ಕುರುಗೋಡು: ಸಹಸ್ರಾರು ಭಕ್ತರ ಆರಾಧ್ಯ ದೈವ ಹಾಗೂ ಐತಿಹಾಸಿಕ ಪ್ರಸಿದ್ಧಿ ಕುರುಗೋಡು ಶ್ರೀ ದೊಡ್ಡ ಬಸವೇಶ್ವರ ಸ್ವಾಮಿಯ ಶಿವಶರಣ ತಾಯಿ ನೀಲಮ್ಮ ದೇವಿಯ ಪಲ್ಲಕ್ಕಿ ಉತ್ಸವ ಎಳೆಯುವ ಸಂದರ್ಭದಲ್ಲಿ ಹಾಲಿ ಶಾಸಕ ಜೆ.ಎನ್.ಗಣೇಶ್ ಅವರ ಭಾವಚಿತ್ರಗಳು ಪ್ರದರ್ಶನಗೊಂಡಿರುವುದು ಸಂಪ್ರದಾಯಕ್ಕೆ ಮಸಿ ಬಡಿದಂತಾಗಿದೆ.
ಪಲ್ಲಕ್ಕಿ ಉತ್ಸವದಲ್ಲಿ ನಡೆದ ಶಾಸಕರ ಭಾವಚಿತ್ರಗಳ ಪ್ರದರ್ಶನವನ್ನು ಸಾಕಷ್ಟು ಭಕ್ತರು ಖಂಡಿಸುವುದರೊಂದಿಗೆ ಅನೇಕ ವರ್ಷಗಳಿಂದ ಯಾವುದೇ ರಾಜಕೀಯದ ಕಪ್ಪುಚುಕ್ಕಿ ಇಲ್ಲದೇ ನಡೆದುಕೊಂಡು ಬಂದ ಸಂಪ್ರದಾಯಕ್ಕೆ ಮಸಿ ಬಡಿಯುವ ಕೆಲಸವಾಗಿದೆ ಎಂಬ ಮಾತುಗಳು ಕೇಳಿ ಬಂದಿದೆ.
ಶಾಸಕರ ಭಾವಚಿತ್ರಗಳ ಪ್ರದರ್ಶನದ ಉದ್ದೇಶವೇನು?. ಹಾಗೂ ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳಲು ಇವರಪ್ಪನ ಮನೆಯ ಆಸ್ತಿನಾ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಕಂಪ್ಲಿ ಕ್ಷೇತ್ರದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಹಲವು ವರ್ಷದಿಂದ ಸಂಪ್ರದಾಯ ಬದ್ಧವಾಗಿ ಕುರುಗೋಡು ಜನತೆ ಹಾಗೂ ಹಿಂದೂ ಧಾರ್ಮಿಕ ದತ್ತಿ ಇಲಾಖೆಯು ಕುರುಗೋಡಿನಲ್ಲಿ ಶ್ರೀ ದೊಡ್ಡ ಬಸವೇಶ್ವರ ಜಾತ್ರಾ ಮತ್ತು ಪಲ್ಲಕ್ಕಿ ಉತ್ಸವ, ಮಹಾರಥೋತ್ಸವ ನಡೆದುಕೊಂಡು ಬಂದಿದೆ.
Related Articles
ಇಷ್ಟು ವರ್ಷಗಳ ಪೈಕಿ ಎಂದಿಗೂ ಇಲ್ಲಿನ ಪಲ್ಲಕ್ಕಿ ಉತ್ಸವ ಮತ್ತು ಮಹಾರಥೋತ್ಸವದಲ್ಲಿ ರಾಜಕೀಯ ಪ್ರವೇಶಿರಲಿಲ್ಲ. ಆದರೆ, ಈ ಬಾರಿಯ ಕುರುಗೋಡಿನ ದೊಡ್ಡ ಬಸವೇಶ್ವರ ದೇವರ ಶಿವಶರಣ ತಾಯಿ ನೀಲಮ್ಮ ದೇವಿಯ ಪಲ್ಲಕ್ಕಿ ಉತ್ಸವದಲ್ಲಿ ಸಂಪ್ರದಾಯಕ್ಕೆ ದಕ್ಕೆ ತರುವಂತಹ ಘಟನವೊಂದು ನಡೆದಿದೆ.
