ಉದಯವಾಣಿ ಸಮಾಚಾರ
ಕುಷ್ಟಗಿ:ಪ್ರಜಾಪ್ರಭುತ್ವ ಉಳಿಯಲು ಮತ ನೀಡಿ..ಪರಿಸರ ಉಳಿಯಲು ಸಸಿ ನೆಡಿ ಎನ್ನುವ ಘೋಷ ವಾಕ್ಯದ ಜಾಗೃತ ಸಂದೇಶದೊಂದಿಗೆ ಕುಷ್ಟಗಿಯ ದಾನಿ ಕ್ಲಿನಿಕ್‌ನ ಡಾ|ರವಿಕುಮಾರ ಅವರು, ತಮ್ಮ ಕ್ಲಿನಿಕ್‌ಗೆ ಆಗಮಿಸಿದ ರೋಗಿಗಳಿಗೆ ಸಸಿ ನೀಡಿ ಮೇ 7ರಂದು ಲೋಕಸಭೆ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡುವಂತೆ ವಿಭಿನ್ನವಾಗಿ ಜಾಗೃತಿ ಮೂಡಿಸಿದರು.
ಪಟ್ಟಣದ ಕನಕದಾಸ ವೃತ್ತದ ಬಳಿ ಇರುವ ದಾನಿ ಕ್ಲಿನಿಕ್‌ನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ರವಿ ಅಂಗಡಿ, ಸ್ವೀಪ್ ಸಮಿತಿ ಅಧ್ಯಕ್ಷ, ತಾಪಂ ಇಒ ನಿಂಗಪ್ಪ ಮಸಳಿ ಅವರು ಭೇಟಿ ನೀಡಿ ಡಾ| ದಾನಿ ಅವರ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಪ್ರೋತ್ಸಾಹಿಸಿದರು.
ಇದೇ ವೇಳೆ ಮಾತನಾಡಿದ ತಹಶೀಲ್ದಾರ್ ರವಿ ಅಂಗಡಿ ಅವರು, ಇಂತಹ ಕಾರ್ಯಕ್ರಮಗಳಿಂದಲೇ ಉತ್ತಮ ಮತದಾನ ಗುರಿ ಮುಟ್ಟಲು ಸಾಧ್ಯವಿದೆ. ಎಲ್ಲ ಕ್ಷೇತ್ರದ ಜನರು ಸಾಮಾಜಿಕ ಬದ್ಧತೆಯೊಂದಿಗೆ ಪ್ರಜಾಭುತ್ವದ ಮತದಾನ ಹಕ್ಕು ಚಲಾಯಿಸುವುದು ಸಂವಿಧಾನದ ವಿಶೇಷ ಕೊಡುಗೆಯಾಗಿದೆ. ಈ ಜಾಗೃತಿಗೆ ತಾಲ್ಲೂಕು ಆಡಳಿತ ಧನ್ಯವಾದ ತಿಳಿಸುತ್ತದೆ ಎಂದರು. ಸ್ವೀಪ್ ಸಮಿತಿ ಅಧ್ಯಕ್ಷ, ತಾಪಂ ಇಒ ನಿಂಗಪ್ಪ ಮಸಳಿ ಅವರು, ಲೋಕಸಭೆ ಚುನಾವಣೆ ಪ್ರಜಾಭುತ್ವದ ಹಬ್ಬವಾಗಿದೆ. ಹಬ್ಬದ ಸಡಗರದಲ್ಲಿ ನಾವೆಲ್ಲರೂ ಭಾಗವಹಿಸಬೇಕಿದೆ. ಡಾ| ರವಿಕುಮಾರ ಮತದಾನ ವಿಭಿನ್ನ ಜಾಗೃತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಡಾ| ರವಿಕುಮಾರ ದಾನಿ ಮಾತನಾಡಿ, ಬಿಸಿಲಿಗೆ ನಿಡುಸುಯ್ಯುವ ಬದಲಾಗಿ ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರ ಕಾಳಜಿ ಅಗತ್ಯವಾಗಿದೆ. ಅದೇ ರೀತಿ ಸುಭದ್ರ ಪ್ರಜಾಪ್ರಭುತ್ವಕ್ಕೆ ಮತದಾನ ಅಗತ್ಯವಾಗಿದೆ ಎಂದರು. ಸಸಿಗಳನ್ನು ನೀಡಿದ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ (ಪ್ರಭಾರಿ) ರಿಯಾಜ್ ಗಣಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಗ್ರೆಡ್-2 ತಹಶೀಲ್ದಾರ್ ಮುರಳೀಧರ ಮೊಕ್ತೆದಾರ, ಪ್ರಗತಿ ಪರ ಕೃಷಿಕ ರಮೇಶ ಬಳೂಟಗಿ, ಡಾ| ಬಸವರಾಜ್ ವಸ್ತ್ರದ್, ಪಿಎಸ್‌ಐ ಮುದ್ದುರಂಗಸ್ವಾಮಿ, ಡಾ| ಕುಶಾಲ ರಾಯಬಾಗಿ, ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಶಾರದಾ ಶೆಟ್ಟರ್, ವಿಠಲ್ ಸಾ ಮಿಸ್ಕೀನ್, ಬಿಆರ್‌ಪಿ ಡಾ| ಜೀವನಸಾಬ್ ಬಿನ್ನಾಳ, ಮಲ್ಲಿಕಾರ್ಜುನ ಬಳಿಗಾರ, ಕಿರಣ್ ಬಳೂಟಗಿ, ಬಸವರಾಜ ಬಳೂಟಗಿ ಇತರರಿದ್ದರು.