ಬಹುತಾರಾಗಣದ “ಕುರುಕ್ಷೇತ್ರ’ ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಆಗಸ್ಟ್ 9, ವರಮಹಾಲಕ್ಷ್ಮೀ ಹಬ್ಬದಂದು ಚಿತ್ರ ಬಿಡುಗಡೆಯಾಗುತ್ತಿದೆ. ಚಿತ್ರ ನೋಡಲು ದರ್ಶನ್ ಅಭಿಮಾನಿಗಳ ಒತ್ತಡ ಹೆಚ್ಚಾಗಿರುವುದರಿಂದ ಆ.8 ರ ಗುರುವಾರ ಸಂಜೆಗೆ ಶುರುವಾದರೂ ಅಚ್ಚರಿ ಇಲ್ಲ ಎಂಬುದು ಚಿತ್ರ ತಂಡದ ಮಾತು. “ಕುರುಕ್ಷೇತ್ರ’ ಕನ್ನಡದ ಹೆಮ್ಮೆ ಎಂದು ಹೇಳುವ ಮುನಿರತ್ನ, ಚಿತ್ರದ ಕುರಿತು ಒಂದಷ್ಟು ಮಾತನಾಡಿದ್ದಾರೆ.
ಏಕಕಾಲಕ್ಕೆ ರಿಲೀಸ್ ಇಲ್ಲ, ಮೊದಲು ಕನ್ನಡ-ತೆಲುಗು: ಎಲ್ಲರಿಗೂ ಗೊತ್ತಿರುವಂತೆ “ಕುರುಕ್ಷೇತ್ರ’ ಐದು ಭಾಷೆಯಲ್ಲಿ ತಯಾರಾಗಿದೆ. ಈ ಹಿಂದೆ ಏಕಕಾಲದಲ್ಲೇ ಐದು ಭಾಷೆಯಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಚಿತ್ರ ತಂಡ ಇದೀಗ ಸ್ವಲ್ಪ ಬದಲಾವಣೆ ಮಾಡಿಕೊಂಡಿದೆ. ಆ ಬಗ್ಗೆ ನಿರ್ಮಾಪಕ ಮುನಿರತ್ನ ಕೊಡುವ ವಿವರ ಇದು. “ಆಗಸ್ಟ್ 9, ವರಮಹಾಲಕ್ಷ್ಮೀ ಹಬ್ಬಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ. ಆದರೆ, ಅಂದು ಕನ್ನಡ ಹಾಗು ತೆಲುಗು ಭಾಷೆಯಲ್ಲಿ ಮಾತ್ರ “ಕುರುಕ್ಷೇತ್ರ’ ಬಿಡುಗಡೆಯಾಗುತ್ತಿದೆ. ಎರಡು ವಾರಗಳ ಬಳಿಕ ತಮಿಳು ಹಾಗು ಮಲಯಾಳಂ ಭಾಷೆಯಲ್ಲಿ ತೆರೆಗೆ ಬರಲಿದೆ. ನಂತರದ ಎರಡು ವಾರಗಳ ಬಳಿಕ ಹಿಂದಿಯಲ್ಲಿ “ಕುರುಕ್ಷೇತ್ರ’ ತೆರೆಕಾಣಲಿದೆ.
ಚಾಣಾಕ್ಯ ಚಂದ್ರಗುಪ್ತ ಮಾಡುವ ಆಸೆ: ಇನ್ನು ಮುಂದಿನ ದಿನಗಳಲ್ಲಿ ನಾನು ಇದೇ ರೀತಿಯ ಚಿತ್ರಗಳನ್ನು ಮಾಡುವ ನಿರ್ಧಾರ ಮಾಡಿದ್ದೇನೆ. ಕಮರ್ಷಿಯಲ್ ಸಿನಿಮಾಗಳನ್ನು ಮಾಡಿ, ನೋಡುಗರನ್ನು ಸುಸ್ತು ಮಾಡಿಸುವುದಕ್ಕಿಂತ ಈ ತರಹದ ಪೌರಾಣಿಕ ಚಿತ್ರಗಳನ್ನು ಕೊಡಬೇಕೆಂಬ ಉದ್ದೇ ಹೊಂದಿದ್ದೇನೆ. ಆ ನಿಟ್ಟಿನಲ್ಲಿ ನಾನು “ಕುರುಕ್ಷೇತ್ರ’ ಚಿತ್ರದ ಬಳಿಕ ಮತ್ತೂಂದು ಬಿಗ್ ಬಜೆಟ್ ಚಿತ್ರ ಕೊಡಲು ಸಜ್ಜಾಗಲು ಯೋಚಿಸಿದ್ದೇನೆ. ನನಗೆ “ಚಾಣಾಕ್ಯ ಚಂದ್ರಗುಪ್ತ’ ಸಿನಿಮಾ ಮಾಡುವ ಆಸೆ ಇದೆ. ಆ ಚಿತ್ರದ ಮೂಲಕ ಉಪೇಂದ್ರ, ಪುನೀತ್‌ರಾಜಕುಮಾರ್, ಸುದೀಪ್ ಅವರನ್ನು ಸೇರಿಸಿ ಮಾಡುವ ಆಸೆ ಇದೆ.
