳಿಗೆಗಳಿವೆ. ಪುರಸಭೆಗೆ ಸೇರಿದ್ದು ಎನ್ನುವ ಬಗ್ಗೆ ಪುರಸಭೆಯಲ್ಲಿ ಸಂಬಂಧಿತ ದಾಖಲೆಗಳಿಲ್ಲ ಎನ್ನುವುದು ಮಾಹಿತಿ ಹಕ್ಕು ಕಾಯ್ದೆ ಅಡಿ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಸದರಿ ಪುರಸಭೆ ಮಳಿಗೆಗಳು ಇರುವ ಜಾಗೆ ನಮ್ಮ ಸ್ವಾಧೀನಕ್ಕೆ ಸೇರಿದ್ದು, ತೆರವುಗೊಳಿಸಲು ಸದರಿ ಜಮೀನಿನ ಮಾಲೀಕರು ಕೋರ್ಟ ಮೆಟ್ಟಿಲೇರಿದ್ದರು.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಕೋರ್ಟ ಮೇ 15ರಂದು ನಿಗದಿಯಾಗಿದ್ದ 16 ವಾಣಿಜ್ಯ ಮಳಿಗೆಗಳಿಗೆ ಟೆಂಡರ್ ಪ್ರಕ್ರಿಯೆಗೆ ತಡೆಯಾಜ್ಞೆ ವಿಧಿಸಿದೆ. ನ್ಯಾಯಾಲಯ ರಜೆ ಮತ್ತು ತುರ್ತುಸ್ಥಿತಿ ದೃಷ್ಟಿಯಿಂದ ಟೆಂಡರ್ ಅಧಿಸೂಚನೆಯನ್ನು ಸದ್ಯಕ್ಕೆ ಮುಂದೂಡುವುದು ಅವಶ್ಯಕ ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಸದರಿ ಟೆಂಡರ್ ಅನ್ನು ಮುಂದಿನ ವಿಚಾರಣೆಗೆ ಮುಂದೂಡಲು ಸೂಚಿಸಿದ ಎಂದು ಜಿಪಿಎ ಹೋಲ್ಡರ್ ಸಯ್ಯದ್ ಮುರ್ತುಜಾ ತಿಳಿಸಿದ್ದಾರೆ.
ಈ ಕುರಿತು ಪುರಸಭೆ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ ಅವರು ಪ್ರತಿಕ್ರಿಯಿಸಿ, ನಮ್ಮ ಪುರಸಭೆ ಕಾನೂನು ಸಲಹೆಗಾರ ವಕೀಲರು ಸದರಿ ಪ್ರಕರಣಕ್ಕೆ ಸಂಬಂದಿಸಿದಂತೆ ಕೆವಿಯಟ್ ಅರ್ಜಿ ಸಲ್ಲಿಸಿದ್ದರು. ಅದು ಗಂಗಾವತಿ ಕೋರ್ಟ ನಲ್ಲಿ ತಿರಸ್ಕೃತವಾಗಿದೆ. ಸಂಬಂಧಿಸಿದ ವಾದಿಗಳು ಕೊಪ್ಪಳದ ರಜೆಯ ಕೋರ್ಟ ನಲ್ಲಿ ಸದರಿ ಟೆಂಡರ್ ಪ್ರಕ್ರಿಯೆ ತಡೆಯ ಅರ್ಜಿ ಸಲ್ಲಿಸಿದ್ದರು. ಸದರಿ ಕೋರ್ಟ ಮೇ.26ರವರೆಗೆ ಟೆಂಡರ್ ಪ್ರಕ್ರಿಯೆ ಮೂಂದೂಡಿರುವ ಬಗ್ಗೆ ಮಾಹಿತಿ ಇದೆ ಎಂದರು.
ಇದನ್ನೂ ಓದಿ : ರಾಜ್ಯ ಚುನಾವಣೆಗೆ ರಣಕಹಳೆ: ಉಡುಪಿಯಲ್ಲಿ ಮೊಳಗಿತು ಬಿಜೆಪಿಯ ಸಂಘಟನಾತ್ಮಕ ಪಾಂಚಜನ್ಯ