ಶ್ರೀರಾಮಾಯಣ ದರ್ಶನದಿಂದಲೇ ಕೈ
ಮುಗಿದ ಕವಿಗೆ-ಮಣಿಯದವರು ಯಾರು?
ರಾಮಕೃಷ್ಣ ವಚನೋದಿತ ಪ್ರತಿಭೆ ತೆರೆದ
ಕವನ ತತಿಗೆ ತಣಿಯದವರು ಆರು?
ಮಲೆನಾಡಿನ ಸೌಂದರ್ಯಕೆ ಕುಣಿದಾಡಿದ
ಕವಿಯ ಜತೆಗೆ ಕುಣಿಯದವರು ಆರು?”
-ಡಾ| ದ.ರಾ. ಬೇಂದ್ರೆ
ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯ ವೆಂಕಟಪ್ಪ ಮತ್ತು ಸೀತಮ್ಮ ದಂಪತಿಗಳಿಗೆ ಚಿಕ್ಕಮಗಳೂರು ಜಿಲ್ಲೆಯ ಹಿರಿಕೂಡಿಗೆಯಲ್ಲಿ 1904ರ ಡಿಸೆಂಬರ್ 29 ರಂದು ಗಂಡು ಮಗುವೊಂದು ಜನಿಸಿದಾಗ ಅವರ ಸಂಭ್ರಮ ಹೇಳತೀರದು. ಅಷ್ಟೊಂದು ಸಂತಸಪಟ್ಟ ಆ ಪುಣ್ಯವಂತ ಮಾತಾ-ಪಿತರಿಗೆ ಅದೇ ಮಗು ಮುಂದೊಂದು ದಿನ ಸಮಸ್ತ ಕನ್ನಡನಾಡಿನ ಸಂಭ್ರಮವಾಗುತ್ತದೆಂದು ಆಗಲೇ ತಿಳಿದಿದ್ದರೆ ಅದಿನ್ನೆಷ್ಟು ಸಂಭ್ರಮಿಸುತ್ತಿದ್ದರೋ ಏನೋ! ಅಂಥ ಕನ್ನಡದ ಸೌಭಾಗ್ಯ ಆ ಮಗುವೇ ಕನ್ನಡಕ್ಕೆ ಮೊಟ್ಟ ಮೊದಲಿಗೆ ಜ್ಞಾನಪೀಠ ಪ್ರಶಸ್ತಿ ಯನ್ನು ತಂದುಕೊಟ್ಟ ಕನ್ನಡ ಸಾರಸ್ವತ ಲೋಕದ ಕುವೆಂಪು ಎಂಬ ಮೂರಕ್ಷರದ ಕನ್ನಡದ ಗಾಯತ್ರಿ ಮಂತ್ರ.
Advertisement
ಪ್ರಾಥಮಿಕ ಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಮುಗಿಸಿ ಪ್ರೌಢಶಿಕ್ಷಣಕ್ಕೆ ಮೈಸೂರಿಗೆ ಬಂದ ಕುವೆಂಪು ಅಲ್ಲಿಂದ ತಮ್ಮ ಸಂಪೂರ್ಣ ವಿದ್ಯಾಭ್ಯಾಸವನ್ನು ಮೈಸೂರಿನಲ್ಲೇ ಪೂರೈಸಿದರು. ಟಿ.ಎಸ್. ವೆಂಕಣ್ಣಯ್ಯ, ಎ.ಆರ್. ಕೃಷ್ಣಶಾಸ್ತ್ರಿ, ಬಿ.ಎಂ.ಶ್ರೀ. ಅವರಂಥ ಗುರುಗಳನ್ನು ಪಡೆದಿದ್ದ ಇವರು ಮೈಸೂರಿನ ಮಹಾ ರಾಜ ಕಾಲೇಜಿನಿಂದ 1927ರಲ್ಲಿ ಬಿ.ಎ. ಪದವಿ ಯನ್ನೂ, 1929ರಲ್ಲಿ ಕನ್ನಡ ಎಂಎ. ಪದವಿಯನ್ನು ಪಡೆದು ಆ ವರ್ಷದಿಂದಲೇ ಮೈಸೂರು ಮಹಾರಾಜ ಕಾಲೇಜಿನ ಕನ್ನಡ ಅಧ್ಯಾಪಕರಾಗಿ ತಮ್ಮ ವೃತ್ತಿಜೀವನ ಆರಂಭಿಸಿದರು. ಅನಂತರ ಅದೇ ಕಾಲೇಜಿನಲ್ಲಿ ಉಪಪ್ರಾಧ್ಯಾಪಕ, ಪ್ರಾಧ್ಯಾಪಕ ರಾಗಿ ಸೇವೆ ಸಲ್ಲಿಸಿ, 1955ರಲ್ಲಿ ಪ್ರಿನ್ಸಿಪಾಲ್ ಆಗಿ 1956 ರಿಂದ 1960ರ ವರೆಗೆ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಯಾಗಿ ನಿವೃತ್ತರಾದರು. ಕುಲಪತಿಯಾಗಿ ಅವರು ಸಾಧನೆ ಗೈದು ಕಂಡ ಕನಸನ್ನು ಸಾûಾತ್ಕಾರಗೊಳಿಸಿಕೊಂಡಿದ್ದಕ್ಕೆ ಸಾಕ್ಷಿ ಮೈಸೂರಿನ ಮಾನಸಗಂಗೋತ್ರಿಯೇ ಆಗಿದೆ!
