Advertisement

Ratna Bhandar: 46 ವರ್ಷಗಳ ಬಳಿಕ ತೆರೆದ ಪುರಿಯ ಜಗನ್ನಾಥ ರತ್ನ ಭಂಡಾರ ಖಜಾನೆ

02:45 PM Jul 14, 2024 | Team Udayavani |

ಪುರಿ: 12ನೇ ಶತಮಾನದ ಪುರಿಯ ಜಗನ್ನಾಥ ದೇವಾಲಯದ ಖಜಾನೆಯಾದ ರತ್ನ ಭಂಡಾರವನ್ನು 46 ವರ್ಷಗಳ ನಂತರ ಬೆಲೆಬಾಳುವ ವಸ್ತುಗಳ ದಾಸ್ತಾನು ಮತ್ತು ಅದರ ರಚನೆಯ ದುರಸ್ತಿಗಾಗಿ ಭಾನುವಾರ ಮತ್ತೆ ತೆರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಈ ಉದ್ದೇಶಕ್ಕಾಗಿ ರಾಜ್ಯ ಸರ್ಕಾರ ರಚಿಸಿದ್ದ ಸಮಿತಿಯ ಸದಸ್ಯರು ಮಧ್ಯಾಹ್ನ 12 ಗಂಟೆ ಸುಮಾರಿಗೆ ದೇವಸ್ಥಾನಕ್ಕೆ ಪ್ರವೇಶಿಸಿ, ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ, ಭಂಡಾರವನ್ನು ಪುನಃ ತೆರೆಯಲಾಯಿತು ಎಂದು ವರದಿಯಾಗಿದೆ.

“ಸ್ವಾಮಿ ಜಗನ್ನಾಥ, ಒಡಿಯಾ ಜನರು ಒಡಿಯಾ ಅಸ್ಮಿತೆಯ ಭಾಗವಾಗಿ ಮುಂದುವರಿಯುವ ಪ್ರಯತ್ನ ಮಾಡಲಾಗುತ್ತಿದೆ” ಎಂದು ಸಿಎಂ ಕಚೇರಿ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಲಾಗಿದೆ.

“ನಿಮ್ಮ ಇಚ್ಛೆಯ ಮೇರೆಗೆ ಜಗನ್ನಾಥ ದೇಗುಲಗಳ ನಾಲ್ಕು ದ್ವಾರಗಳನ್ನು ತೆರೆಯಲಾಗಿತ್ತು. ಇಂದು ನಿಮ್ಮ ಇಚ್ಛೆಯ ಮೇರೆಗೆ 46 ವರ್ಷಗಳ ನಂತರ ರತ್ನ ಭಂಡಾರವನ್ನು ಮಹತ್ತರ ಉದ್ದೇಶಕ್ಕಾಗಿ ತೆರೆಯಲಾಗಿದೆ” ಎಂದು ಪೋಸ್ಟ್‌ನಲ್ಲಿ ಹೇಳಲಾಗಿದ್ದು, ಮಧ್ಯಾಹ್ನ 1.28ರ ಶುಭ ಮುಹೂರ್ತದಲ್ಲಿ ಖಜಾನೆಯನ್ನು ಪುನಃ ತೆರೆಯಲು ನಿರ್ಧರಿಸಲಾಯಿತು ಎಂದು ಬರೆಯಲಾಗಿದೆ.

Advertisement

ಖಜಾನೆ ತೆರೆದಾಗ ಹಾಜರಿದ್ದ 11 ಜನರಲ್ಲಿ ಒರಿಸ್ಸಾದ ಮಾಜಿ ಹೈಕೋರ್ಟ್ ನ್ಯಾಯಾಧೀಶ ಬಿಸ್ವನಾಥ್ ರಾತ್, ಶ್ರೀ ಜಗನ್ನಾಥ ದೇವಸ್ಥಾನದ ಆಡಳಿತ (ಎಸ್ಜೆಟಿಎ) ಮುಖ್ಯ ಆಡಳಿತಾಧಿಕಾರಿ ಅರಬಿಂದ ಪಾಧಿ, ಎಎಸ್ಐ ಸೂಪರಿಂಟೆಂಡೆಂಟ್ ಡಿಬಿ ಗಡನಾಯಕ್ ಮತ್ತು ಪುರಿಯ ಪಟ್ಟದ ರಾಜ ಗಜಪತಿ ಮಹಾರಾಜನ ಪ್ರತಿನಿಧಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏನಿದು ಭಂಡಾರ

ಪುರಿ ಜಗನ್ನಾಥ ದೇವಸ್ಥಾನದ ಉತ್ತರ ಭಾಗದ ಜಗನ್ಮೋಹನ ಎಂಬ ಪ್ರದೇಶದಲ್ಲಿ ಈ ರತ್ನ ಭಂಡಾರವಿದ್ದು ದೇವಾಲಯದ ಮಾದರಿಯನ್ನು ಹೊಂದಿದೆ. ಇದು 11.78 ಮೀಟರ್‌ ಎತ್ತರವಿದ್ದು ಇದರಲ್ಲಿ ಹೊರ ಭಂಡಾರ (ಬಾಹರ್‌ ಭಂಡಾರ್‌), ಒಳ ಭಂಡಾರ (ಭೀತರ್‌ ಭಂಡಾರ್‌) ಎಂಬ ಗೋಪುರಗಳಿವೆ. ಇದರಲ್ಲಿ 5 ಚೇಂಬರ್‌ಗಳಿದ್ದು ಹೊರ ಭಂಡಾರಕ್ಕಿಂತ ಒಳ ಭಂಡಾರ ವಿಶಾಲವಾಗಿದೆ. ಜಗನ್ನಾಥನ ವಾರ್ಷಿಕ ರಥಯಾತ್ರೆಗೆ ಬಳಸುವ ಆಭರಣಗಳು ಹೊರ ಭಂಡಾರದಲ್ಲಿದ್ದು ಒಳ ರತ್ನ ಭಂಡಾರದ 3 ಚೇಂಬರ್‌ಗಳಲ್ಲಿ 15 ಮರದ ಪೆಟ್ಟಿಗೆಗಳ ತುಂಬ ಬರೀ ಬೆಳ್ಳಿ, ಬಂಗಾರ, ರೂಬಿ, ವಜ್ರ ಇತ್ಯಾದಿಗಳ ಅಪರೂಪದ ವಸ್ತುಗಳೇ ತುಂಬಿವೆ ಎನ್ನಲಾಗಿದೆ.

ಪುರಿ ರಾಜರು, ಒಡಿಶಾವನ್ನು ಆಳಿದ ರಾಜಮನೆತನಗಳು, ನೇಪಾಲದ ದೊರೆಗಳು ಶ್ರೀ ಜಗನ್ನಾಥನ ಭಕ್ತರಾಗಿದ್ದು ಅವರು ದೇವರಿಗೆ, ದೇವಸ್ಥಾನಕ್ಕೆ ದಾನವಾಗಿ ಕೊಟ್ಟ ವಸ್ತುಗಳನ್ನು ಇಲ್ಲಿಡಲಾಗಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next