ಕುಷ್ಟಗಿ: ಉದ್ರಿ ಕೊಡದ ತಪ್ಪಿಗೆ ಚಹಾ ಅಂಗಡಿ ಮಾಲೀಕ ಜೀವ ಕಳೆದುಕೊಂಡ ಘಟನೆ ತಾಲೂಕಿನ ತೆಗ್ಗಿಹಾಳ ಗ್ರಾಮದಲ್ಲಿ ನಡೆದಿದೆ.
ತೆಗ್ಗಿಹಾಳ ಗ್ರಾಮದ ಚಹಾ ಅಂಗಡಿಯ ಮಾಲೀಕ ಶೇಖರಗೌಡ ಅಮರೇಗೌಡ ಪಾಟೀಲ ಕುಡುಕನಿಂದ ದುರ್ಮರಣಕ್ಕೀಡಾದ ದುರ್ದೈವಿ.
ಅಂಗಡಿಯ ಮಾಲೀಕ ಶೇಖರಗೌಡ ಎಂದಿನಂತೆ ಚಹಾದ ಅಂಗಡಿಯಲ್ಲಿದ್ದ ಸಂದರ್ಭ ವೆಂಕಟೇಶ ಚಿಗರಿ ಎಂಬವರು ಕುಡಿದ ಮತ್ತಿನಲ್ಲಿ ಚಹಾದ ಅಂಗಡಿಗೆ ಬಂದು ಉದ್ರಿ ಕೇಳಿದ್ದಾನೆ. ಅದಕ್ಕುತ್ತರವಾಗಿ ಮಾಲಿಕ ಶೇಖರಗೌಡ, ನೀನು ಕುಡಿದಿದ್ದೀಯ ಉದ್ರಿ ಕೊಡುವುದಿಲ್ಲ, ಒಳಗೆ ಬರಬೇಡ ಎಂದಿದ್ದಕ್ಕೆ ಇವರಿಬ್ಬರ ಮಧ್ಯೆ ವಾಗ್ವಾದ ಶುರುವಾಗಿತ್ತು.
ಇದರಿಂದ ಸಿಟ್ಟಿಗೆದ್ದ ವೆಂಕಟೇಶ ಚಿಗರಿ ಮಾಲಿಕ ಶೇಖರಗೌಡನನ್ನು ಮೇಲಕ್ಕೆತ್ತಿ ನೆಲಕ್ಕೆ ಒಗೆದಿದ್ದಾನೆ. ಈ ಪರಿಣಾಮ ಶೇಖರಗೌಡರ ತಲೆ ಒಳಗೆ ಪೆಟ್ಟಾಗಿ ಅಸ್ವಸ್ಥಗೊಂಡರು.
ಕೂಡಲೇ ಸ್ಥಳೀಯರು ಈತನನ್ನು ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
ಶೇಖರಗೌಡರ ಪತ್ನಿ ತಾವರಗೇರಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿ ವೆಂಕಟೇಶ ಚಿಗರಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
(ಉದ್ರಿ- ಹಣದ ಬದಲಾಗಿ ವಸ್ತು, ಹಣದ ವ್ಯವಹಾರ)