ಕುಷ್ಟಗಿ: ಹಳೆಯ ಶೌಚಾಲಯ ಗೋಡೆಯ ಪಕ್ಕ ಬಹಿರ್ದೆಸೆ ಕುಳಿತ ಮಹಿಳೆಯರ ಮೇಲೆ ಶೌಚಾಲಯದ ಗೋಡೆ ಕುಸಿದು ಇಬ್ಬರು ದುರಂತ ಸಾವನಪ್ಪಿದ ಪ್ರಕರಣ ಕುಷ್ಟಗಿ ತಾಲೂಕಿನ ತಾವರಗೇರಾದಲ್ಲಿ ನಡೆದಿದೆ.
ತಾವರಗೇರಾದ ಮಸೀದಿ ಮುಂದಿನ ಕುರುಬರ ಓಣಿ ಮಹಿಳಾ ಶೌಚಾಲಯದ ಶಿಥಿಲ ಗೋಡೆ ಇಬ್ಬರನ್ನು ಬಲಿ ಪಡೆದಿದೆ. ಗೋಡೆ ಕುಸಿದು ಅಸ್ವಸ್ಥಗೊಂಡ ಮತ್ತೊಬ್ಬ ಮಹಿಳೆಯ ಚಿಂತಾಜನಕವಾಗಿದ್ದು ಹೆಚ್ಚಿನ ಚಿಕಿತ್ಸೆಗೆ ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹಿಳಾ ಶೌಚಾಲಯ ಕಳೆದ ಹಲವು ತಿಂಗಳಿನಿಂದ ಶಿಥಿಲ ಗೊಂಡಿತ್ತು. ಶೌಚಾಲಯದೊಳಗ ಹೋಗದಂತೆ ಪಟ್ಟಣ ಪಂಚಾಯತಿ ನಿರ್ಭಂದಿಸಿತ್ತು. ಓಣಿಯ ಮಹಿಳೆಯರು ಸಹ ಅಲ್ಲಿ ಶೌಚಕ್ಕೆ ಹೋಗುವದನ್ನು ನಿಲ್ಲಿಸಿದ್ದರು. ಕಳೆದ ಒಂದು ವಾರದಿಂದ ಮಳೆಯಾದ ಪರಿಣಾಮ ಗೋಡೆ ನೆನೆದು ಇಂದು ಏಕಾಏಕಿ ಕುಸಿದಿದೆ. ರಾತ್ರಿ ಯಾಗಿದ್ದ ಕಾರಣ ಮಹಿಳೆಯರು ಹಳೇ ಶೌಚಾಲಯದಲ್ಲಿ ಹೋಗಿದ್ದರೆಂದು ಗೊತ್ತಾಗಿದೆ.
ಮೃತ ಮಹಿಳೆ ಭಾನುಬೇಗಂ (40) ಖಾಜಿ , ಉಮಾಬಾಯಿ ಬಪ್ಪರಗಿ (36) ಮೃತ ದುರ್ದೈವಿ , ತೀವ್ರ ಚಿಂತಾಜನಕ ಸ್ಥಿತಿಯಲ್ಲಿರುವ ಮಹಾದೇವಿ ರಾಜಣ್ಣ ಇವರನ್ನು ಹೆಚ್ಚಿನ ಚಿಕಿತ್ಸೆಗೆ ಗಂಗಾವತಿ ಆಸ್ಪತ್ರೆಗೆ ಕಳಿಸಲಾಗಿದೆ ಎಂದು ತಿಳಿದು ಬಂದಿದೆ.
ತಾಲೂಕ ದಂಡಾಧಿಕಾರಿಗಳಾದ ರವಿ ಅಂಗಡಿ , ಸಿಪಿಐ ಯಶವಂತ ಬಿಸನಳ್ಳಿ, ಪ.ಪಂ.ಮುಖ್ಯಾಧಿಕಾರಿ ನಬಿಸಾಬ ಖುದನವರ , ಪಿಎಸ್ಐ ಸುಜಾತ ನಾಯಕ ಭೇಟಿ ನೀಡಿ ಪರಿಶೀಲಿಸಿದ್ದಾರೆ.