Advertisement

ಪ್ರವಾಸೋದ್ಯಮ ತಾಣಗಳಾಗಿ ಕುದ್ರುಗಳು: ಪ್ರಸ್ತಾವನೆಗೆ ಮರುಜೀವ

11:18 AM Oct 11, 2019 | mahesh |

ಮಹಾನಗರ: ಮಂಗಳೂರು ಸುತ್ತಮುತ್ತ ಇರುವ ಸುಂದರ ಕುದ್ರು ಗಳನ್ನು ಪ್ರವಾಸೋದ್ಯಮ ತಾಣಗಳಾಗಿ ಅಭಿವೃದ್ಧಿಪಡಿಸುವ ಪ್ರಸ್ತಾವನೆ ಮರುಜೀವ ಪಡೆದುಕೊಂಡಿದೆ. ಕುದ್ರುಗಳನ್ನು ಪ್ರವಾಸೋದ್ಯಮ ತಾಣ ಗಳಾಗಿ ಅಭಿವೃದ್ಧಿಪಡಿಸಲು ಕಂದಾಯ ಇಲಾಖೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಪ್ರವಾಸೋದ್ಯಮ ಇಲಾಖೆಗಳ ಸಹಯೋಗದೊಂದಿಗೆ ಮಹತ್ವದ ಯೋಜನೆ ರೂಪಿಸಲು ಸರಕಾರ, ಸ್ಥಳೀಯ ಶಾಸಕರು ಮುಂದಾಗುವುದರೊಂದಿಗೆ ಬಹು ವರ್ಷಗಳ ಕನಸು ಇದೀಗ ಸಾಕಾರಗೊಳ್ಳುವ ಆಶಾವಾದ ಮೂಡಿದೆ.

Advertisement

ನಗರದ ಇಕ್ಕೆಲಗಳಲ್ಲಿ ನೇತ್ರಾವತಿ, ಫಲ್ಗುಣಿ ನದಿಗಳು ಹರಿಯುತ್ತಿವೆ. ನದಿಗಳ ಮಧ್ಯೆ ಇರುವ ಸುಂದರ ಕುದ್ರುಗಳು ದಟ್ಟ ಹಸುರಿನಿಂದ ಕಂಗೊಳಿಸುತ್ತಿವೆ. ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ. ಜಪ್ಪಿನಮೊಗರು ಕಡೆಕಾರು ಬಳಿ ನೇತ್ರಾವತಿ ನದಿಯ ಮಧ್ಯದಲ್ಲಿ, ಹಳೆ ಬಂದರು ಬಳಿಯಲ್ಲಿ ಫಲ್ಗುಣಿ ನದಿ ಮಧ್ಯದಲ್ಲಿ, ತಣ್ಣೀರು ಬೀಚ್‌ ಬಳಿ ಕುಡ್ಲಕುದ್ರು ಸಹಿತ ಮಂಗಳೂರು ಸುತ್ತಮುತ್ತ‌ ಆರು ಕುದ್ರುಗಳಿವೆ. ಇವುಗಳಿಗೆ ಸಾರಿಗೆ ವ್ಯವಸ್ಥೆಗಳನ್ನು ನಿಯೋಜಿಸಿ ಪ್ರವಾಸಿಗರನ್ನು ಆಕರ್ಷಿಸಲು ಮಹತ್ವದ ಯೋಜನೆಯನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಇದೀಗ ಪ್ರಕ್ರಿಯೆಗಳು ಆರಂಭಗೊಂಡಿವೆ. ಸರಕಾರದ ಮಟ್ಟದಲ್ಲಿ ಹಿಂದೆಯೂ ಪ್ರಸ್ತಾವನೆಗಳು, ಅಧ್ಯಯನಗಳು ಕೂಡ ನಡೆದಿದ್ದವು. ಆದರೆ ಪೂರಕ ಕಾರ್ಯಗಳು ಆಗಿಲ್ಲ. ಇದೀಗ ಈ ಪ್ರಸ್ತಾವನೆಗಳಿಗೆ ಮರುಜೀವ ನೀಡಿ, ಕಾರ್ಯಕತಗೊಳಿಸುವ ನಿಟ್ಟಿನಲ್ಲಿ ಶಾಸಕ ಡಿ. ವೇದವ್ಯಾಸ ಕಾಮತ್‌ ಅವರು ಈಗಾಗಲೇ ಬಂದರು, ಕಂದಾಯ, ಪ್ರವಾಸೋದ್ಯಮ ಅಧಿಕಾರಿಗಳ ಜತೆ ಎರಡು ಸುತ್ತಿನ ಸಭೆ ನಡೆಸಿದ್ದಾರೆ. ಕೇಂದ್ರ, ರಾಜ್ಯ ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಚಿಂತಿಸಲಾಗಿದೆ.

