ಕುಷ್ಟಗಿ: ಚಿತ್ತಾ ಮಳೆಗೆ ತಾಲೂಕು ತತ್ತರಿಸಿದ್ದು, ನಿರಂತರ ಮಳೆಗೆ ಅನ್ನದಾತರ ಚಿತ್ತ ಕದಡಿದೆ. ತಾಲೂಕಿನಲ್ಲಿ ವ್ಯಾಪಕ ಮಳೆಗೆ ಬಹುತೇಕ ಮಣ್ಣಿನ ಮನೆಗಳು ಕುಸಿಯಲಾರಂಭಿಸಿದ್ದು, ಮಣ್ಣಿನ ಮನೆಯಲ್ಲಿದ್ದವರಿಗೆ ಆತಂಕಸೃಷ್ಟಿಸಿದೆ.
ತಾಲೂಕಿನಲ್ಲಿ ಆಗಸ್ಟ್ ಕೊನೆಯ ವಾರದಿಂದ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ನಲ್ಲಿ ನಿರಂತರ ಮಳೆಯಾಗುತ್ತಿದೆ. ಈ ಮಳೆಗೆ ತಾಲೂಕಿನ 41 ಕೆರೆಗಳ ಪೈಕಿ ಈಗಾಗಲೇ 11 ಕೆರೆಗಳು ತುಂಬಿ ಕೋಡಿ ಬಿದ್ದಿವೆ. ಪ್ರಸಕ್ತ ವರ್ಷ ಎಲ್ಲ ಮಳೆಗಳಾಗುತ್ತಿದ್ದು, ಕೆರೆ ಕಟ್ಟೆ, ಚೆಕ್ ಡ್ಯಾಂ, ಕೃಷಿ ಹೊಂಡ ನೀರಿನಿಂದ ಭರ್ತಿಯಾಗಿದೆ.
ನಿರಂತರ ಮಳೆಯಿಂದ ಬಿತ್ತನೆಗೆ ಅವಕಾಶ ಇಲ್ಲ. ಹೀಗಾಗಿ ಜಮೀನುಗಳ ತೇವಾಂಶ ಹೆಚ್ಚಿದ್ದು, ಕಳೆಕಸ ಜಾಸ್ತಿಯಾಗಿದೆ. ಈ ಮಳೆಯಿಂದಾಗಿ ಹತ್ತಿ, ತೊಗರಿ, ಮೆಕ್ಕೆಜೋಳ ಸೇರಿದಂತೆ 25 ಹೆಕ್ಟೇರ್‌ನಲ್ಲಿ ಮೆಣಸಿನಕಾಯಿ, ಟೋಮ್ಯಾಟೋ, ಈರುಳ್ಳಿ, ಚೆಂಡು ಹೂವು, ಗಲಾಟೆ ಸೇರಿದಂತೆ 89 ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ಸರ್ಕಾರದಿಂದ ಇದುವರೆಗೂ 130 ರೈತರಿಗೆ 16.15 ಲಕ್ಷ ರೂ. ಪರಿಹಾರ ನೀಡಲಾಗಿದೆ. ಬಿದ್ದ ಮನೆಗಳ ಪೈಕಿ ಬಹುತೇಕ ಮಣ್ಣಿನ ಮನೆಗಳಾಗಿದ್ದು, ಹನುಮನಾಳ, ಹನುಮಸಾಗರ ಹೋಬಳಿಗಳಲ್ಲಿ ಹೆಚ್ಚು ಮನೆ ಬಿದ್ದಿರುವುದು ಕಂದಾಯ ಇಲಾಖೆಯ ಮಾಹಿತಿ. ಗ್ರಾಮ ಲೆಕ್ಕಾಧಿಕಾರಿಗಳು, ಜೆಇ ಹಾಗೂ ಪಿಡಿಒ ಸೇರಿದಂತೆ ಜಂಟಿ ಸಮೀಕ್ಷೆ ನಡೆಸಲಾಗಿದೆ.
