ಕುಷ್ಟಗಿ: ಕುಷ್ಟಗಿ ತಾಲೂಕಿನ ಕುಂಬಳಾವತಿ ಗ್ರಾಮದ ಶ್ರೀ ದ್ಯಾಮವ್ವ ದೇವಿ, ದೊಣ್ಣೆಗುಡ್ಡ ಗ್ರಾಮದ ದುರ್ಗಾದೇವಿ ಹಾಗೂ ಮದನಾಳ, ಯರಗೇರಾ ದ್ಯಾಮಾಂಬಿಕಾದೇವಿ ಜಾತ್ರಾ ಮಹೋತ್ಸವದಲ್ಲಿ ಪ್ರಾಣಿಬಲಿ ನಿಷೇಧದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ ಎಂ.ಸಿದ್ದೇಶ ತಿಳಿಸಿದರು.
ಫೆ.23ರಿಂದ ಫೆ.24ರವರೆಗೆ ಕುಂಬಳಾವತಿ ಗ್ರಾಮದ ದ್ಯಾಮಮ್ಮ ದೇವಿ, ಫೆ.22ರಿಂದ ಫೆ.25ರವರೆಗೆ ಯರಗೇರಾ. ಮದನಾಳ ಗ್ರಾಮಗಳಲ್ಲಿ ದ್ಯಾಮಾಂಬಿಕಾದೇವಿ ಜಾತ್ರೆ, ಮಾ.3ರಿಂದ ಮಾ. 4ರವರೆಗೆ ದೊಣ್ಣೆಗುಡ್ಡ ಜಾತ್ರಾ ಮಹೋತ್ಸವ ನಿಗದಿಯಾಗಿದೆ.
ಈ ಜಾತ್ರಾ ಮಹೋತ್ಸವಗಳಲ್ಲಿ ಪ್ರಾಣಿಬಲಿ ನಡೆಸದಂತೆ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸದಂತೆ ಪೂರ್ವಭಾವಿ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ : ಶಿವಮೊಗ್ಗದಲ್ಲಿ 2 ದಿನ ಕರ್ಫ್ಯೂ ವಿಸ್ತರಣೆ; ಶಾಲಾ -ಕಾಲೇಜುಗಳಿಗೆ ರಜೆ
ದೇವರ ಹೆಸರಿನಲ್ಲಿ ಪ್ರಾಣಿ ಬಲಿ ಕೊಡುವ ಪದ್ದತಿಯ ಕರ್ನಾಟಕ ಪ್ರಾಣಿ ಬಲಿ ನಿಷೇಧ ಕಾಯಿದೆ 1959, ಕರ್ನಾಟಕ ಪ್ರಾಣಿ ಬಲಿ ನಿಷೇಧ ನಿಯ, 1963ರ ಪ್ರಕಾರ ಶಿಕ್ಷಾರ್ಹ ಅಪರಾದವಾಗಿದೆ. ಈ ಪದ್ದತಿ ಆಚಾರಣೆಯಿಂದ ಜನರ ಮೌಢ್ಯತೆ ತಡೆಯುವುದು, ಪ್ರಾಣಿ ಬಲಿಯಂತಹ ಕ್ರೂರ, ಅವೈಜ್ಞಾನಿಕವಾಗಿದ್ದು ಸಾಂಕ್ರಾಮಿಕ ರೋಗಗಳನ್ನು ಹರಡುವುದಕ್ಕೆ ಕಾರಣವಾಗುತ್ತಿದೆ, ಈ ನಿಷೇಧದ ಹೊರತಾಗಿಯೂ ಆಡು, ಕುರಿ, ಕೋಳಿ, ಕೋಣ ಈ ಪ್ರಾಣಿಗಳ ಹತ್ಯೆ ನಡೆಯುತ್ತದೆ ಎಂದು ಬೆಂಗಳೂರಿನ ವಿಶ್ವಪ್ರಾಣಿ ಕಲ್ಯಾಣ ಸಂಘದ ದಯಾನಂದ ಸ್ವಾಮೀಜಿ ತಿಳಿಸಿದರು.
ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಮಾತನಾಡಿ, ಈ ದೇವಸ್ಥಾನಗಳ ಸುತ್ತಲೂ ಹಾಗೂ ಹತ್ತಿರದ ಜಮೀನುಗಳಲ್ಲೂ ಪ್ರಾಣಿ ಬಲಿ ನಿಷೇಧಿಸಿದ ಆದೇಶ ಪಾಲಿಸಬೇಕು. ಉಲ್ಲಂಘಿಸುವಂತಿಲ್ಲ ಎಂದು ತಿಳಿಸಿದರು.
ಇದೇ ವೇಳೆ ಜಾತ್ರೋತ್ಸವದಲ್ಲಿ ಪ್ರಾಣಿ ಬಲಿ ನಿಷೇಧದ ಹಿನ್ನೆಲೆಯಲ್ಲಿ ಜಾಗೃತ ವಾಹಿನಿಗೆ ಚಾಲನೆ ನೀಡಲಾಯಿತು.