ಚಾಮರಾಜನಗರ: ಬೆಳಗಾವಿಯಲ್ಲಿ ಸಂಗೊಳ್ಳಿರಾಯಣ್ಣ ಪ್ರತಿಮೆ ಧ್ವಂಸಗೊಳಿಸಿದ ಹಾಗೂಕೊಲ್ಲಾಪುರದಲ್ಲಿ ಕನ್ನಡ ಬಾವುಟ ಸುಟ್ಟು ಹಾಕಿರುವ ಕಿಡಿಗೇಡಿಗಳನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ತಾಲೂಕು ಕುರುಬರ ಸಂಘ ದಿಂದ ಭಾನುವಾರ ಪ್ರತಿಭಟನೆ ನಡೆಯಿತು.
ನಗರದ ಚಾಮರಾಜರಾಜೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗ ತಾಲೂಕು ಕುರುಬರ ಸಂಘದ ಅಧ್ಯಕ್ಷ ಸಿ.ಎನ್. ಬಾಲರಾಜು ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಹೊರಟು ಜಿಲ್ಲಾಡಳಿತ ಭವನ ತಲುಪಿ, ಧರಣಿ ನಡೆಸಿದರು.
ಸ್ಥಳಕ್ಕಾಗಮಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ ಅವರ ಮುಖಾಂತರ ಮುಖ್ಯಮಂತ್ರಿಯವರಿಗೆ ಮನವಿ ಪತ್ರ ಸಲ್ಲಿಸಿದರು. ತಾಲೂಕು ಕುರುಬರ ಸಂಘದ ಅಧ್ಯಕ್ಷ, ಜಿಪಂಮಾಜಿ ಸದಸ್ಯ ಸಿ.ಎನ್.ಬಾಲರಾಜು ಮಾತನಾಡಿ, ರಾಜ್ಯದಲ್ಲಿ ಎಂಇಎಸ್ ಪುಂಡಾಟಿಕೆಜೋರಾಗಿದ್ದು, ರಾಜ್ಯ ಸರ್ಕಾರ ಕೂಡಲೇ ಈ ಸಂಘಟನೆ ಮೇಲೆ ನಿಷೇಧ ಹೇರಬೇಕು.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಅಧಿವೇಶನ ಮುಗಿಯುವುದರೊಳಗೆ ಅದೇ ಸ್ಥಳದಲ್ಲಿ ರಾಯಣ್ಣ ಪ್ರತಿಮೆ ಪುನರ್ ಸ್ಥಾಪಿಸಬೇಕು. ಅಲ್ಲದೇ ಸುವರ್ಣಸೌಧದ ಮುಂಭಾಗ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿದರು.
ಸಂಘದ ಉಪಾಧ್ಯಕ್ಷ ಆರ್.ಉಮೇಶ್ ಮಾತನಾಡಿ, ರಾಯಣ್ಣ ಕೇವಲ ಕನ್ನಡಿಗರ ಸ್ವತ್ತಲ್ಲ. ದೇಶದ ಆಸ್ತಿ. ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ಮೊದಲ ಸ್ವಾತಂತ್ರ್ಯ ಹೋರಾಟಗಾರ ಎಂದರು.
ಮಾಜಿ ಉಪಾಧ್ಯಕ್ಷ ಮಾದಾಪುರ ರವಿಕುಮಾರ್ ಮಾತನಾಡಿ, ಎಂಇಎಸ್ ಗೂಂಡಾಗಳು ಕೇವಲ ಕನ್ನಡಿಗರನ್ನು ಕೆರಳಿಸಿಲ್ಲ. ಇಡೀ ದೇಶದ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.ಇವರನ್ನು ಪತ್ತೆ ಮಾಡಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಗೌರವ ಅಧ್ಯಕ್ಷ ಸೋಮಣ್ಣೇಗೌಡ, ನಿರ್ದೇಶಕರಾದ ಕುದೇರುಲಿಂಗಣ್ಣ, ಸೊತ್ತನ ಹುಂಡಿ ಸೋಮಣ್ಣ, ತೆಳ್ಳನೂರು ಆಶೋಕ್, ಇರಸ ವಾಡಿ ಮಹದೇವ,ಕೆಂಗೇಗೌಡ, ಕೆ. ಶಿವರಾಮು, ಕೆ.ಪಿ.ನಾಗರಾಜು,ಮುತ್ತಿಗೆ ಮೂರ್ತಿ, ಮಣಿಕಂಠ, ಪಣ್ಯದಹುಂಡಿ ಸತೀಶ್, ನಂಜುಂಡಸ್ವಾಮಿ, ಮಾದಪ್ಪ,ನಾಗನಾಥ್, ಯುವ ಮುಖಂಡ ಸೂರ್ಯಕುಮಾರ್, ಕರಿನಂಜನಪುರ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.