ಅನಿಲ್-ಉದಯ್ ಇದ್ದಿದ್ದರೆ ಹಿಂದಿ ನಟರು ಇರುತ್ತಿರಲಿಲ್ಲ: ನನ್ನ ಪ್ರಕಾರ “ಕುರುಕ್ಷೇತ್ರ’ ಕನ್ನಡದ ಹೆಮ್ಮೆ ಎಂದು ಹೇಳಲು ಸಂತಸವಾಗುತ್ತದೆ. ಇದೊಂದು ದಾಖಲೆಯ ಚಿತ್ರವಾಗಲಿದೆ. ವಿಶೇಷವೆಂದರೆ, ಈ ಚಿತ್ರದಲ್ಲಿ ಇಬ್ಬರು ಬಾಲಿವುಡ್ ನಟರನ್ನು ಹೊರತುಪಡಿಸಿದರೆ, ನಮ್ಮ ಕನ್ನಡದ ನಟರೇ ತುಂಬಿದ್ದಾರೆ. ಭೀಷ್ಮನ ಪಾತ್ರ ನೆನಪಿಸಿ ಕೊಂಡರೆ ಅದು ಅಂಬರೀಶ್ ಅವರನ್ನು ಹೊರತುಪಡಿಸಿ ಬೇರಾರೂ ಮಾಡಲು ಸಾಧ್ಯವೇ ಇಲ್ಲ. ದುರ್ಯೋಧನ ಪಾತ್ರ ಅಂದಾಗ ಅಲ್ಲಿ ದರ್ಶನ್ ನೆನಪಾಗುತ್ತಾರೆ. ಉಳಿದಂತೆ “ಕುರುಕ್ಷೇತ್ರ’ದಲ್ಲಿ ಬರುವ ಧರ್ಮರಾಯ, ಕರ್ಣ, ಅಭಿಮನ್ಯು, ನಕುಲ, ಸಹದೇವ ಪಾತ್ರ ನಿರ್ವಹಿಸಿರುವರೆಲ್ಲರೂ ಕನ್ನಡದವರೇ. ಅನಿಲ್ ಮತ್ತು ಉದಯ್ ನಟರು ಇದ್ದಿದ್ದರೆ, ಹಿಂದಿಯ ಕಲಾವಿದರನ್ನು ಕರೆಸುತ್ತಿರಲಿಲ್ಲ.
ಇದು ನನ್ನ ದೃಷ್ಟಿಕೋನದ ಕುರುಕ್ಷೇತ್ರ: ಎಲ್ಲರಿಗೂ ಒಂದು ಪ್ರಶ್ನೆ ಕಾಡುತ್ತಲೇ ಇದೆ. ಇದು “ಮುನಿರತ್ನ’ ಕುರುಕ್ಷೇತ್ರ ಹೇಗಾಗುತ್ತೆ ಎಂಬುದೇ ಆ ಪ್ರಶ್ನೆ. ಮಹಾಭಾರತವನ್ನು ಓದಿದವರು ಯಾರು ಯಾವ ಭಾಗವನ್ನಾದರೂ ಇಟ್ಟುಕೊಂಡು ಕಥೆ ಬರೆಯಬಹುದು. ಮಹಾಭಾರತ ಓದಿದರೆ, ಒಬ್ಬೊಬ್ಬರಿಗೆ ಒಂದೊಂದು ರೀತಿಯ ಕಥೆ ಹುಟ್ಟುಕೊಳ್ಳುತ್ತದೆ. ಒಂದೊಂದು ದೃಷ್ಟಿಕೊನದಲ್ಲಿ ಕಥೆ ಬರೆದುಕೊಳ್ಳಬಹುದು. ನನಗೆ ದುರ್ಯೋಧನ ಭಾಗ ಇಷ್ಟವಾಯ್ತು. ಅದನ್ನೇ ಇಲ್ಲಿ ಬರೆದು, “ಕುರುಕ್ಷೇತ್ರ’ ಎಂದು ನಾಮಕರಣ ಮಾಡಿ ಸಿನಿಮಾ ಮಾಡಲಾಗಿದೆ. ಸಿನಿಮಾ ನೋಡಿದವರಿಗೆ ಎಲ್ಲವೂ ಅರ್ಥವಾಗುತ್ತೆ. ನನಗೆ ಮೊದಲಿನಿಂದಲೂ ದುರ್ಯೋಧನ ಭಾಗ ವನ್ನು ಸಿನಿಮಾ ಮಾಡುವ ಆಸೆ ಇತ್ತು. ಅದು “ಕುರುಕ್ಷೇತ್ರ’ ಮೂಲಕ ಈಡೇರಿದೆ. ರಾಜಮೌಳಿ “ಬಾಹುಬಲಿ’ ಅಂತ ಹಾಕಬಹುದು. ನಾವೇಕೆ ನಮ್ಮ ದೃಷ್ಟಿಕೋನದಲ್ಲಿ ಕಥೆ ಮಾಡಿ ಕ್ರೆಡಿಟ್ ತಗೋಬಾರದು?
