ಕುಷ್ಟಗಿ: ಸ್ವಿಫ್ಟ್ ಕಾರೊಂದು ನಿಂತಿದ್ದ ಲಾರಿಗೆ ಹಿಂದಿನಿಂದ ಢಿಕ್ಕಿ ಹೊಡೆದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟ ಘಟನೆ ವಿಜಯನಗರ ಜಿಲ್ಲೆಯ ಕುಷ್ಠಗಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಜೂ. 13 ರ ಬೆಳ್ಳಂಬೆಳಗ್ಗೆ ಸಂಭವಿಸಿದೆ.
ಮೃತರನ್ನು ಕಾರಿನ ಚಾಲಕ ಕೋಳೂರು ತಾಂಡಾದ ನಿವಾದಿ ಪ್ರವೀಣ ಭೋಜಪ್ಪ ಚವ್ಹಾಣ (27), ಬಿದರಕುಂದಿ ಗ್ರಾಮದ ನಿವಾಸಿ ಗೌರಮ್ಮ ಹಣಮಗೌಡ ಬಿರಾದಾರ (ಬಿದರಕುಂದಿ)(65) ಹಾಗೂ ನೇಬಗೇರಿ ಗ್ರಾಮದ ನಿವಾಸಿ ಸುರೇಶ ಈರಸಂಗಪ್ಪ ಹಂಡರಗಲ್ (43) ಎಂದು ಗುರುತಿಸಲಾಗಿದೆ.
ವಿಜಯಪುರದ ಸ್ವಿಫ್ಟ್ ಕಾರು ಅತಿ ವೇಗದಲ್ಲಿ ಚಾಲಕನ ನಿರ್ಲಕ್ಷ್ಯತನದ ಚಾಲನೆಯಿಂದ ಕಂಟೈನರ್ ಹಿಂಭಾಗಕ್ಜೆ ಢಿಕ್ಕಿ ಹೊಡೆದಿದ್ದು, ಢಿಕ್ಕಿಯ ರಭಸಕ್ಕೆ ಕಾರು ಕಂಟೈನರ್ ಒಳಗೆ ನುಗ್ಗಿದೆ. ಕಂಟೈನರ್ ಹಿಂಭಾಗದಲ್ಲಿ ಸಿಲುಕಿದ್ದ ಕಾರನ್ನು ಬಿಡಿಸಿಕೊಳ್ಳಲು ಸುಮಾರು ದೂರ ಎಳೆದೊಯ್ದಿದ್ದು ಘಟನೆ ಭೀಕರವಾಗಿದೆ. ಗೌರಮ್ಮ ಮತ್ತು ಈರಸಂಗಪ್ಪ ಇಬ್ಬರೂ ಅತ್ತೆ, ಅಳಿಯ ಆಗಿದ್ದು ಹೊಸಪೇಟೆಗೆ ಕಾರಿನಲ್ಲಿ ಹೊರಟಿದ್ದಾಗ ಈ ದುರಂತ ಸಂಭವಿಸಿದೆ.
ಸ್ಥಳಕ್ಕೆ ಪಿಎಸೈ ಮೌನೇಶ್ ರಾಠೋಡ್ ಭೇಟಿ ನೀಡಿದ್ದಾರೆ. ಘಟನೆ ಕುರಿತು ಕುಷ್ಠಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತರ ಸಂಬಂಧಿಕರು, ಬಂಧುಗಳು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ.
ಕಳೆದ ಮೇ 28 ಇದೇ ಹೆದ್ದಾರಿಯಲ್ಲಿ ಕಾರು ಹಾಗೂ ಲಾರಿ ಢಿಕ್ಕಿಯಾಗಿ 6 ಜನ ಕೂಲಿಕಾರರು ಮೃತರಾಗಿದ್ದರು. ಇದಾದ ಭೀಕರ ಅಪಘಾತ ನಡೆದು 17 ದಿನಗಳಲ್ಲಿ ಮತ್ತೊಂದು ಅವಘಡ ಸಂಭವಿಸಿದೆ.