Advertisement

ಗತ ವೈಭವಕ್ಕೆ ಸಾಕ್ಷಿ ಕುರ್ದಿ; ಒಂದಿಡೀ ಗ್ರಾಮದ ನೆನಪು ನದಿ ಒಡಲಲ್ಲಿ

05:03 PM Sep 06, 2020 | Team Udayavani |

ಹುಟ್ಟೂರು ಎಂದು ಕೇಳಿದ ತತ್‌ಕ್ಷಣ ಎಲ್ಲರ ಮನಸ್ಸು ಒಮ್ಮೆ ಆದ್ರವಾಗುತ್ತದೆ. ಅದರಲ್ಲೂ ಉದ್ಯೋಗ ಇನ್ನಿತರ ಕಾರಣಗಳಿಂದ ದೂರ ಇರುವವರಿಗಂತೂ ಊರ ನೆನಪು ಕಾಡದೇ ಇರದು.

Advertisement

ಬಾಲ್ಯದ ದಿನಗಳು, ಗೆಳೆಯರ ಜತೆ ಓಡಾಡಿದ ಜಾಗ, ಪಾಲಕರೊಂದಿಗೆ ಕಳೆದ ಸುಂದರ ದಿನಗಳು, ಆಟ ಆಡಿದ ಘಳಿಗೆ…ಹೀಗೆ ಪ್ರತಿಯೊಬ್ಬನಿಗೂ ಹುಟ್ಟೂರ ನೆನಪು ಮಧುರ ಕ್ಷಣಗಳನ್ನು ಹೊತ್ತು ತರುತ್ತದೆ.

ಆದರೆ ಇಲ್ಲೊಂದು ಊರಿನವರಿಗೆ ಆ ನೆನಪುಗಳ ಜತೆ ವರ್ಷಕ್ಕೊಮ್ಮೆ ಮಾತ್ರ ಊರನ್ನು ನೋಡಬಹುದು ಎನ್ನುವ ನೋವೂ ಕಾಡುತ್ತದೆ. ಅದು ಯಾಕೆ?ಅಂತಹ ಊರು ಯಾವುದು?ಎನ್ನುವುದಕ್ಕೆ ಉತ್ತರ ಇಲ್ಲಿದೆ.

ಗೋವಾ-ಭಾರತದ ಟಾಪ್‌ ಪ್ರವಾಸಿ ತಾಣಗಳಲ್ಲಿ ಒಂದು. ಈ ಪುಟ್ಟ ರಾಜ್ಯಕ್ಕೆ ವಿದೇಶಿಗರು ಪ್ರತಿ ವರ್ಷ ಲಕ್ಷಾಂತರ ಸಂಖ್ಯೆಯಲ್ಲಿ ಲಗ್ಗೆ ಇಡುತ್ತಾರೆ. ಇಲ್ಲಿನ ಆಕರ್ಷಣೆಯೇ ಅಂತಹದ್ದು. ಇಲ್ಲಿನ ಪುಟ್ಟ ಗ್ರಾಮವೇ ಕುರ್ದಿ. ಇದು ವರ್ಷದಲ್ಲಿ ಕೇವಲ ಒಂದು ಮಾತ್ರ ಕಾಣಿಸಿಕೊಳ್ಳುತ್ತದೆ. ಮೇ ತಿಂಗಳಲ್ಲಿ ಒಂದಷ್ಟು ಜನರ ಭಾವುಕ ಸನ್ನಿವೇಶಗಳಿಗೆ ಸಾಕ್ಷಿಯಾಗುವ ಈ ಸುಂದರ ಗ್ರಾಮ ಆಮೇಲೆ ಸಲೌಲಿಂ ನದಿಯ ಒಡಲಿನಲ್ಲಿ ಲೀನವಾಗುತ್ತದೆ.