ಆಕರ್ಷಣೀಯ ಕುದ್ರುಗಳು
ನದಿಗಳ ಮಧ್ಯೆ ಇರುವ ಕಿರು ದ್ವೀಪಗಳನ್ನು ತುಳುವಿನಲ್ಲಿ ಕುದ್ರು ಎನ್ನುತ್ತಾರೆ. ಜಪ್ಪಿನಮೊಗರಿನ ನೇತ್ರಾವತಿ ನದಿ, ಹಳೆ ಬಂದರು ಪ್ರದೇಶದಲ್ಲಿ ಮೂರು ದ್ವೀಪ ಗಳಿವೆ. ಜಪ್ಪಿನಮೊಗರು ಕಡೆಕಾರಿನ ಬಳಿ ನೇತ್ರಾವತಿ ನದಿ ಮಧ್ಯದಲ್ಲಿರುವ ಸುಂದರ ಕುದ್ರು ಗಮನ ಸೆಳೆಯುತ್ತಿದೆ.

ಒಟ್ಟು 19.75 ಚದರ ಕಿ.ಮೀ. ವಿಸ್ತೀರ್ಣ ಈ ಕುದ್ರುನ್ನು ಪ್ರವಾಸಿ ತಾಣವಾಗಿ ರೂಪಿಸುವ ನಿಟ್ಟಿನಲ್ಲಿ 2011ರಲ್ಲಿ ರಾಜ್ಯ ಸರಕಾರದ ಪ್ರವಾಸೋದ್ಯಮ ಇಲಾಖೆ ಆಸಕ್ತಿ ವಹಿಸಿ ಪರಿಶೀಲನೆ ಕೂಡ ಆಗಿತ್ತು. ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ಸಿದ್ಧತೆಗಳಾಗಿತ್ತು. ದ್ವೀಪಕ್ಕೆ ಬೋಟು ಸೌಲಭ್ಯಕ್ಕೂ ಚಾಲನೆ ನೀಡಲಾಗಿತ್ತು. ಆದರೆ ಯಾವುದೇ ಪ್ರಗತಿಯಾಗಲಿಲ್ಲ. ಹಳೆ ಬಂದರು ಪ್ರದೇಶದಲ್ಲಿ ನೇತ್ರಾವತಿ ಮತ್ತು ಫಲ್ಗುಣಿ ನದಿಯಲ್ಲಿನ ಮೂರು ದ್ವೀಪಗಳನ್ನು ಪ್ರವಾಸಿ ಆಕರ್ಷಣಿಯ ತಾಣಗಳಾಗಿ ಅಭಿವೃದ್ಧಿ ಪಡಿಸುವ ಬಗ್ಗೆಯೂ ಚಿಂತನೆಗಳು ನಡೆದಿತ್ತು. ಕುಡ್ಲ ಕುದ್ರುನಲ್ಲಿ ಒಂದಷ್ಟು ಅಭಿವೃದ್ಧಿ ಕಾರ್ಯಗಳು ಆಗಿದ್ದರೂ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಹೇಳಿಕೊಳ್ಳುವ ಯಶಸ್ಸು ಪಡೆದಿಲ್ಲ.

