ಮೈಸೂರು: ನಗರದ ವಿವಾದಿತ ಕುರುಬಾರ ಹಳ್ಳಿ ಸರ್ವೇ ನಂ.4ರ ವ್ಯಾಪ್ತಿಯ ಸುಮಾರು 350 ಎಕರೆ ಭೂಮಿಯನ್ನು ಬಿ ಖರಾಬಿನಿಂದ ತೆರವುಗೊಳಿಸಿದ್ದು, ಆ ಜಮೀನಿನ ಪೂರ್ಣ ಹಕ್ಕನ್ನು ಮಾಲೀಕರಿಗೆ ನೀಡುವ ಆದೇಶ ಜೂನ್ ತಿಂಗಳಾಂತ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಬಿಡುಗಡೆ ಮಾಡಲಿದ್ದಾರೆ ಎಂದು ಶಾಸಕ ರಾಮದಾಸ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸರ್ವೇ ನಂ.4 ಅನ್ನು “ಬಿ ಖರಾಬು’ ಎಂದು 2015ರಲ್ಲಿ ಅಂದಿನ ಜಿಲ್ಲಾಧಿಕಾರಿ ಆದೇಶಿಸಿದ್ದರು. ಇದರಿಂದ ಸಿದ್ಧಾಥ ನಗರ, ಕೆಸಿ ಮತ್ತು ಜೆಸಿ ಬಡಾವಣೆಯ ನಿವಾಸಿಗಳು ಕಂಗಾಲಾಗಿದ್ದರು. ಬಿ ಖರಾಬಿನ 1500 ಎಕರೆ ಭೂಮಿ ಪೈಕಿ ಸಿದ್ದಾರ್ಥ ಬಡಾವಣೆಯ 205.09 ಎಕರೆ, ಕೆ.ಸಿ. ಬಡಾವಣೆಯ 105 ಎಕರೆ ಮತ್ತು ಜೆ.ಸಿ.ಬಡಾವಣೆಯ 44.20 ಎಕರೆ ಪ್ರದೇಶವನ್ನು ಸರ್ಕಾರ ಬಿ ಖರಾಬಿ ನಿಂದ ತೆರವುಗೊಳಿಸಿದೆ. ಇದರಿಂದ 25 ಸಾವಿರ ಕುಟುಂಬಕ್ಕೆ ಉಪಯೋಗವಾಗಿದೆ ಎಂದು ಹೇಳಿದರು.
ಎಲ್ಲರಿಗೂ ಧನ್ಯವಾದ: “ಬಿ ಖರಾಬು’ನಿಂದಾಗಿ ಸಿದ್ಧಾರ್ಥನಗರ, ಕೆಸಿ ಮತ್ತು ಜೆಸಿ ಬಡಾವಣೆಯ ನಿವಾಸಿಗಳು ಖಾತಾ ವರ್ಗಾವಣೆ, ಕಟ್ಟಡಕ್ಕೆ ರಹದಾರಿ, ಕಂಪ್ಲೀಷನ್ ರಿಪೋರ್ಟ್(ಸಿಸಿ), ಕಂದಾಯ ನಿಗದಿ, ಹಕ್ಕುಪತ್ರ ವಿತರಣೆ ಸೇರಿದಂತೆ ಎಲ್ಲ ರೀತಿಯ ಭೂ ದಾಖಲೆ ವಹಿವಾಟು ಸ್ಥಗಿತಗೊಂಡಿದ್ದು, ನಿವೇಶನ ಪಡೆ ದವರು ಮನೆಕಟ್ಟಲು, ಕಟ್ಟಡಕ್ಕೆ ಸಿಆರ್ ಪಡೆಯಲು, ಬ್ಯಾಂಕ್‌ನಿಂದ ಸಾಲ ಪಡೆಯಲು ಅಥವಾ ನಿವೇಶನ ಮಾರಾಟ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿತ್ತು. ಈ ಬಡಾವಣೆಗಳನ್ನು “ಬಿ.ಖರಾಬು’ ಪ್ರದೇಶ ದಿಂದ ಕೈಬಿಡಲು ನೆರವಾದ ಮುಖ್ಯಮಂತ್ರಿ ಯಡಿಯೂರಪ್ಪ, ಸರ್ಕಾರದ ಎಲ್ಲ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಧನ್ಯ ವಾದ ಸಲ್ಲಿಸುತ್ತೇನೆ ಎಂದರು.
ಜಾತಿ ಪ್ರಮಾಣ ಪತ್ರ: ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಶೇ.10ರಷ್ಟು ಮೀಸ ಲಾತಿ ನೀಡಿರುವ ಹಿನ್ನೆಲೆಯಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಜಾತಿ ಪ್ರಮಾಣಪತ್ರದ ಅವಶ್ಯಕತೆ ಇದೆ. ಜಾತಿ ಪ್ರಮಾಣ ಪತ್ರ ನೀಡುವಲ್ಲಿ ತಹಶೀಲ್ದಾರ್ ಕಚೇರಿಯಲ್ಲಿ ಸಾಕಷ್ಟು ತೊಂದರೆಯಾಗುತ್ತಿದೆ. ಬ್ರಾಹ್ಮಣ ಜಾತಿಯ ಪ್ರಮಾಣ ಪತ್ರವನ್ನು ನೀಡದಿರುವುದು ನನ್ನ ಗಮನಕ್ಕೆ ಬಂದಿದೆ. ಆದ್ದರಿಂದ ಸರ್ಕಾರ ಈ ಕೂಡಲೇ ರಾಜ್ಯದ ಎಲ್ಲ ತಹಶೀಲ್ದಾರ್‌ಗಳಿಗೆ ಜಾತಿ ಪ್ರಮಾಣ ಪತ್ರ ನೀಡುವಂತೆ ಸೂಚಿಸಲಿ ಎಂದು ಮನವಿ ಮಾಡಿದರು. ಸುದ್ದಿ ಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಮಂಜುನಾಥ್ ಇತರರಿದ್ದರು.