ಕಾರಣವೇನು?
ಸಲೌಲಿಂ ನದಿಗೆ ಅಡ್ಡಲಾಗಿ ಅಣೆಕಟ್ಟು ಕಟ್ಟಲಾಗಿರುವ ಕಾರಣ ಕುರ್ದಿ ಮುಳಗಡೆಯಾಗಿದೆ. ಬೇಸಗೆಯಲ್ಲಿ ನೀರು ಕಡಿಮೆಯಾಗುವ ಕಾರಣ ಸುಮಾರು 1 ತಿಂಗಳು ಈ ಗ್ರಾಮ ಗೋಚರವಾಗುತ್ತದೆ. ಆಗ ವಿವಿಧೆಡೆಗಳಲ್ಲಿರುವ ಮೂಲ ನಿವಾಸಿಗಳು ಆಗಮಿಸಿ ಶ್ರದ್ಧಾ ಕೇಂದ್ರಗಳಿಗೆ ತೆರಳಿ ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳುತ್ತಾರೆ.

Advertisement

ಸುಮಾರು 3 ಸಾವಿರ ಮಂದಿ ವಾಸಿಸುತ್ತಿದ್ದ ಗ್ರಾಮ ಇದಾಗಿತ್ತು. ಒಂದು ಕಾಲದಲ್ಲಿ ನಮ್ಮೂರಿನಂತೆಯೇ ಕುರ್ದಿಯಲ್ಲಿಯೂ ಹೊಲಗಳಿದ್ದವು. ವಿವಿಧ ವರ್ಗಗಳ ಜನ ಇಲ್ಲಿ ವಾಸವಾಗಿದ್ದರಿಂದ ಅನೇಕ ದೇವಸ್ಥಾನಗಳು, ಚರ್ಚ್‌ಗಳು, ಮಸೀದಿಗಳೂ ಇಲ್ಲಿವೆ. 1965ರಲ್ಲಿ ಅಂದಿನ ಗೋವಾ ಮುಖ್ಯಮಂತ್ರಿ ದಯಾನಂದ್‌ ಭಂದೋಡ್ಕರ್‌ ನೀರಿನ ಕೊರತೆ ನೀಗಿಸಲು ಸಲೌಲಿಂ ಅಣೆಕಟ್ಟು ನಿರ್ಮಿಸಲು ತೀರ್ಮಾನಿಸುವುದರೊಂದಿಗೆ ಒಂದಿಡೀ ಗ್ರಾಮದ ಚಿತ್ರಣವೇ ಬದಲಾಗಿ ಹೋಯಿತು. ಇಡೀ ರಾಜ್ಯಕ್ಕೆ ಅನುಕೂಲ ಒದಗಿಸುವುದು ಈ ಅಣೆಕಟ್ಟು ರಚನೆಯ ಉದ್ದೇಶವಾಗಿತ್ತು. ಸುಮಾರು 634 ಕುಟುಂಬಗಳು ಶಾಶ್ವತವಾಗಿ ತಮ್ಮ ವಾಸ ಸ್ಥಾನವನ್ನು ಬದಲಾಯಿಸಿದವು.

ನೋವಿದೆ
“ಹುಟ್ಟೂರನ್ನು ಬಿಟ್ಟು ಹೋಗುವುದಕ್ಕೆ ಸಾಕಷ್ಟು ನೋವು ಉಂಟಾಗಿತ್ತು. ಆದರೆ ತುಂಬ ಜನರಿಗೆ ಅನುಕೂಲವಾಗುವ ಒಳ್ಳೆ ಉದ್ದೇಶ ಇದರ ಹಿಂದೆ ಇದ್ದುದರಿಂದ ನಮ್ಮ ತ್ಯಾಗ ಸಾರ್ಥಕವಾಯಿತು ಎಂದು ಭಾವಿಸಿದ್ದೆವು’ ಎನ್ನುತ್ತಾರೆ ಸ್ಥಳೀಯರು. ಪ್ರತಿವರ್ಷ ನೀರು ಇಳಿಯುತ್ತಿದ್ದಂತೆ ಊರು ಮೇಲೆ ಬರುತ್ತದೆ. ಆಗ ನೆರಳು ನೀಡಿದ ಮರ, ಆಶ್ರಯ ನೀಡಿದ ಮನೆ, ನೆಮ್ಮದಿ ತಂದ ಆರಾಧನಾಲಯಗಳು ಗತಕಾಲದ ವೈಭವವನ್ನು ಹೊತ್ತು ತರುತ್ತವೆ.

 ರಮೇಶ್‌ ಬಿ., ಕಾಸರಗೋಡು

Advertisement

Udayavani is now on Telegram. Click here to join our channel and stay updated with the latest news.

Next