ಕುಷ್ಟಗಿ: ತಾಲ್ಲೂಕಿನ ಕನಸು ಫೌಂಡೇಷನ್ ಸಮಾನ ಮನಸ್ಕ ಯುವಕರಿಂದ ಬೇಸಿಗೆಯಲ್ಲಿ ಒಣಗುವ ಸ್ಥಿತಿಯಲ್ಲಿರುವ ಗಿಡಗಳಿಗೆ ನೀರುಣಿಸುವುದು, ಬಿಸಿಲಿಗೆ ನಿತ್ರಾಣವಾಗುವ ಪಕ್ಷಿಗಳಿಗೆ ಕಾಳುಗಳನ್ನು ಹಾಕಿ, ನೀರಿನ ವ್ಯವಸ್ಥೆ ಕಲ್ಪಿಸುವ ಮಾನವೀಯ ಕಾರ್ಯ ಅನುಕರಣನೀಯವೆನಿಸಿದೆ.
ದಿನೇ ದಿನೇ ತಾಪಮಾನದಲ್ಲಿ ಏರಿಕೆ ಕಂಡಿದ್ದು, ಜಲಮೂಲಗಳಲ್ಲಿ ನೀರಿಲ್ಲ. ಮನುಷ್ಯರಿಗೆ ಕುಡಿಯುವ ನೀರಿನ ತಾತ್ವರ ಶುರುವಾಗಿದ್ದು ಈ ಪರಿಸ್ಥಿತಿಯಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರಿಗಾಗಿ ಅಲೆದಾಡುವುದನ್ನು ತಪ್ಪಿಸಲು ತಳವಗೇರಾ ಗ್ರಾಮದ ಕನಸು ಫೌಂಡೇಷನ್ ವತಿಯಿಂದ 11 ಯುವಕರು ಸಮಾಜಮುಖಿ ಕಾರ್ಯದಲ್ಲಿ ಸಕ್ರಿಯರಾಗಿದ್ದಾರೆ.
ಕಳೆದ ಜುಲೈ ತಿಂಗಳಿನಲ್ಲಿ ಕನಸು ಫೌಂಡೇಷನ್ ನಿಂದ ಗ್ರಾಮದ ಆದರ್ಶ ವಿದ್ಯಾಲಯ ಹಾಗೂ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಗಿಡಗಳನ್ನು ನೆಟ್ಟಿದ್ದರಿಂದ ಯುವಕರ ಸ್ವಯಂ ಪ್ರೇರಿತ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಯುವಕರ ಕಾರ್ಯ ಮುಂದುವರಿದು, ಇದೀಗ ಟ್ರ್ಯಾಕ್ಟರ್ ಮಾಲೀಕರ ಸಂಘದವರು ಸಾಥ್ ನೀಡಿರುವುದು ಗಮನಾರ್ಹ ಎನಿಸಿದೆ.
ಬೇಸಿಗೆಯ ಈ ಸಂದರ್ಭದಲ್ಲಿ ತಮ್ಮ ಟ್ರ್ಯಾಕ್ಟರ್ ಗಳ ಎಂಜಿನ್ ಉಚಿತ ಸೇವೆಯಾಗಿ ನೀಡಿದ್ದು ಇದನ್ನು ಬಳಸಿಕೊಂಡ ಕನಸು ಫೌಂಡೇಷನ್ ಯುವಕರು, ತಾವು ನೆಟ್ಟಿರುವ ಗಿಡಗಳಿಗೆ ನೀರುಣಿಸುವ ಕಾರ್ಯದಲ್ಲಿ ಸಕ್ರಿಯರಾಗಿದ್ದರೆ. ಅಲ್ಲದೇ ಪಕ್ಷಿಗಳಿಗೆ ನೀರು, ಅಹಾರಕ್ಕಾಗಿ ಅಲೆಯದೇ ಇರಲು ಅಲ್ಲಲ್ಲಿ ಗಿಡ, ಮರಗಳಿಗೆ ನೀರು, ಕಾಳುಗಳಿರುವ ಬಟ್ಟಲು ನೇತು ಹಾಕಿ ಮಾನವೀಯ ಕಾರ್ಯಕ್ಕೆ ಮುಂದಾಗಿದ್ದಾರೆ.
ಇವರ ಕಾರ್ಯಗಳಿಗೆ ಪ್ರೇರಿತರಾದ ಸ್ಥಳೀಯರಾದ ಶ್ರೀ ಶರಣಬಸವೇಶ್ವರ ವೆಲ್ಡಿಂಗ್ ಶಾಪ್ ನವರು ಬಸ್ ತಂಗುದಾಣದ ಬಳಿ ನೀರಿನ ಅರವಟ್ಟಿಗೆ ಸ್ಥಾಪಿಸಿ ತಮ್ಮ ಸೇವೆ ನೀಡಿರುವುದು ಅನುಕರಣೀಯವೆನಿಸಿದೆ.