Related Articles
Advertisement
ಇದನ್ನೂ ಓದಿ:ನೀಟ್ ಪಿಜಿ 2021ರ ಕೌನ್ಸೆಲಿಂಗ್ ವಿಳಂಬ : ರಸ್ತೆಗಿಳಿದು ಪ್ರತಿಭಟನೆಗೆ ಮುಂದಾದ ವೈದ್ಯರು
ಸಂಖ್ಯೆಯ ದೃಷ್ಟಿಯಿಂದ ಕುವೆಂಪು ಅವರ ಕೃತಿಗಳು ಎಪ್ಪತ್ತೆçದನ್ನೂ ದಾಟದಿದ್ದರೂ ಕೂಡ ಸತ್ವದ ದೃಷ್ಟಿಯಲ್ಲಿ ಇವರಿಂದ ರಚಿತವಾಗಿರುವ ಒಂದೊಂದು ಕೃತಿ ರತ್ನಗಳೂ ಸಾಹಿತ್ಯದ ಮಹತ್ವಗಳಾಗಿವೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಮಾನವನ್ನು ಮತ್ತು ಭಾರತೀಯ ಜ್ಞಾನಪೀಠ ಪ್ರಶಸ್ತಿ ಯನ್ನು ಪಡೆದಿರುವ ಇವರ ಶ್ರೀರಾಮಾಯಣ ದರ್ಶನಂ ಮಹಾಕಾವ್ಯವೊಂದೇ ಸಾಕು ನೂರು ಕೃತಿಗಳನ್ನು ಮೀರಿ ಸೀತು! ಅದಕ್ಕೇ ವರಕವಿ ಬೇಂದ್ರೆಯವರು ಕುವೆಂಪು ಅವರನ್ನು ಯುಗದ ಕವಿ ಜಗದ ಕವಿ ಎಂದು ಎದೆತುಂಬಿ ಹಾಡಿ ಹೊಗಳಿರುವುದು.ಪ್ರಶಸ್ತಿ-ಪುರಸ್ಕಾರ, ಮಾನ-ಸನ್ಮಾನ, ಹೆಸರು-ಕೀರ್ತಿ, ಅಂತ ಕುವೆಂಪು ಅವರು ಎಂದೂ ಕೂಡ ಅವುಗಳ ಹಿಂದೆ ಬಿದ್ದವರಲ್ಲ. ಕೀರ್ತಿ ಶನಿ ತೊಲಗಾಚೆ ಎಂದವರು ಅವರು. ಆದರೆ ಅವುಗಳೇ ಅವರನ್ನು ಬೆನ್ನತ್ತಿ ಬಂದು ಆಲಂಗಿಸಿಕೊಂಡವು. ಹಾಗಾಗಿ ತಮ್ಮ ಸಾಹಿತ್ಯ ಸಾಧನೆಯಿಂದ ಹಲವು ಮೊದಲುಗಳಿಗೆ ಭಾಜನರಾದ ಕುವೆಂಪು ಅವರು ತಮ್ಮ “”ಶ್ರೀ ರಾಮಾಯಣ ದರ್ಶನಂ” ಮಹಾಕಾವ್ಯದ ಮೂಲಕ ರಾಷ್ಟ್ರದ ಪ್ರತಿಷ್ಠಿತ ಪ್ರಶಸ್ತಿಗಳಾದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಜ್ಞಾನಪೀಠ ಪ್ರಶಸ್ತಿ ಸೇರಿದಂತೆ ಹಲವು ಹತ್ತು ಪ್ರಶಸ್ತಿಗಳನ್ನು ಮೊಟ್ಟ ಮೊದಲಿಗೆ ಕನ್ನಡಕ್ಕೆ ತಂದುಕೊಟ್ಟ ಕೀರ್ತಿಯೊಡನೆ ಕರ್ನಾಟಕ ಸರಕಾರದ ಪ್ರಮುಖ ನಾಗರಿಕ ಪ್ರಶಸ್ತಿಗಳಾದ ಕರ್ನಾಟಕ ರತ್ನ ಪ್ರಶಸ್ತಿ ಮತ್ತು ಪಂಪ ಪ್ರಶಸ್ತಿ ಪಡೆದ ಮೊದಲಿಗರೆನಿಸಿದ್ದಾರೆ. ಹಾಗೆಯೇ ಪದ್ಮಭೂಷಣ ಪಡೆದ ಕನ್ನಡದ ಮೊದಲ ಕವಿಯೂ ಆಗಿದ್ದಾರೆ. ಕುವೆಂಪು ಅವರ ವಿಶೇಷವೆಂದರೆ ಕನ್ನಡಕ್ಕೊಂದು ಓಜಸ್ವಿಯಾದ ಶೈಲಿಯನ್ನು ತಂದುಕೊಟ್ಟದ್ದು. ಹಾಗೆಯೇ ಸಾಹಿತ್ಯದ ಮೂಲಕ ಕನ್ನಡ ಪ್ರಜ್ಞೆ, ವೈಜ್ಞಾನಿಕ ಪ್ರಜ್ಞೆ, ವೈಚಾರಿಕ ಪ್ರಜ್ಞೆ, ಭಾವೈಕ್ಯ ಪ್ರಜ್ಞೆ, ಮನುಜಮತ ಪ್ರಜ್ಞೆ, ವಿಶ್ವಪಥ ಪ್ರಜ್ಞೆ ಒಟ್ಟಾರೆ ವಿಶ್ವಮಾನವ ಪ್ರಜ್ಞೆ ಮೂಡಿಸಿದರು. ಆದಿಕವಿ ಪಂಪ ನುಡಿದ ಮನುಷ್ಯ ಜಾತಿ ತಾನೊಂದೆ ವಲಂ ಎಂಬುದನ್ನು ತಮ್ಮ ಬದುಕಿನ ಧ್ಯೇಯ ವಾಕ್ಯವನ್ನಾಗಿಸಿಕೊಂಡು ಅದರಂತೆಯೇ ಬರೆದು ಬದುಕಿದವರು. ಗುಡಿ ಚರ್ಚು ಮಸೀದಿಗಳ ಬಿಟ್ಟು ಹೊರಬನ್ನಿ; ಬಡತನವ ಬುಡಮಟ್ಟ ಕೀಳಬನ್ನಿ; ಮೌಡ್ಯತೆಯ ಮಾರಿಯನು ಹೊರದೂಡಲೈತನ್ನಿ; ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ ಎಂದವರು. ಅವರು ತಮ್ಮ ಜೀವನ ಸಂಧ್ಯಾ ಕಾಲದಲ್ಲಿ ವಿಶ್ವಮಾನವತ್ವಕ್ಕೆ ಮಿಡಿದ ಬಗೆ ಇಡೀ ಮಾನವ ಕುಲಕ್ಕೆ ಮಾದರಿ. ತಮ್ಮ ಬದುಕಿನ ಕಟ್ಟಕಡೆಯ ಸಂದೇಶ ವಿಶ್ವಮಾನವ ಸಂದೇಶ ಎನ್ನುತ್ತಲೇ 1994ರ ನವೆಂಬರ್ 11 ರಂದು ನಿಸರ್ಗಲೀನರಾದ ಕುವೆಂಪು ಮಹಾ ಮಾನವತಾವಾದಿಯಾಗಿ ಬದುಕಿದವರು. ಅಂತೆಯೇ ಕನ್ನಡ ಸಾಹಿತ್ಯ ಮತ್ತು ಭಾರತೀಯ ಸಾಹಿತ್ಯಕ್ಕಷ್ಟೇ ಅಲ್ಲದೇ ವಿಶ್ವ ಸಾಹಿತ್ಯಕ್ಕೆ ವಿಚಾರ ಕ್ರಾಂತಿಯ ಮಹಾಬೆಳಕು ನೀಡಿದ ಯುಗ ಪುರುಷರು. – ಬನ್ನೂರು ಕೆ.ರಾಜು, ಸಾಹಿತಿ-ಪತ್ರಕರ್ತ