ದುಬಾರಿ ಮೊತ್ತಕ್ಕೆ ಟಿವಿ ರೈಟ್ಸ್: ಕನ್ನಡದಲ್ಲಿ ಈ ರೀತಿಯ ಚಿತ್ರ ಮಾಡಬೇಕೆಂಬ ಕನಸು ಇತ್ತು. ಅದು ಈಗ ಈಡೇರಿದೆ. ಈಗಾಗಲೇ “ಕುರುಕ್ಷೇತ್ರ’ಕ್ಕೆ ಎಲ್ಲೆಡೆಯಿಂದಲೂ ಬೇಡಿಕೆ ಬಂದಿದೆ. ಹಿಂದಿ ಟಿವಿ ರೈಟ್ಸ್ 8 ಕೋಟಿಗೆ ಹೋಗಿದ್ದರೆ, ಕನ್ನಡದಲ್ಲೂ ಸಹ 8 ಕೋಟಿ ರುಪಾಯಿಗೆ ಮಾರಾಟವಾಗಿದೆ. ಈಗಾಗಲೇ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದ್ದು, ಬೇಡಿಕೆ ಬರುತ್ತಿದೆ. ಅಭಿಮಾನಿಗಳಿಂದ ಸಾಕಷ್ಟು ಡಿಮ್ಯಾಂಡ್ ಇರುವುದರಿಂದ ಆ.8 ರ ಗುರುವಾರ ಸಂಜೆಯೇ, ಬಿಡುಗಡೆಯಾಗುವ ಸಾಧ್ಯತೆಯೂ ಇದೆ. ಇನ್ನೊಂದು ವಿಷಯ ಸ್ಪಷ್ಟಪಡಿಸುತ್ತೇನೆ. ಇಲ್ಲಿ ಯಾರಿಗೂ ಹೆಚ್ಚು ಸ್ಕೋಪ್ ಕೊಟ್ಟಿಲ್ಲ. ಎಲ್ಲ ರಿಗೂ ಪಾತ್ರ ಏನು ಕೇಳುತ್ತಿದೆಯೋ ಅಷ್ಟನ್ನೇ ಕೊಡಲಾಗಿದೆ. ಇಲ್ಲಿ ಯಾರೂ ಹೆಚ್ಚು, ಕಮ್ಮಿ ಎಂಬುದಿಲ್ಲ. ಎಂಬುದು ಮುನಿರತ್ನ ಅವರ ಮಾತು.
ಅದೇನೆ ಇರಲಿ, ಈಗಾಗಲೇ ಚಿತ್ರಮಂದಿರಗಳ ಮುಂದೆಯೂ ಚಿತ್ರದ ಕಟೌಟ್‌ಗಳು ತಲೆ ಎತ್ತಿವೆ. ಅಂಬರೀಶ್ ಹಾಗೂ ದರ್ಶನ್ ಕಟೌಟ್‌ಗಳು ಚಿತ್ರಮಂದಿರದ ಮುಂದೆ ರಾರಾಜಿಸಿವೆ. ಪ್ರಸನ್ನ ಚಿತ್ರಮಂದಿರದ ಮುಂದೆ “ಕುರುಕ್ಷೇತ್ರ’ ಚಿತ್ರದ ಕಟೌಟ್ ತಲೆ ಎತ್ತಿರುವುದು ಅಭಿಮಾನಿಗಳು ಹಾಗು ಪ್ರೇಕ್ಷಕರಲ್ಲಿ ಹೊಸ ಥ್ರಿಲ್ ಹುಟ್ಟುಹಾಕಿರುವುದಂತೂ ಸುಳ್ಳಲ್ಲ.