ಕುಷ್ಟಗಿ : ಕುಷ್ಟಗಿ ಹೊರವಲಯದ ರಾಷ್ಟ್ರೀಯ ಹೆದ್ದಾರಿ-50ರ ಕೃಷ್ಟಗಿರಿ ಅಂಡರಪಾಸ್ ಬಳಿ, ಅವೈಜ್ಞಾನಿಕ ಹೆದ್ದಾರಿ ಕಾಮಗಾರಿಯಿಂದ ನಿಯಂತ್ರಣ ಕಳೆದುಕೊಂಡ ಕಾರೊಂದು ಪಲ್ಟಿಯಾಗಿದ್ದು, ಕಾರಿನಲ್ಲಿದ್ದ ಮೂವರು ಕೂದಲೆಳೆಯ ಅಂತರದಲ್ಲಿ ಪಾರಾದ ಘಟನೆ ನಡೆದಿದೆ.
ಶನಿವಾರ ಸುರಿದ ಧಾರಾಕಾರ ಮಳೆಯ ಸಂದರ್ಭದಲ್ಲಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆಯ ಡೌನಲ್ ನಲ್ಲಿ ಈ ಅವಘಡ ಸಂಭವಿಸಿದೆ.
ಹೆದ್ದಾರಿಯಲ್ಲಿ ನೀರು ನಿಂತ ಪರಿಣಾಮ ಕಾರು ಚಾಲಕನ ನಿಯಂತ್ರಣ ತಪ್ಪಿ ತಡೆ ಗೋಡೆಗೆ ಗುದ್ದಿ, ಕಬ್ಬಿಣದ ಗ್ಯಾಲರಿಗೆ ಢಿಕ್ಕಿ ಹೊಡೆದು ಪಲ್ಲಿಯಾಗಿ ನಜ್ಜು ಗುಜ್ಜಾಗಿ ಬಿದ್ದಿದೆ. ಘಟನೆ ನಡೆದ ವೇಳೆ ಜೀವ ರಕ್ಷಕ ಏರ್ ಬ್ಯಾಗ್ ಬಲೂನು ತೆರೆದುಕೊಂಡಿದ್ದರಿಂದ ಕಾರಿನಲ್ಲಿದ್ದವರು ಬದುಕುಳಿಯಲು ಸಾಧ್ಯವಾಗಿದೆ.
ಕಾರಿನಲ್ಲಿದ್ದವರನ್ನು ಹೊರಗೆ ಎಳೆದು ಆಸ್ಪತ್ರೆಗೆ ಸಾಗಿಸಲು ಸ್ಥಳೀಯರು ಸಹಾಯಕ್ಕೆ ಬಂದಿದ್ದಾರೆ. ಘಟನೆ ವೇಳೆ ಕಾರಿನಲ್ಲಿದ್ದ ಚಾಲಕ ಸೇರಿದಂತೆ ಮೂವರು ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಾಳುಗಳ ವಿವರ ಇನ್ನಷ್ಟೇ ತಿಳಿದುಬರಬೇಕಾಗಿದೆ.
ಇದನ್ನೂ ಓದಿ : ಅಂಗಾಂಗ ದಾನ ಮಾಡಿ ನಾಲ್ವರ ಜೀವ ಉಳಿಸಿದ ಹಳ್ಳಿ ಯುವಕ