ಕುಷ್ಟಗಿ: ಕೊಪ್ಪಳ ಜಿಲ್ಲೆಯಲ್ಲಿ ತಾಲೂಕುವಾರು ಆದ್ಯತೆ ದೃಷ್ಟಿಯಿಂದ ಸಮತೋಲನ ಕಾಯ್ದುಕೊಳ್ಳುವ ಹಿನ್ನೆಲೆ ನೂತವಾಗಿ ಕಂದಾಯ ಉಪ ವಿಭಾಗಾಧಿಕಾರಿ ಕಚೇರಿ ಕುಷ್ಟಗಿಯಲ್ಲೇ ಆರಂಭಿಸುವುದು ಸೂಕ್ತ ಎಂದು ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ಉದಯವಾಣಿ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಈಗಾಗಲೇ ಗಂಗಾವತಿಯಲ್ಲಿ ಪೊಲೀಸ್ ಉಪ ಅಧೀಕ್ಷಕರ ಕಚೇರಿ (ಡಿವೈಎಸ್ಪಿ) ಹಾಗೂ ಜೆಸ್ಕಾಂ ವಿಭಾಗ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಗಂಗಾವತಿಯಲ್ಲಿ ಕಂದಾಯ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿಯೇ ಆರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಮಾತ್ರ ಹೋಗಿದೆ ಎಂದು ಹೇಳಿದರು.
ಗಂಗಾವತಿ ಉಪ ವಿಭಾಗಾಧಿಕಾರಿ ಕಚೇರಿ ವ್ಯಾಪ್ತಿಗೆ ಕುಷ್ಟಗಿ ಸೇರಿಸಿರುವ ಬಗ್ಗೆ ಕುಷ್ಟಗಿ ತಾಲೂಕಿನಲ್ಲಿ ವ್ಯಾಪಕವಾಗಿ ಸಾರ್ವಜನಿಕರಲ್ಲಿ ಈಗಾಗಲೇ ಸಾಕಷ್ಟು ವಿರೋಧ ವ್ಯಕ್ತವಾಗಿದೆ ಎಂದರು.
ಕೊಪ್ಪಳ ಉಪ ವಿಭಾಗಾಧಿಕಾರಿ ಕಚೇರಿಗೆ ಕಾರ್ಯಭಾರ ಹೆಚ್ಚಿದ ಹಿನ್ನೆಲೆ ಗಂಗಾವತಿಯಲ್ಲಿ ಉಪವಿಭಾಗ ಆರಂಭಿಸುವ ಬಗ್ಗೆ ಸರ್ಕಾರಕ್ಕೆ ಕೊಪ್ಪಳ ಜಿಲ್ಲಾಡಳಿತದಿಂದ ಪ್ರಸ್ತಾವನೆ ಹೋಗಿದೆ. ಆದರೆ ವಿಧಾನಸಭೆ ಸಂಪುಟ ಸಭೆಯಲ್ಲಾಗಲಿ, ಕಲಬುರಗಿ ವಿಶೇಷ ಸಂಪುಟ ಸಭೆಯ ಮುಂದೆ ಚರ್ಚೆಗೆ ಬಂದಿಲ್ಲ. ಆದಾಗ್ಯೂ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿದರೆ ಖಂಡಿತವಾಗಿ ನಮ್ಮ ವಿರೋಧವಿದೆ ಎಂದು ಹೇಳಿದರು.
ಕುಷ್ಟಗಿಯಲ್ಲಾದರೆ ತಪ್ಪೇನು?: ಹೊಸ ಉಪ ವಿಭಾಗಾಧಿಕಾರಿ ಕಚೇರಿ ಆರಂಭಿಸುವುದಾದರೆ ಕುಷ್ಟಗಿಯಲ್ಲಿ ಆರಂಭಿಸಿದರೆ ತಪ್ಪೇನು? ಗಂಗಾವತಿ ಕುಷ್ಟಗಿ ಉಪ ವಿಭಾಗಾಧಿಕಾರಿ ಕಚೇರಿಗೆ ಸೇರಿಸಲಿ. ಕುಷ್ಟಗಿ ಕಂದಾಯ ಉಪ ವಿಭಾಗವಾಗಲು ಅರ್ಹವಾಗಿದ್ದು, ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ನೇರ ಸಂಪರ್ಕ ವ್ಯವಸ್ಥೆ ಹಾಗೂ ಭವಿಷ್ಯದಲ್ಲಿ ರೈಲುಮಾರ್ಗ ಅನಕೂಲವಾಗುವ ಸಾದ್ಯತೆ ಇದೆ ಎಂದರು.
ಈ ಹಿಂದೆ ಕುಷ್ಟಗಿ ಲೋಕಸಭಾ ಕ್ಷೇತ್ರವಾಗಿತ್ತು. ಕೊಪ್ಪಳ ಜಿಲ್ಲೆಯಲ್ಲಿ 36 ಗ್ರಾಮ ಪಂಚಾಯತ್ ಹೊಂದಿದ 2ನೇ ದೊಡ್ಡ ತಾಲೂಕು ಕ್ಷೇತ್ರವಾಗಿದೆ. ಈ ಹಿನ್ನೆಲೆ ಕುಷ್ಟಗಿ ಉಪ ವಿಭಾಗಾಧಿಕಾರಿ ಕಚೇರಿ ಯಾಕೆ ಆರಂಭಿಸಬಾರದು? ಈ ಕ್ರಮದಿಂದ ಕೊಪ್ಪಳ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಕ್ರಮವಾಗಿ ಆದ್ಯತೆ ಜೊತೆಗೆ ಅಸಮಾತೋಲನ ನಿವಾರಿಸಿದಂತಾಗುತ್ತದೆ ಎಂದರು.
ಇದು ಸಾದ್ಯವಾಗದೇ ಇದ್ದಲ್ಲಿ ಮೊದಲಿನಂತೆ ಕೊಪ್ಪಳದಲ್ಲಿ ಉಪ ವಿಭಾಗಾಧಿಕಾರಿ ಕಚೇರಿ ವ್ಯಾಪ್ತಿಯಲ್ಲಿ ಕುಷ್ಟಗಿ ತಾಲೂಕು ಮುಂದುವರೆಯಲಿ ಹೊರತು ಗಂಗಾವತಿ ಉಪ ವಿಭಾಗದ ವ್ಯಾಪ್ತಿಯಲ್ಲಿ ಕುಷ್ಟಗಿ ತಾಲೂಕು ಸೇರ್ಪಡೆ ಕನಸಿನಲ್ಲಿಯೂ ಯೋಚಿಸಬಾರದು ಎಂದಿದ್ದಾರೆ.