ಕುಷ್ಟಗಿ: ಶಿಕ್ಷಕನೋರ್ವ ಶಾಲೆಗೆ ಗೈರಾಗಿ ಕಂಠ ಪೂರ್ತಿ ಕುಡಿದು, ಎಣ್ಣೆ ಮತ್ತಿನಲ್ಲಿ ತೂರಾಡಿಕೊಂಡು ಹೋಗುವಾಗ ಬಿದ್ದು ತಲೆಗೆ ಗಾಯ ಮಾಡಿಕೊಂಡಿರುವ ಘಟನೆ ನಡೆದಿದೆ.
ತಾಲೂಕಿನ ಚಿಕ್ಕನಂದಿಹಾಳ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸೇವೆಯಲ್ಲಿರುವ ಕೃಷ್ಣೇಗೌಡ ಎಂದು ಗುರುತಿಸಲಾಗಿದೆ. ಈ ಶಿಕ್ಷಕ ಮೂಲತಃ ಹಾಸನ ಜಿಲ್ಲೆಯವರಾಗಿದ್ದು, ಪರಸ್ಪರ ವರ್ಗವಣೆ ಮೇರೆಗೆ ಚಿಕ್ಕನಂದಿಹಾಳ ಶಾಲೆಗೆ ಕಳೆದ ಒಂದು ವರ್ಷದಿಂದ ಶಿಕ್ಷಕ ಸೇವೆಯಲ್ಲಿರುವ ಶಿಕ್ಷಕನ ಕುಡಿತದ ದುರ್ವರ್ತನೆಗೆ ನಾಗರೀಕ ಸಮಾಜ ತಲೆತೆಗ್ಗಿಸುವಂತಾಗಿದೆ.
ಬುಧವಾರ ಕುಷ್ಟಗಿ ಬಸ್ ನಿಲ್ದಾಣದ ಬಳಿ ಮಧ್ಯಾಹ್ನದ ವೇಳೆ ಸದರಿ ಶಿಕ್ಷಕ ಕೃಷ್ಣೆಗೌಡ, ಕಂಠ ಪೂರ್ತಿ ಕುಡಿದು, ತೂರಾಡಿಕೊಂಡು ಬಸ್ ನಿಲ್ದಾಣದ ಬಳಿ ಎಡವಿ ಬಿದ್ದು ತಲೆಗೆ ಗಾಯ ಮಾಡಿಕೊಂಡಿದ್ದಾರೆ. ಸ್ಥಳೀಯರು ಕೂಡಲೇ 108 ಆ್ಯಂಬ್ಯುಲೆನ್ಸ್ ಗೆ ಕರೆ ಮಾಡಿ ತಿಳಿಸಿದ್ದರಿಂದ ಸದರಿ ವಾಹನ ಕೂಡಲೇ ಆಗಮಿಸಿ, ಸ್ಥಳೀಯ ಸರ್ಕಾರೀ ಆಸ್ಪತ್ರೆಗೆ ಕರೆದೊಯ್ದರು. ಆ ವೇಳೆ ಆರೋಗ್ಯ ಸಹಾಯಕರು, ತಲೆಯ ಗಾಯಕ್ಕೆ ಚಿಕಿತ್ಸೆ ನೀಡಲು ಬೆಡ್ ನತ್ತ ಕರೆದೊಯ್ಯಲು ಯತ್ನಿಸಿದಾಗ, ಕುಡಿದ ಮತ್ತಿನಲ್ಲಿದ್ದ ಶಿಕ್ಷಕ ಅವರಿಂದ ಅವರ ಕೈಯಿಂದ ತಪ್ಪಿಸಿಕೊಂಡು ಚಿಕಿತ್ಸೆಗೆ ನಿರಾಕರಿಸಿದ್ದಾರೆ. ಈ ವೇಳೆ ಆರೋಗ್ಯ ಸಹಾಯಕರಿಗೆ ಬೈದರೂ, ಸಹಿಸಿಕೊಂಡು, ತಲೆಯ ಗಾಯಕ್ಕೆ ಚಿಕಿತ್ಸೆಗಾಗಿ ಎತ್ತಿ ಬೆಡ್ ಮೇಲೆ ಮಲಗಿಸಿದರಾದರೂ ಚಿಕಿತ್ಸೆಗೆ ಸಹಕರಿಸದೆ ಹೊರ ನಡೆದಿದ್ದರಿಂದ ಆರೋಗ್ಯ ಸಹಾಯಕರು ಅಸಹಾಯಕರಾಗಿದ್ದು ಕಂಡು ಬಂತು.
ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡಿಕೊಂಡಿರಬೇಕಾದ ಶಿಕ್ಷಕ ಕೃಷ್ಣೆಗೌಡ, ಗೈರಾಗಿ ಕುಷ್ಟಗಿ ಪಟ್ಟಣದಲ್ಲಿ ಕುಡುಕನಂತೆ ತೂರಾಡಿಕೊಂಡಿರುವ ನಡವಳಿಕೆಗೆ ಸಾರ್ವಜನಿಕರ ಶಾಪಕ್ಕೆ ಗುರಿಯಾಗಿದ್ದಾನೆ.
ಚಿಕ್ಕನಂದಿಹಾಳ ಶಾಲೆಗೆ ಪರಸ್ಪರ ವರ್ಗಾವಣೆ ಮೇರೆಗೆ ಶಿಕ್ಷಕ ಸೇವೆಯಲ್ಲಿದ್ದು, ಪದೇ ಪದೇ ಗೈರು ಹಿನ್ನೆಲೆಯಲ್ಲಿ ನೋಟೀಸ್ ನೀಡಿ, ವೇತನ ತಡೆಹಿಡಿಯಲಾಗಿತ್ತು, ಈ ಪ್ರಕರಣದ ಹಿನ್ನೆಲೆಯಲ್ಲಿ ಕ್ರಮ ಜರುಗಿಸಬೇಕಿದೆ. ಗುರುವಾರ ಸಿಆರ್ ಪಿ ಶಾಲೆಗೆ ಸ್ಥಾನಿಕ ಭೇಟಿ ನೀಡಿ ವಿಚಾರಣೆ ನಡೆಸಿ ವರದಿ ಸಲ್ಲಿಸಲು ಸೂಚಿಸಿದ್ದೇನೆ.
– ಸುರೇಂದ್ರ ಕಾಂಬ್ಳೆ, ಕ್ಷೇತ್ರ ಶಿಕ್ಷಣಾಧಿಕಾರಿ ಕುಷ್ಟಗಿ
ಇದನ್ನೂ ಓದಿ: ಚಾಮರಾಜನಗರ: ಕೆ.ಗುಡಿ ಸಫಾರಿಯಲ್ಲಿ ಹುಲಿ ದರ್ಶನ… ಗಾಯಗೊಂಡಿರುವ ಶಂಕೆ