ಕುಷ್ಟಗಿ: ಪಟ್ಟಣದ ಪುರಸಭೆ ವ್ಯಾಪ್ತಿಯ 3ನೇ ವಾರ್ಡ್ ನಲ್ಲಿ ಹಳೆ ಕುರಬನಾಳ ರಸ್ತೆಯಲ್ಲಿ ಎದುರಿಗೆ ಬಂದ ವಾಹನಕ್ಕೆ ಸೈಡ್ ತೆಗೆದುಕೊಳ್ಳಲು ಮುಂದಾದವರಿಗೆ ಚರಂಡಿಯೊಳಗೆ ಮಗುಚಿ ಬೀಳುತ್ತಿದ್ದರೂ ಪರ್ಯಾಯ ಕ್ರಮಕ್ಕೆ ಪುರಸಭೆ ಮುಂದಾಗಿಲ್ಲ.
ಕಾರ್ಗಿಲ್ ಮಲ್ಲಯ್ಯ ಸರ್ಕಲ್ ನಿಂದ ಕುರಬನಾಳ ಗ್ರಾಮಕ್ಕೆ ಇರುವ 3ನೇ ವಾರ್ಡ್ ವ್ಯಾಪ್ತಿಯ ರಸ್ತೆಯಲ್ಲಿ ಇಂತಹ ಅವಘಡಗಳಾಗುತ್ತಿವೆ. ಈ ರಸ್ತೆಯಲ್ಲಿ ಮೂರು ಕೂಡು ರಸ್ತೆಗಳು ಸಂಪರ್ಕಿಸುತ್ತಿವೆ. ತೀರ ಇಕ್ಕಟ್ಟಾದ ರಸ್ತೆಯಲ್ಲಿ ಚರಂಡಿ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇಲ್ಲಿ ಹುಲ್ಲು ಮುಳ್ಳು ಬೆಳೆದಿದ್ದು, ಚರಂಡಿಯ ಗುಂಡಿ ಇರುವುದು ಗೊತ್ತಾಗುವುದೇ ಇಲ್ಲ.
ಈ ರಸ್ತೆಯಲ್ಲಿ ವಾಹನ ಸವಾರರು, ಕಾರು, ಮಿನಿ ಗೂಡ್ಸ್ ವಾಹನ ಇಲ್ಲವೇ ಬೈಕ್ ಸವಾರರು ಎದುರಿಗೆ ಬಂದ ವಾಹನಕ್ಕೆ ಸೈಡ್ ಕೊಡಲು ಪಕ್ಕಕ್ಕೆ ಬಂದರೆ ವಾಹನ ಸಮೇತ ಚರಂಡಿ ಗುಂಡಿಯ ಕೊಚ್ಚೆಯಲ್ಲಿ ಬೀಳುತ್ತಿದ್ದಾರೆ. ಇಲ್ಲಿ ಬಸ್, ಕಾರು ಇತರೇ ವಾಹನಗಳು ಸಿಲುಕಿಕೊಳ್ಳುತ್ತಿವೆ.
ಪುರಸಭೆಯವರು ಬಂದು ಪರಿಶೀಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ರಸ್ತೆಯ ಅವಸ್ಥೆ ಅರಿಯದೇ ಮಹಿಳೆಯರು ಮಕ್ಕಳು ಬಿದ್ದಿರುವ ಉದಾಹರಣೆ ಇದೆ. ಈ ಚರಂಡಿಗೆ ಸ್ಲ್ಯಾಬ್ ನಿರ್ಮಿಸಬೇಕಿದ್ದು, ಬೈಕ್ ಸವಾರರು ಚರಂಡಿ ಗುಂಡಿಯಲ್ಲಿ ಬೀಳದಂತೆ ಪರ್ಯಾಯ ಕ್ರಮಕ್ಕೆ ಮುಂದಾಗಬೇಕಿದೆ.