ಕುಷ್ಟಗಿ:ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯೆಯ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಆಸ್ಪತ್ರೆ ವಿರುದ್ಧ ಕುಟುಂಬ ವರ್ಗದವರು ಪ್ರತಿಭಟನೆ ನಡೆಸಿರುವ ಘಟನೆ ಬುಧವಾರ ಸಂಜೆ ನಡೆದಿದೆ.
ತಾಲೂಕಿನ ಲಿಂಗದಳ್ಳಿ ಗ್ರಾಮದ ಗರ್ಭಿಣಿ ಹನುಮಂತಿ ದುರಗಪ್ಪ ಮಾದರ ಅವರು ಮಂಗಳವಾರ ಅಪರಾಹ್ನ 11 ಗಂಟೆಗೆ ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ ಹೆರಿಗೆ ದಾಖಲಾಗಿದ್ದರು. ಆಸ್ಪತ್ರೆಯ ವೈದ್ಯೆ ಡಾ. ಚಂದ್ರಕಲಾ ಅವರು ಹೊಟ್ಟೆಯಲ್ಲಿರುವ ಮಗು ತಾಯಿ ಆರೋಗ್ಯವಾಗಿದ್ದು, ತಲೆಯ ಗಾತ್ರ ದೊಡ್ಡದಿರುವ ಹಿನ್ನೆಲೆಯಲ್ಲಿ ಸಿಜೇರಿಯನ್ ಶಸ್ತ್ರ ಚಿಕಿತ್ಸೆಗೆ ಸಲಹೆ ನೀಡಿದ್ದಾರೆ. ಇದಕ್ಕೆ ಕುಟುಂಬಸ್ಥರು ಸಮ್ಮತಿ ವ್ಯಕ್ತಪಡಿಸಿ ಶಸ್ತ್ರಚಿಕಿತ್ಸೆಗೆ ದಾಖಲೆಗೆ ಸಹಿ ಪಡೆದುಕೊಂಡಿದ್ದರು. ಬುಧವಾರ ಮಧ್ಯಾಹ್ನ 2 ಗಂಟೆಯಾದರೂ ಸಿಜೇರಿಯನ್ ಶಸ್ತ್ರ ಚಿಕಿತ್ಸೆ ಮುಂದಾಗಲೇ ಇಲ್ಲ. ನಂತರ 3 ಗಂಟೆಯ ಹೊತ್ತಿಗೆ ಸಿಜೇರಿಯನ್ ಶಸ್ತ್ರ ಚಿಕಿತ್ಸೆಗೆ ಮುಂದಾದಾಗ ನವಜಾತ ಗಂಡು ಶಿಶು ಹೊಟ್ಟಿಯಲ್ಲಿ ಸತ್ತಿತ್ತು.
ವೈದ್ಯೆ ಡಾ. ಚಂದ್ರಕಲಾ ಮಂಗಳವಾರ ಸಿಜೇರಿಯನ್ ಮಾಡಿದ್ದರೆ ಮಗು ಬದುಕುಳಿಯುವ ಸಾಧ್ಯತೆ ಇತ್ತು. ವೈದ್ಯೆಯ ವಿಳಂಬದಿಂದಾಗಿ ಮಗು ಸಾವನಪ್ಪಿದ್ದು ವೈದ್ಯೆಯ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಕುಟುಂಬದ ಸಂಬಂಧಿಕರು ಆಸ್ಪತ್ರೆಯ ಮುಂದೆಯೇ ಧಿಡೀರ್ ಪ್ರತಿಭಟನೆ ನಡೆಸಿ ವೈದ್ಯೆ ಡಾ. ಚಂದ್ರಕಲಾ ವಿರುದ್ದ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರಲ್ಲದೇ ನಂತರ ವೈದ್ಯೆ ಡಾ. ಚಂದ್ರಕಲಾ ವಿರುದ್ದ ವಾಗ್ದಾಳಿ ನಡೆಸಿದರು.
ಈ ಕುರಿತು ಹುಲಗಪ್ಪ ವಿರುಪಾಪೂರ, ನಾಗರಾಜ ನಂದಾಪೂರ ಪ್ರಕ್ರಿಯಿಸಿ, ವೈದ್ಯೆ ಡಾ. ಚಂದ್ರಕಲಾ ಅವರು, ಸಿಜೇರಿಯನ್ ಮಾಡುವುದಾಗಿ ದಾಖಲಾತಿಗೆ ಸಹಿ ಪಡೆದು, ಸಹಜ ಹೆರಿಗೆಗಾಗಿ ವಿಳಂಬ ಮಾಡಿರುವುದು ವೈದ್ಯೆಯ ಅಕ್ಷಮ್ಯ ಅಪರಾಧವಾಗಿದೆ. ನಿರ್ಲಕ್ಷ್ಯಕ್ಕೆ ಗಂಡು ಮಗು ಬಲಿಯಾಗಿದ್ದು, ಇನ್ನೂ ವಿಳಂಬ ಮಾಡಿದರೆ ತಾಯಿ ಸಹ ಕಳೆದುಕೊಳ್ಳುವ ಸಾಧ್ಯತೆ ಇತ್ತು ಎಂದರು.
ನನ್ನ ತಂಗಿ ಹನುಮಂತಿ ಅವರಿಗೆ ಈ ಮೊದಲು ಎರಡು ಹೆಣ್ಣು ಒಂದು ಗಂಡು ಸಹಜ ಹೆರಿಗೆಯಾಗಿದೆ. ಇದು ನಾಲ್ಕನೇಯ ಹೆರಿಗೆಯಲ್ಲಿ ಸಹಜ ಹೆರಿಗೆಯನ್ನು ತಪ್ಪಿಸಿ, ಸಿಜೇರಿಯನ್ ಮಾಡಲು ಮುಂದಾಗಿದ್ದೆ ವೈದ್ಯೆಯ ನಿರ್ಲಕ್ಷ್ಯವಾಗಿದೆ.
-ಹುಲಗಪ್ಪ ವಿರುಪಾಪೂರ