Advertisement

ಇಂದು ಕುರುಗೋಡು ಶ್ರೀ ದೊಡ್ಡಬಸವೇಶ್ವರ ಮಹಾರಥೋತ್ಸವ

02:43 PM Mar 07, 2023 | Team Udayavani |

ಕುರುಗೋಡು: ಹಂಪಿ ವಿರೂಪಾಕ್ಷ ದೇವರಿಗೆ ಎದುರು ಬಸವಣ್ಣ ಎಂದೇ ಪ್ರತೀತಿ ಇರುವ ಕುರುಗೋಡು ಶ್ರೀ ದೊಡ್ಡಬಸವೇಶ್ವರ ಜಾತ್ರೆ ಇಂದು ಸಂಜೆ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ. ಈ ಭಾಗದ ಏಕಶಿಲಯ ಬೃಹತ್‌ ನಂದಿ ವಿಗ್ರಹ ಇದಾಗಿದ್ದು, ಆಕಾರಕ್ಕೆ ತಕ್ಕಂತೆ ಉದ್ದವಾದ ಕೋಡುಗಳಿಲ್ಲದೆ ಕಿರಿದಾದ ಕೋಡುಗಳಿವೆ, ಆ ಕಾರಣಕ್ಕಾಗಿ ಈ ಊರಿಗೆ ಆಡುಮಾತಿನಲ್ಲಿ ಕುರುಗೋಡು ಎನ್ನಲಾಯಿತು ಎಂದು ಹಿರಿಯರು ಹೇಳುತ್ತಾರೆ.

Advertisement

ಪ್ರತಿ ವರ್ಷ ಹೋಳಿ ಹುಣ್ಣಿಮೆಯ ದಿನ ಈ ಜಾತ್ರೆ ಜರುಗುತ್ತದೆ. ದಕ್ಷಿಣ ಕಾಶಿ ಎಂದೇ ಖ್ಯಾತವಾದ ಕುರುಗೋಡು ಜಾತ್ರೆಗೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಕೆರೆ, ಮುಷ್ಟಿಗಟ್ಟೆ, ಸೋಮಲಾಪುರ ಗ್ರಾಮಗಳ ಕಟ್ಟೆಮನೆ ನಾಯಕ ಜನಾಂಗದವರು ಜಾತ್ರೆಯ ಹಿಂದಿನ ದಿನದಿಂದಲೇ ಉಪವಾಸವಿದ್ದು, ಬೆಳಿಗ್ಗೆ ಬರಿಕಾಲಿನಲ್ಲಿ ನಡೆದುಕೊಂಡು ಬಂದು “ದೂಳುಗಾಯಿ” ಒಡೆದು ಕುಂಭವನ್ನು ಮೆರವಣಿಗೆಯಲ್ಲಿ ತಂದು ದೇವರಿಗೆ ಅರ್ಪಿಸಿ ರಥೋತ್ಸವಕ್ಕೆ ಚಾಲನೆ ನೀಡುತ್ತಾರೆ.

ಶಿವರಾತ್ರಿಯಂದು ರಥದ ಗಡ್ಡೆಯನ್ನು ಹೊರತೆಗೆದು ಸ್ವತ್ಛಗೊಳಿಸಿ ಬಣ್ಣ ಹಚ್ಚಿ, ಅಲಂಕರಿಸುತ್ತಾರೆ. ಎಂಟು ದಿನ ಮೊದಲು ಶ್ರೀ ದೊಡ್ಡಬಸವೇಶ್ವರ ಮತ್ತು ನೀಲಮ್ಮನಿಗೆ ಕಂಕಣ ಕಟ್ಟುತ್ತಾರೆ. ವಿವಿಧ ಧಾರ್ಮಿಕ ಕಾರ್ಯಕ್ರಮ, ವಿಶೇಷ ಪೂಜೆ ನಡೆದು ರಥೋತ್ಸವ ನಡೆಯುತ್ತದೆ.

ಪರಮಭಕ್ತೆ ನೀಲಮ್ಮ: ಇಲ್ಲಿಗೆ 25 ಕಿ.ಮೀ ದೂರದ ಸಿಂದಿಗೇರಿ ಮೂಲದ ಶರಣೆ ನೀಲಮ್ಮ ಶ್ರೀ ದೊಡ್ಡಬಸವೇಶ್ವರನ ಪರಮ ಭಕ್ತೆ. ಸಿಂದಿಗೇರಿಯ ಲಿಂಗಾಯತ ಲಾಳಗೊಂಡರ ಕುಟುಂಬದ ಕೆಂಚಮ್ಮ (ನೀಲಮ್ಮನ ಮೊದಲ ಹೆಸರು) ಬಾಲ್ಯದಿಂದಲೂ ದೈವಭಕ್ತೆ. ಒಮ್ಮೆ ಹತ್ತಿ ಹೊಲದಲ್ಲಿ ಬೃಹದಾಕಾರದ ಬಸವಣ್ಣನ ಮೂರ್ತಿಯನ್ನು ನೋಡಿ ಪುರಾಣಗಳಲ್ಲಿ ಕೇಳುತ್ತಿದ್ದ ಬಸವಣ್ಣನೇ ಈತನೆಂದು ಗ್ರಹಿಸಿ, ಯೋಗದ ಮೂಲಕ ಅರಿಯಲು ತೊಡಗುತ್ತಾಳೆ.

