ಉದಯವಾಣಿ ಸಮಾಚಾರ
ಕುಷ್ಟಗಿ: ಕನಕದಾಸರು ಇಡೀ ಸಮಾಜದ ಬೆಳಕಾಗಿದ್ದು, ನಮ್ಮೆಲ್ಲರ ಬದುಕನ್ನು ತಿದ್ದಿ ತೀಡಿದ ಕನ್ನಡಿಯಾಗಿದ್ದಾರೆ. ಮನುಷ್ಯರಿಗೆ ಬೆಳಕು ಬೇಕು, ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಕನ್ನಡಿ ಬೇಕಿದ್ದು. ಕನಕದಾಸರು ಬೆಳಕು ಹಾಗೂ ಕನ್ನಡಿಯ ಪ್ರತೀಕ ಎಂದು ಕಲಬುರಗಿ ವಿಭಾಗದ ತಿಂಥಣಿ ಬ್ರಿಜ್ ಕಾಗಿನೆಲೆ ಗುರುಪೀಠದ ಸಿದ್ದರಾಮಾನಂದ ಸ್ವಾಮೀಜಿ ಬಣ್ಣಿಸಿದರು.
ಕುಷ್ಟಗಿ ಪಟ್ಟಣದ ಗಜೇಂದ್ರಗಡ ರಸ್ತೆಯ ಕನಕದಾಸ ವೃತ್ತದಲ್ಲಿ ಹಾಲುಮತ ಸಮಾಜ ನೇತೃತ್ವದಲ್ಲಿ ದಾಸ ಶ್ರೇಷ್ಠ ಕನಕದಾಸರ ಕಂಚಿನ ಪುತ್ಥಳಿ ಅನಾವರಣ ಸಮಾರಂಭದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ಕುಷ್ಟಗಿ ಪಟ್ಟಣದ ಮುಖ್ಯ ಸ್ಥಳದಲ್ಲಿ ಕನಕದಾಸರ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಆಗಿನ ಕಾಲ ಘಟ್ಟದಲ್ಲಿ ಕನಕದಾಸರು ಒಂಟಿಯಾಗಿ ಮೌಡ್ಯತೆ ನಿವಾರಿಸಿ ಸಮಾನತೆಗಾಗಿ ಜಾತ್ಯಾತೀತ ಸಮಾಜಕ್ಕಾಗಿ ದೇವರ ಒಲುಮೆಯ ಮಾರ್ಗದರ್ಶನವನ್ನು ಜನರೆಲ್ಲರೂ ತಿಳಿಯಲು ಹೋರಾಟ ಮಾಡಿದ್ದನ್ನು ಸ್ಮರಿಸಿದರು.
ಕುಷ್ಟಗಿ ಮದ್ದಾನೇಶ್ವರ ಮಠದ ಕರಿಬಸವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕನಕದಾಸರು ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡ ಮಹಾತ್ಮ ಎಂದರು. ಕನಕದಾಸರ ಕಂಚಿನ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ, ಶಾಸಕ ದೊಡ್ಡನಗೌಡ ಪಾಟೀಲ, ಕನಕದಾಸರ ಸೌಹಾರ್ದತೆ, ಸಮಾನತೆ, ಆಧ್ಯಾತ್ಮಿಕ ಸಾಧನೆಗಳ ಬಗ್ಗೆ ತತ್ತ್ವೋಪದೇಶಗಳು ಚಿರಂತನವಾಗಿವೆ ಮತ್ತು ಸಾರ್ಥಕ ಬದುಕಿನ ದಾರಿ ದೀಪವಾಗಿವೆ ಎಂದರು.
ನಿಡಶೇಸಿ ಚನ್ನಬಸವೇಶ್ವರ ಮಠದ ಅಭಿನವ ಕರಿಬಸವ ಸ್ವಾಮೀಜಿ, ಬಾದಿಮಿನಾಳ ಕಾಗಿಲೆನೆ ಶಾಖಾಮಠದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ, ಸಮಾಜ ಸೇವಕ ರವಿಕುಮಾರ ಹಿರೇಮಠ ಹಾಲುಮತ ಸಮಾಜದ ಗುರುಗಳಾದ ಶಿವಾನಂದಯ್ಯ ಗುರುವಿನ್ ಶಂಕರಯ್ಯ ಗುರುವಿನ್, ಹಾಲುಮತ ಸಮಾಜದ ಅಧ್ಯಕ್ಷ ಮಲ್ಲಣ್ಣ ಪಲ್ಲೇದ್, ಯುವ ಘಟಕದ ಅಧ್ಯಕ್ಷ ಕಲ್ಲೇಶ ತಾಳದ್, ಜಿಪಂ ಮಾಜಿ ಸದಸ್ಯ ಕೆ.ಮಹೇಶ, ಬಿಜೆಪಿ ತಾಲೂಕು ಅಧ್ಯಕ್ಷ ಬಸವರಾಜ ಹಳ್ಳೂರು, ಮಾಜಿ ಶಾಸಕ ಹಸನಸಾಬ್ ದೋಟಿಹಾಳ, ಹಿರಿಯ
ವಕೀಲ ಪಕೀರಪ್ಪ ಚಳಗೇರಿ, ಹನಮಂತಪ್ಪ ಚೌಡಕಿ, ಪರಸಪ್ಪ ಕತ್ತಿ ಮತ್ತೀತರರಿದ್ದರು.
ಭವ್ಯ ಮೆರವಣಿಗೆ: ಕನಕದಾಸರ ವೃತ್ತದಲ್ಲಿ ಕಂಚಿನ ಪುತ್ಥಳಿ ಅನಾವರಣ ಹಿನ್ನೆಲೆಯಲ್ಲಿ ಕುಷ್ಟಗಿಯ ಗ್ರಾಮದೇವತೆ ಕಟ್ಟಿ ದುರ್ಗಾದೇವಿ ದೇವಸ್ಥಾನದಿಂದ ಕನಕದಾಸ ವೃತ್ತ ಮಾರ್ಗವಾಗಿ, ಮಾರುತಿ ವೃತ್ತ, ಬಸವೇಶ್ವರ ವೃತ್ತ ಮೂಲಕ ಕಟ್ಟಿ ದುರ್ಗಾದೇವಿ ದೇವಸ್ಥಾನದವರೆಗೂ ಕನಕದಾಸರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.