ಕುಷ್ಟಗಿ: ಅತ್ಯಂತ ಕಡಿಮೆ ಬಜೆಟ್, ಸಂಪೂರ್ಣ ಗ್ರಾಮೀಣ, ಕಾಡು ಪ್ರದೇಶ ಹಾಗೂ ದೈವಾರಾಧನೆ ಹಿನ್ನೆಲೆಯುಳ್ಳ ಕಾಂತಾರ ಸಿನಿಮಾ ಯಶಸ್ವಿಯಾದಂತೆ ಈ ಭಾಗದ ಯುವ ಪ್ರತಿಭೆಗಳು ಅಭಿನಯಿಸಿದ ಫಿನಿಕ್ಸ್ ಚಿತ್ರವೂ ಕೂಡ ಯಶಸ್ವಿಯಾಗಲಿ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹಾರೈಸಿದರು.
ಇಲ್ಲಿನ ಬಸವ ಭವನದಲ್ಲಿ ಶ್ರೀ ವೆಂಕಟೇಶ್ವರ ಸಿನಿ ಕ್ರಿಯೇಷನ್ಸ್ ಅರ್ಪಿಸುವ ಫಿನಿಕ್ಸ್ ಚಲನಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು.
ಈ ಫಿನಿಕ್ಸ್ ಸಿನಿಮಾ ಮುಕ್ಕಾಲು ಭಾಗ ನಿರ್ಮಾಣಗೊಂಡಿದ್ದು, ಈ ಚಿತ್ರದ ತಾರಬಳಗದ ಪ್ರಮುಖ ನಟ ರಷೀದ್ ಮದ್ನಾಳ ಅಭಿನಯಿಸಿರುವುದು ಈ ಭಾಗಕ್ಕೆ ಅಚ್ಚರಿ ತರುವ ವಿಷಯವಾಗಿದೆ. ಈ ಯುವ ನಟನ ಸಾಹಸ ಮೆಚ್ಚುಗೆಯಾಗಿದೆ. ಸಿನಿಮಾ ನಿರ್ಮಾಣ ಈ ಭಾಗಕ್ಕೆ ಹೊಸತು, ಈ ಭಾಗದವರೇ ಅಭಿನಯಿಸಿರುವುದು ಎಂಬ ವಿಷಯ ಸಣ್ಣ ಮಾತಲ್ಲ ಎಂದರು.
ಬಳೂಟಗಿ ಗ್ರಾಮದ ಯುವ ಪ್ರತಿಭೆ ಈ ಸಿನಿಮಾದ ಮೂಲಕ ಮುನ್ನೆಲೆಗೆ ಬಂದಿರುವುದು ಈ ಭಾಗಕ್ಕೆ ಹೆಮ್ಮೆಯ ಸಂಗತಿ. ಸಿನಿಮಾ ಕ್ಷೇತ್ರದಲ್ಲಿ ಎಷ್ಟೋ ನಿರ್ಮಾಪಕರು, ನಟರು ಕೈ ಸುಟ್ಟುಕೊಂಡಿದ್ದಾರೆ. ಎಷ್ಟೋ ಚಿತ್ರಗಳು ಬಂದು ಕಾಣಲಾರದಂತೆ ಹೋಗಿವೆ. ಇಂದಿನದ್ದು ಇಂದೇ ಮರೆಯುವ ಈಗಿನ ಸಂದರ್ಭದಲ್ಲಿ ಸಮಾಜವನ್ನು ಸದೃಢಗೊಳಿಸುವ ಗ್ರಾಮೀಣ ಪ್ರದೇಶದ ಸೊಗಡು ಸಂಸ್ಕೃತಿ, ಸಂಸ್ಕಾರ ಹಿನ್ನೆಲೆಯ ಸಿನಿಮಾ ಮಾಡಿದರೆ ಬಹಳಷ್ಟು ಜನ ನೋಡುತ್ತಾರೆ ಎನ್ನುವುದಕ್ಕೆ ಕಾಂತರ ಸಿನಿಮಾ ಆಗಿದ್ದು, ಅದರಂತೆ ಫಿನಿಕ್ಸ್ ಯಶಸ್ವಿಯಾಗಲಿ ಎಂದರು.
ಮದ್ದಾನೇಶ್ವರಮಠದ ಶ್ರೀ ಕರಿಬಸವ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯವಹಿಸಿ ಮಾತನಾಡಿದರು.
ಚಲನಚಿತ್ರ ನಟ ಪ್ರತಾಪ ರೆಡ್ಡಿ ಬೆಂಗಳೂರು, ಜಿ.ಪಂ. ಮಾಜಿ ಸದಸ್ಯ ಕೆ.ಮಹೇಶ ಮಾತನಾಡಿ, ಫೀನಿಕ್ಸ್ ಪಕ್ಷಿಯಂತೆ ಮೇಲೆದ್ದು ಬರಲಿ. ಸಿನೆಮಾದಲ್ಲಿ ಈ ಭಾಗದ ಕಲಾವಿದರು ಅಭಿನಯಿಸಿರುವುದು ಹೆಮ್ಮೆಯ ವಿಷಯವಾಗಿದ್ದು, ಈ ಸಿನಿಮಾ ಶತದಿನೋತ್ಸವ ಆಚರಿಸಲಿ ಎಂದರು.
ನಿರ್ದೇಶಕ ಹೊಸೂರು ವೆಂಕಟ್, ಕಾಂಗ್ರೆಸ್ ಪಕ್ಷದ ಯುವ ಮುಖಂಡ, ಬಿಜೆಪಿ ಯುವ ಮುಖಂಡ, ಲಾಡ್ಲೆ ಮಷಾಕ್ ದೋಟಿಹಾಳ ಮಾತನಾಡಿ, ಬಳೂಟಗಿ ಗ್ರಾಮದ ಯುವ ಪ್ರತಿಭೆ ರಷೀದ್ ರಾಜೇಸಾಬ್ ಮದ್ನಾಳ, ರಕ್ಷಿತ್ ಹೆಸರಿನಲ್ಲಿ ಚಲನಚಿತ್ರ ಅಭಿನಯ ರಂಗಕ್ಕೆ ಕಾಲಿರಿಸಿದ್ದು, ನಮ್ಮ ಭಾಗದ ಯುವ ಪ್ರತಿಭೆಗಳಿಗೆ ಯಸಸ್ವಿಯಾಗಲಿ ಎಂದರು.
ಮಹಿಬೂಬ್ ಬಡಿಗೇರ ಪ್ರಾಸ್ತಾವಿಕ ಮಾತನಾಡಿ, ಮಹೇಶ ಎಚ್. ನಿರೂಪಿಸಿದರು.