ಒಮ್ಮೆ ಬಸವಣ್ಣನೇ ಜಂಗಮರೂಪಿಯಾಗಿ ಕೆಂಚಮ್ಮನ ಮನೆಗೆ ಭಿಕ್ಷೆ ಬೇಡಲು ಬಂದಾಗ ಕೆಂಚಮ್ಮ ಸ್ನಾನ ಮಾಡುತ್ತಿದ್ದಳಂತೆ. ತಾಯಿ ಹೊರಗೆ ಹೋಗಿ ಭಿಕ್ಷೆ ನೀಡಿ ಬರುವುದರೊಳಗೆ ಕೆಂಚಮ್ಮ ಬಚ್ಚಲಲ್ಲಿ ಮಾಯವಾಗಿರುತ್ತಾಳೆ. (ಇಂದಿಗೂ ಆ ಬಚ್ಚಲನ್ನು ಸಿಂದಿಗೇರಿಯಲ್ಲಿ ನೋಡಬಹುದು). ನಂತರ ಈಕೆಯನ್ನು ಹುಡುಕಲಾಗಿ ಕುರುಗೋಡಿನಲ್ಲಿರುವ ಸುದ್ದಿ ತಿಳಿಯುತ್ತದೆ. ಹಿರಿಯರು ಬಂದು ಕರೆದಾಗ, ನಾನು ಎಲ್ಲಿಗೂ ಬರುವುದಿಲ್ಲ, ಬಸವನೇ ನನ್ನ ಪತಿ, ಕುರುಗೋಡಿನಲ್ಲಿಯೇ ನನ್ನ ವಾಸ ಎಂದು ವಾದಿಸಿ ಅಲ್ಲಿಯೇ ನೆಲೆ ನಿಲ್ಲುತ್ತಾಳೆ ಶ್ರೀ ಶಿವಶರಣೆ ನೀಲಮ್ಮ.

Advertisement

ಹೇಮಕೂಟ ಪೀಠದ ದ್ವಿತೀಯ ಶಂಭು ಎನಿಸಿದ ಕಪ್ಪಿನ ಚನ್ನಬಸವ ಮಹಾಸ್ವಾಮಿಗಳು ಈಕೆಯ ಯೋಗ ವ್ಯಕ್ತಿತ್ವವನ್ನು ಅರಿತು ಇಷ್ಟಲಿಂಗ ಸಂಸ್ಕಾರ ನೀಡಿ ದೊಡ್ಡಬಸವೇಶ್ವರನ ಹಿಂದೆ ಇದ್ದ ಬೇವಿನ ಮರದಡಿಯಲ್ಲಿ ಪೂಜಾದಿ ಆಚರಣೆಗಳಿಗೆ ಅನುಕೂಲ ಮಾಡಿ ಕೆಂಚಮ್ಮನಿಗೆ “ನೀಲಮ್ಮ’ ಎಂದು ಪುನರ್‌ ನಾಮಕರಣ ಮಾಡುತ್ತಾರೆ. ರಥೋತ್ಸವದಲ್ಲಿ ಶ್ರೀ ದೊಡ್ಡಬಸವೇಶ್ವರ ಜೊತೆ ನೀಲಮ್ಮನ ಇರುವಿಕೆಯನ್ನು ರೂಢಿಗೆ ತಂದರೆಂದು ಇತಿಹಾಸ ಲೇಖಕ ಡಾ| ಕೆ.ಎಂ. ಮೇತ್ರಿ ಹಾಗೂ ಡಾ| ಮೃತ್ಯುಂಜಯ ರುಮಾಲೆ ಬರೆದಿರುವ ಕುರುಗೋಡು ನೀಲಮ್ಮನವರ ಸಾಂಸ್ಕೃತಿಕ ಅಧ್ಯಯನ ಪುಸ್ತಕದಲ್ಲಿ ಉಲ್ಲೇಖವಿದೆ. ಅಪರೂಪದ ಇತಿಹಾಸವುಳ್ಳ ರಥೋತ್ಸವದಲ್ಲಿ ಭಾಗಿಯಾಗುವ ಭಕ್ತರು ಶ್ರೀ ದೊಡ್ಡಬಸವೇಶ್ವರ ಹಾಗೂ ಶ್ರೀ ಶಿವಶರಣೆ ನೀಲಮ್ಮನವರ ಕೃಪೆಗೆ ಪಾತ್ರರಾಗುತ್ತಾರೆ.

~ಸುಧಾಕರ್‌ ಮಣ್ಣೂರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next