ಜೂನ್-ಸೆಪ್ಟೆಂಬರ್‌ವರೆಗೂ ಸುರಿದ ಮಳೆಯಿಂದ ಭಾಗಶಃ ಹಾನಿಯಾದ 188 ಮನೆಗಳಿಗೆ 1.03 ಕೋಟಿ ರೂ.ಪರಿಹಾರ ನೀಡಲಾಗಿದೆ. ಈ ಪೈಕಿ ಪುನರ್ ನಿರ್ಮಾಣ ಸ್ಥಿತಿಯಲ್ಲಿ (ಬಿ-2) 22 ಮನೆಗಳಿಗೆ ತಲಾ 95,100 ರೂ. ಪರಿಹಾರ, ಭಾಗಶಃ (ಸಿ-2) 161 ಮನೆಗಳಿಗೆ ತಲಾ 50 ಸಾವಿರ ರೂ. ಪರಿಹಾರ ನೀಡಲಾಗಿದೆ.
ಹನುಮನಾಳ, ಯಲಬುರ್ತಿ, ಕಿಲ್ಲಾರಹಟ್ಟಿ, ಹಿರೇಬನ್ನಿಗೋಳ, ತೋಪಲಕಟ್ಟಿ,ಬಾದಮಿನಾಳ, ತುಮರಿಕೊಪ್ಪ, ನೀಲೋಗಲ್, ವಕ್ಕಂದುರ್ಗ, ಎಂ. ರಾಂಪುರ, ಗುಮಗೇರಿ, ನಿಡಶೇಸಿ, ಟೆಂಗುಂಟಿ, ಹನುಮಸಾಗರ, ಕಾಟಾಪುರ, ಯಲಬುಣಚಿ, ಯರಗೇರಾದಲ್ಲಿ ಮನೆಗಳು ಕುಸಿದಿವೆ. ಕಳೆದ 15 ದಿನಗಳಲ್ಲಿ 95 ಮನೆಗಳು ಬಿದ್ದಿದ್ದು, ಜಂಟಿ ಸಮೀಕ್ಷೆ ಮೂಲಕ ಪರಿಹಾರ ನೀಡಲಾಗುತ್ತಿದೆ.
ಗುಡುಗು, ಸಿಡಿಲಿನ ಅವಘಡ ತಡೆಯಲು ಈಗಾಗಲೇ ಗ್ರಾಮ ಸಭೆ ಮೂಲಕ ಸಿಡಿಲು ಸ್ಮಾರ್ಟ್ ಫೋನ್‌ನಲ್ಲಿ ಆ್ಯಪ್ ಅಳವಡಿಸಿಕೊಳ್ಳಲು ಮುನ್ನೆಚ್ಚರಿಕೆ ಮಾಹಿತಿ
ನೀಡಲಾಗಿದೆ. ಗ್ರಾಮ ಲೆಕ್ಕಾಧಿಕಾರಿಗಳು, ಪಿಡಿಒ ಕೇಂದ್ರ ಸ್ಥಳದಲ್ಲಿದ್ದು, ಘಟನೆ ನಡೆದರೆ ಸ್ಥಾನಿಕ ಪರಿಶೀಲಿಸಿ ವರದಿ ನೀಡಲು ಸೂಚಿಸಲಾಗಿದೆ.
ಮಣ್ಣಿ ಮನೆಯಲ್ಲಿ ವಾಸವಾಗಿರುವವರು ಅಭದ್ರವಾಗಿದ್ದರೆ ಸ್ಥಳಾಂತರಗೊಳ್ಳಲು ಸೂಚಿಸಲಾಗಿದೆ ಶಾಲೆಗಳು ದಸರಾ ರಜೆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಶಾಲೆ, ಅಂಗನವಾಡಿ, ಸಮುದಾಯ ಭವನದಲ್ಲಿ ಉಳಿದುಕೊಳ್ಳಬಹುದಾಗಿದೆ. ಮಳೆ ಬಂದ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಹಳ್ಳದ ಪ್ರವಾಹ ಇಳಿಯುವವರೆಗೂ ಹಳ್ಳದಾಟಬಾರದು.
ಗುರುರಾಜ್ ಚಲವಾದಿ, ಕುಷ್ಟಗಿ ತಹಶೀಲ್ದಾರ್
*ಮಂಜುನಾಥ ಮಹಾಲಿಂಗಪುರ