ಹೌದು. ಇಲ್ಲಿನ ಉತ್ಸವ ಸಂದರ್ಭದಲ್ಲಿ ಹಾಲಿ ಶಾಸಕರ ಭಾವಚಿತ್ರ ಪ್ರಜ್ವಲಿಸಿ, ಶಿವಶರಣ ತಾಯಿ ನೀಲಮ್ಮ ದೇವಿಗೆ ಅವಮಾನ ಮಾಡುವ ಜತೆಗೆ ಕಪ್ಪು ಮಸಿ ಬಡಿಯುವಂತಹ ಕೆಲಸವಾಗಿದೆ ಎಂಬ ಗುಸು ಗುಸು ಮಾತುಗಳು ಕ್ಷೇತ್ರಾದ್ಯಾಂತ ಹರಿದಾಡುತ್ತಿವೆ. ಮತ್ತು ಹಾಲಿ ಶಾಸಕರ ಭಾವಚಿತ್ರಗಳ ಪ್ರದರ್ಶನದ ಹಿನ್ನಲೆ ಇಲ್ಲಿನ ಉತ್ಸವದಲ್ಲಿ ರಾಜಕೀಯ ಬೇಸೆಯುವದಕ್ಕೆ ಇವರ ಅಪ್ಪನ ಆಸ್ತಿನಾ ಎಂಬ ಪೋಸ್ಥ್ ಅನ್ನು ವಾಟ್ಸಾಪ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.
ಪೋಸ್ಟ್ ಕ್ಷೇತ್ರದಲ್ಲಿ ಜನರ ಚರ್ಚೆಗೆ ಕಾರಣವಾಗಿದೆ. ಉತ್ಸವದಲ್ಲಿ ಕೆಲ ಕಿಡಿಗೇಡಿಗಳು ಹಾಲಿ ಮತ್ತು ಮಾಜಿ ಶಾಸಕರ ಬ್ಯಾನರ್ಲನ್ನು ಹರಿದು, ಕಾಲಿನಿಂದ ತುಳಿದಿದ್ದಾರೆ ಎಂಬ ಮಾತುಗಳು ಕೇಳಿ ಬಂದವು.
ಒಟ್ನಲ್ಲಿ ಈ ಬಾರಿಯ ಉತ್ಸವದಲ್ಲಿ ನಡೆದ ಅವಘಡಗಳು ಕ್ಷೇತ್ರದಲ್ಲಿ ಚರ್ಚೆಗೆ ಗ್ರಾಸವಾಗುವ ಜತೆಗೆ ಜನರ ಮುನ್ನಲೆಗೆ ಬರುತ್ತಿವೆ. ಮತ್ತು ಈ ಘಟನೆಗಳು ಮುಂದಿನ ದಿನದಲ್ಲಿ ಯಾವ ತಿರುವು ಪಡೆದುಕೊಳ್ಳುತ್ತವೆ ಎಂಬುದನ್ನು ಕಾದು ನೋಡಬೇಕಾಗಿದೆ. ಹಾಗೂ ಕುರುಗೋಡಿನ ಪಲ್ಲಕ್ಕಿ ಉತ್ಸವದಲ್ಲಿ ನಡೆದ ಅವಘಡದ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಏನಾದರೂ ಕ್ರಮಕೈಗೊಂಡು, ಮುಂದೆ ಈ ಘಟನೆಗಳು ನಡೆಯದಂತೆ ನೋಡಿಕೊಳ್ಳುತ್ತಾರಾ ಎಂಬುದು ಮುಂದಿನ ದಿನದಲ್ಲಿ ತಿಳಿಯಲಿದೆ.