ಕುಷ್ಟಗಿ: ಪಿಎಸೈ ಹಿರೇಗೌಡ್ರು ಇದ್ದಾಗ ನಮ್ಮೂರಾಗ ಮದ್ಯಪಾನ ಬಂದ್ ಇತ್ತು ಈಗ ಯಾಕೆ ಬಂದ್ ಆಗಿಲ್ಲ ಎಂದು ತಳವಗೇರಾ ಗ್ರಾಮಸ್ಥರು ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ.
ಕರ್ನಾಟಕ ಮಾನವ ಹಕ್ಕುಗಳ ಜನಸೇವಾ ಸಮಿತಿ ಹಾಗೂ ಶರಣಬಸವೇಶ್ವರ ಸೇವಾ ಸಮಿತಿ ನೇತೃತ್ವದಲ್ಲಿ ತಳವಗೇರಾ ಗ್ರಾಮದಲ್ಲಿ ಮದ್ಯಪಾನ ನಿಷೇಧಿಸಬೇಕೆಂಬ ಒತ್ತಾಯದ ಹಿನ್ನೆಲೆ ಅಬಕಾರಿ ಇಲಾಖೆಯ ಅಧಿಕಾರಿ ಶಂಕರ್ ಆಗಮಿಸಿ ಸಮಾಲೋಚನೆ ನಡೆಸಿದರು.
ಈ ವೇಳೆ ಗ್ರಾಮಸ್ಥರು ಕುಷ್ಟಗಿ ಪಿಎಸೈ ವಿಶ್ವನಾಥ ಹಿರೇಗೌಡ್ರು ಇದ್ದಾಗ ಗ್ರಾಮದಲ್ಲಿ ಮದ್ಯ ಸೇವನೆ ಬಂದ್ ಮಾಡಲಾಗಿತ್ತು. ಅವರ ವರ್ಗಾವಣೆ ಬಳಿಕ ಗ್ರಾಮದ ದೇವಸ್ಥಾನದ ಅಕ್ಕ-ಪಕ್ಕ ಮದ್ಯ ಸೇವನೆ ನಡೆಯುತ್ತಿದೆ. ರಾತ್ರಿಯಾಗುತ್ತಿದ್ದಂತೆ ಶಾಲಾ ಆವರಣ, ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಯುವಕರು ಮದ್ಯ ಸೇವಿಸುತ್ತಿದ್ದು, ವಾತವರಣ ಕಲುಷಿತಗೊಳಿಸಿದ್ದಾರೆಂದು ಆರೋಪಿಸಿದರು.
ಇದಕ್ಕೆ ಅಬಕಾರಿ ಅಧಿಕಾರಿ ಸ್ಪಂದಿಸಿ ಗ್ರಾಮದಲ್ಲಿ ಎಲ್ಲೆಂದರಲ್ಲಿ ಮದ್ಯ ಸೇವಿಸಿ ಯುವಕರು ಆರೋಗ್ಯ ಹಾಳು ಮಾಡಿಕೊಳ್ಳುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ. ಹಿರಿಯರ ಮಾತುಗಳಿಗೆ ಬೆಲೆ ಇಲ್ಲದಂತಾಗಿದೆ. ಇನ್ಮುಂದೆ ಗ್ರಾಮದ ದೇವಸ್ಥಾನ ಪ್ರದೇಶದಲ್ಲಿ ಮದ್ಯಪಾನ ನಿಯಂತ್ರಿಸಲು ಪೊಲೀಸರು ಕ್ರಮಕೈಗೊಳ್ಳಲಿದ್ದಾರೆ. ಗ್ರಾಮದಲ್ಲಿ ಮದ್ಯ ಮಾರಾಟ ಕಂಡು ಬಂದರೆ ನಮಗೆ ಮಾಹಿತಿ ನೀಡಿ, ಮದ್ಯದ ಲೇಬಲ್ ಆಧಾರದ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಕರ್ನಾಟಕ ಮಾನವ ಹಕ್ಕು ಜನ ಸೇವಾ ಸಮಿತಿ ಅಧ್ಯಕ್ಷ ಬಸವರಾಜ ಸಿ. ಮೇಟಿ ಮದ್ಯಪಾನ ನಿಷೇಧದ ಹೋರಾಟದ ನೇತೃತ್ವ ವಹಿಸಿದ್ದರು.