Advertisement

ಕರ್ಚಿಫ್ ಲವ್‌ಸ್ಟೋರಿ 

06:00 AM Sep 28, 2018 | Team Udayavani |

ಚಿತ್ರರಂಗಕ್ಕೆ ಹೊಸದಾಗಿ ಬರುವವರಿಗೆ ಹಳೆಯ ಟೈಟಲ್‌ಗ‌ಳ ವ್ಯಾಮೋಹ ಹೆಚ್ಚುತ್ತಿದೆ. ಈಗಾಗಲೇ ಸಾಕಷ್ಟು ಹಳೆಯ ಹಾಗೂ ಯಶಸ್ವಿ ಚಿತ್ರಗಳ ಶೀರ್ಷಿಕೆಗಳು ರಿಪೀಟ್‌ ಆಗಿವೆ. ಈ ಸಾಲಿಗೆ ಹೊಸ ಸೇರ್ಪಡೆ “ಒಂದಾನೊಂದು ಕಾಲದಲ್ಲಿ’. ಶಂಕರ್‌ನಾಗ್‌ ನಟನೆಯಲ್ಲಿ “ಒಂದಾನೊಂದು ಕಾಲದಲ್ಲಿ’ ಚಿತ್ರ ಬಂದಿರುವ ವಿಚಾರ ನಿಮಗೆ ಗೊತ್ತೇ ಇದೆ. ಈಗ ಅದೇ ಟೈಟಲ್‌ನಡಿ ಹೊಸಬರ ಸಿನಿಮಾವೊಂದು ಸೆಟ್ಟೇರಿದೆ. ಇತ್ತೀಚೆಗೆ ಈ ಚಿತ್ರಕ್ಕೆ ಮುಹೂರ್ತ ನಡೆದಿದ್ದು, ಹಿರಿಯ ನಿರ್ದೇಶಕ ಭಗವಾನ್‌ ಕ್ಲಾಪ್‌ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಗಜ ಎನ್ನುವವರು ಈ ಚಿತ್ರದ ಮೂಲಕ ನಾಯಕರಾಗುತ್ತಿದ್ದಾರೆ. ಮಂಜುನಾಥ್‌ ಈ ಚಿತ್ರದ ನಿರ್ದೇಶಕರು. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕರು, “ಇದು 1980ರಲ್ಲಿ ನಡೆಯುವ ಪ್ರೇಮಕಥೆ. ಆ ಕಾರಣದಿಂದ ಚಿತ್ರಕ್ಕೆ “ಒಂದಾ­ನೊಂದು ಕಾಲದಲ್ಲಿ’ ಎಂದು ಟೈಟಲ್‌ ಇಡಲಾಗಿದೆಯೇ ಹೊರತು, ಶಂಕರ್‌ನಾಗ್‌ ಅವರ ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಇಡೀ ಸಿನಿಮಾದಲ್ಲಿ ಕರ್ಚಿಫ್ ಪ್ರಮುಖ ಪಾತ್ರ ವಹಿಸುತ್ತದೆ. ಏಕೆಂದರೆ ಇದು ಕರ್ಚಿಫ್ ಮೇಲೆ ನಡೆಯುವ ಲವ್‌ಸ್ಟೋರಿ. ಇಡೀ ಸಿನಿಮಾ ರೆಟ್ರೋ ಶೈಲಿಯಲ್ಲಿ ಮೂಡಿಬರಲಿದೆ. ಆಗಿನ ಕಾಲದ ಪರಿಸರವನ್ನು ನಾವಿಲ್ಲಿ ಮರುಸೃಷ್ಟಿ ಮಾಡುತ್ತಿದ್ದೇವೆ’ ಎಂದು ಚಿತ್ರದ ಬಗ್ಗೆ ಹೇಳಿಕೊಂಡರು ಮಂಜುನಾಥ್‌. ಬನ್ನೇರುಘಟ್ಟ, ಬನವಾಸಿ, ಪಾಂಡವಪುರ, ಸಕಲೇಶಪುರ ಸುತ್ತಮುತ್ತ ಚಿತ್ರೀಕರಣ ಮಾಡಲು ತಯಾರಿ ಮಾಡಿಕೊಂಡಿದ್ದಾರಂತೆ.  

Advertisement

ಚಿತ್ರದ ನಾಯಕ ಗಜ ಅವರಿಗೆ ನಿರ್ದೇಶಕ ಮಂಜು ತುಂಬಾ ವರ್ಷಗಳ ಸ್ನೇಹಿತರಂತೆ. ಈಗ ಗೆಳೆಯನ ಸಿನಿಮಾದಲ್ಲಿ ನಟಿಸುತ್ತಿರುವ ಖುಷಿ ಅವರಿಗಿದೆ. ಚಿತ್ರದ ರೆಟ್ರೋ ಶೈಲಿಯಲ್ಲಿರುವುದರಿಂದ ಇವರ ಪಾತ್ರಕ್ಕೆ ಬೇಕಾದ ತಯಾರಿ ಮಾಡಿಕೊಳ್ಳುತ್ತಿದ್ದಾರಂತೆ. “ಆಗಿನ ಕಾಲದ ಹುಡುಗರು ಹೇಗಿದ್ದರು ಎಂಬುದನ್ನು ತಿಳಿದುಕೊಳ್ಳುತ್ತಿದ್ದೇನೆ. ಅವರು ಹಾಕುತ್ತಿದ್ದ ಬಟ್ಟೆಯಿಂದ ಹಿಡಿದು ಎಲ್ಲಾ ಅಂಶಗಳ ಬಗ್ಗೆ ಹೆಚ್ಚಿನ ಗಮನಹರಿಸುತ್ತಿದ್ದೇನೆ. ನಟನೆಯ ಬಗ್ಗೆ ನಿರ್ದೇಶಕರು ಸಾಕಷ್ಟು ತರಬೇತಿ ನೀಡಿದ್ದಾರೆ’ ಎಂದರು. ಇಲ್ಲಿ ಅವರು ನಿರ್ದೇಶಕರಾಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಚಿತ್ರದಲ್ಲಿ ಜಾಹ್ನವಿ ನಾಯಕಿಯಾಗಿ ನಟಿಸುತ್ತಿದ್ದಾರೆ. ರಂಗ­ ಭೂಮಿಯ ಅನುಭವವಿರುವ ಜಾಹ್ನವಿಯ ಪಾತ್ರ ಕೂಡಾ ಭಿನ್ನವಾಗಿದೆಯಂತೆ. ನೀನಾಸಂ ಅಶ್ವತ್ಥ್ ಇಲ್ಲಿ ನಾಯಕ ಅಣ್ಣ ನಾಗಿ ನಟಿಸುತ್ತಿದ್ದಾರೆ. ಉಳಿದಂತೆ ಸಂಗೀತ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರವನ್ನು ವೈ. ನಾರಾಯಣಸ್ವಾಮಿ, ಮುನೇಶ್‌, ಅಕ್ಷಿತ್‌ ಸೇರಿ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ರಾಕೇಶ್‌ ಸಿ. ತಿಲಕ್‌ ಛಾಯಾಗ್ರಹಣ, ಯಶವಂತ್‌ ಭೂಪತಿ ಸಂಗೀತವಿದೆ.

Advertisement

Udayavani is now on Telegram. Click here to join our channel and stay updated with the latest news.

Next