ಕೇರಳ, ಗೋವಾ ಮಾದರಿ
ಸಣ್ಣ ದ್ವೀಪ, ಸಾಗರ ಮತ್ತು ಹಿನ್ನೀರು ಪ್ರವಾಸೋದ್ಯಮದಲ್ಲಿ ನಮ್ಮ ನೆರೆಯ ರಾಜ್ಯಗಳಾದ ಕೇರಳ, ಗೋವಾ ರಾಜ್ಯಗಳ ಸಾಧನೆಯ ನಿದರ್ಶನ ನಮ್ಮ ಮುಂದಿದೆ. ಸಾಗರ ತೀರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಿಆರ್‌ಝಡ್‌ ನಿಯಮಗಳು ಅಡಚಣೆಯಾಗುತ್ತಿವೆೆ ಎಂಬ ಮಾತುಗಳಿವೆ. ಕೇರಳದಲ್ಲಿ 8 ಸಣ್ಣ ದ್ವೀಪಗಳು ಪ್ರವಾಸೋದ್ಯಮ ಕೇಂದ್ರಗಳಾಗಿ ಅಭಿವೃದ್ಧಿ ಹೊಂದಿ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಸಮುದ್ರ ತೀರದಲ್ಲಿ ರೆಸಾರ್ಟ್‌ ಗಳನ್ನು ಮಾಡಲು ಕಾನೂನಿನಲ್ಲಿ ಕೆಲವು ತೊಡಕುಗಳಿವೆ. ಆದರೆ ಪರಿಸರ ಸಹ್ಯ ಪ್ರವಾಸೋದ್ಯಮವನ್ನು ಇಲ್ಲಿ ಬೆಳೆಸಬಹುದಾಗಿದೆ. ಕೇರಳ ಇದೇ ಮಾದರಿಯನ್ನು ಅನುಸರಿಸುತ್ತಿದೆ. ಅಲ್ಲಿ ಹಿನ್ನೀರುಗಳಲ್ಲಿ ಇರುವ ಬೋಟ್‌ ಹೌಸ್‌ಗಳು ಇದಕ್ಕೆ ಉದಾಹರಣೆ. ಇದಲ್ಲದೆ ಈಗ ಹಿನ್ನೀರುಗಳಲ್ಲಿ ಶಾಶ್ವತ ಬೋಟ್‌ ಹೌಸ್‌ ಎಂಬ ಹೊಸ ಪರಿಕಲ್ಪನೆ ಪ್ರವರ್ಧಮಾನಕ್ಕೆ ಬರುತ್ತಿದೆ.

Advertisement

ಒಳನಾಡಿನಲ್ಲಿ ಹಲವಾರು ಹಿನ್ನೀರುಗಳಲ್ಲಿರುವ ಕುದ್ರುಗಳಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ. ಇವುಗಳನ್ನು ಕೇರಳ ಮಾದರಿಯಲ್ಲಿ ಅಭಿವೃದ್ಧಿ ಪಡಿಸಿದರೆ ಪ್ರವಾಸಿ ತಾಣಗಳಾಗಿ ಗಮನ ಸೆಳೆಯುವುದರಲ್ಲಿ ಸಂಶಯವಿಲ್ಲ.

ರೂಪರೇಖೆಗಳ ನಿರ್ಧಾರವಾಗಬೇಕಿದೆ
ಮಂಗಳೂರು ಸಮೀಪ ನೇತ್ರಾವತಿ ನದಿಯಲ್ಲಿರುವ ಕುದ್ರುವನ್ನು ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸುವ ಕುರಿತು ಈಗಾಗಲೇ ಪೂರ್ವಭಾವಿ ಸಭೆಯೊಂದು ನಡೆದಿದೆ. ಸಭೆಯಲ್ಲಿ ಇದಕ್ಕೆ ಸಂಬಂಧಪಟ್ಟು ವಿವಿಧ ಅಂಶಗಳು ಪ್ರಸ್ತಾವನೆಯಾಗಿದ್ದು, ನಿರ್ದಿಷ್ಟ ರೂಪರೇಖೆಗಳು ಬಗ್ಗೆ ಇನ್ನಷ್ಟೆ ನಿರ್ಧಾರವಾಗಬೇಕಾಗಿದೆ.
– ಸುಧೀರ್‌ ಗೌಡ, ಕನ್ಸಲ್ಟೆಂಟ್‌, ಪ್ರವಾಸೋದ್ಯಮ ಇಲಾಖೆ

ಯೋಜನೆ ಸಿದ್ಧಪಡಿಸಲಾಗುವುದು
ನಗರದ ಸುತ್ತಮುತ್ತಲಿರುವ ಸಣ್ಣ ದ್ವೀಪಗಳನ್ನು ಅಭಿವೃದ್ಧಿಪಡಿಸಲು ಚಿಂತನೆ ನಡೆಸಲಾಗಿದೆ. ಈ ಕುರಿತು ಕಂದಾಯ, ಬಂದರು, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಲಾಗಿದೆ. ರಾಜ್ಯ ಪ್ರವಾಸೋದ್ಯಮ ಸಚಿವರು ಈ ಬಗ್ಗೆ ಆಸಕ್ತಿವಹಿಸಿದ್ದಾರೆ. ಇದನ್ನು ಯಾವ ರೀತಿ ಅಭಿವೃದ್ಧಿಪಡಿಸಬಹುದು, ರೂಪರೇಖೆ ಬಗ್ಗೆ ಚರ್ಚಿಸಿ ಯೋಜನೆ ಸಿದ್ಧಪಡಿಸಲಾಗುವುದು.
 - ಡಿ. ವೇದವ್ಯಾಸ ಕಾಮತ್‌, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next