ಅಯ್ಯೋ, ಪಾಪ ಕರ್ಣ. ಯಾಕಮ್ಮ ಕುಂತಿ ಮಗುವನ್ನು ನೀರಿನಲ್ಲಿ ಬಿಟ್ಟದ್ದು? ಕರುಣೆಯಿಲ್ಲದ ತಾಯಿ…”ಮಗಳು ನೀರು ತುಂಬಿದ ಕಣ್ಣುಗಳಿಂದ ನಿನ್ನೆ ಕೇಳಿದ್ದ ಪ್ರಶ್ನೆ.ಅದೆಷ್ಟು ಬಾರಿ ನನ್ನನ್ನು ಕಾಡಿಲ್ಲ ಈ ಪ್ರಶ್ನೆ? ಏನೆಂದು ಉತ್ತರಿಸಲಿ? ಉತ್ತರಗಳಿರಲಿಲ್ಲ ನನ್ನಲ್ಲಿ. ರಚ್ಚೆ ಹಿಡಿದು ಮಳೆ ಸುರಿಯುತ್ತಿದೆ.ಸೃಷ್ಟಿಯನ್ನೆಲ್ಲಾ ತೋಯಿಸಿ ಎದುರಿಗೆ ಸಿಕ್ಕಿದ್ದನ್ನೆಲ್ಲಾ ಕೊಚ್ಚಿಕೊಂಡು ಹೋಗುತ್ತಿದೆ. ಅಂಗಳದ ತುಂಬೆಲ್ಲ ಹರಿಯುವ ಕೆಂಪು ಕೆಂಪು ನೀರು.ಹೌದು, ಯಾವುದೂ ನಿಂತ ನೀರಾಗಬಾರದು, ಸದಾ ಹರಿಯುತ್ತಲೇ ಇರಬೇಕು. ನಿಂತು ಪಾಚಿಗಟ್ಟುವುದು ನಾನು ಎಂದಿಗೂ ಯೋಚಿಸದ ಕನಸು. ಗಿರಿಕಂದರ ಎಲ್ಲವನ್ನೂ ಸರಿಸಿ ಮುಂದೆ ಸಾಗಿ ಸಾಗರ ಸೇರುವ ನದಿಯಂತೆ, ಬದುಕೂ ಸದಾ ಚಲನಶೀಲೆ. ಇದನ್ನೇ ತಾನೇ ನಾನು ನನ್ನ ಬದುಕಿನ ಸೂತ್ರವಾಗಿ ನೆಚ್ಚಿಕೊಂಡದ್ದು ! ಎಲ್ಲವೂ ಕೊಚ್ಚಿಕೊಂಡು ಹೋಗುವಾಗ ಮತ್ತೆ ಹರಿಯುವುದು ಅದೆಷ್ಟು ಕಷ್ಟ? ಆದರೂ ಅದು ಮಳೆಗೆ ಅದೆಷ್ಟು ಸಹಜ? ನನಗೆ? ಮಳೆಯ ನೀರಿಗೆ ನೆನಪುಗಳ ಹಂಗಿಲ್ಲ.
ಅಂದು ಕೂಡಾ ಇಂತಹುದೇ ಒಂದು ಮಳೆ ಸುರಿಯುತ್ತಿದ್ದ ಸಂಜೆಯಲ್ಲಿ ಕನಸುಗಳ ಕಾಮನಬಿಲ್ಲನ್ನು ಹೊಸೆದುಕೊಂಡು ಕೂತಿದ್ದೆ. ಚೊಚ್ಚಲ ಬಸಿರು. ಒಂದು ವರ್ಷದ ನಮ್ಮ ಒಲವಲ್ಲಿ ಕುಡಿಯೊಡೆಯುತ್ತಿರುವ ಚಿಗುರನ್ನು ಬಸಿರಲ್ಲಿ ಹೊತ್ತುಕೊಂಡು ಮೆದುವಾಗಿದ್ದೆ. ಗೆಲುವಾಗಿದ್ದೆ, ಭೂಮಿಯಾಗಿದ್ದೆ. ಸಂಭ್ರಮ-ಸಂತಸಗಳ ಕಾರಣವಾಗಿದ್ದೆ. ನನಗೂ ಗೊತ್ತಾಗಲೇ ಇಲ್ಲ, ಸಂತಸದಿಂದ ಸುರಿಯುವ ಮಳೆಮಿಂಚು ಸಿಡಿಲನ್ನೂ ತನ್ನೊಳಗೆ ಹೊತ್ತುಕೊಂಡಿದೆಯೆಂದು. ಸುಖದ ಕ್ಷಣಗಳು ಅದೆಷ್ಟು ಕ್ಷಣಿಕ! ಸುರಿಯುವ ಮಳೆಯಿಂದಾಗಿ ರಸ್ತೆ ಕಾಣದೇ ಇವರ ಬೈಕ್ ಬಸ್‌ಗೆ ಢಿಕ್ಕಿ ಹೊಡೆದು ಸ್ಥಳದಲ್ಲಿಯೇ ಮಳೆ ನಿಂತಿತ್ತು. ನಿಲ್ಲುವ ಮೊದಲು ಎಲ್ಲವನ್ನೂ ಕೊಚ್ಚಿಕೊಂಡು ಹೋಗಿತ್ತು. ಅಂಗಳದಲ್ಲಿ ಅಲ್ಲಲ್ಲಿ ನಿಂತ ಕೆಂಬಣ್ಣದ ನೀರು. ಉತ್ತರ ಕಾಣದ ಪ್ರಶ್ನೆಗಳನ್ನು ನನ್ನೆದುರು ಚೆಲ್ಲಿ ಮಳೆ ನಿಂತಿತ್ತು. ಯಾವುದರ ಪರಿವೇ ಇಲ್ಲದೆ ಕದಲುತ್ತಿರುವ ಬಸಿರು ನನ್ನನ್ನು ವಾಸ್ತವಕ್ಕೆ ಕರೆತಂದು ನಿಲ್ಲಿಸುತ್ತಿದೆ, ಸಂಭ್ರಮಕ್ಕೆ ಕಾರಣವಾಗಿದ್ದು ಈಗ ಬೃಹದಾಕಾರ ಪ್ರಶ್ನೆಯಾಗಿ ಎದುರಿಗೆ ನಿಂತಿದೆ. ಮತ್ತೆ ಮಳೆ ಸುರಿಯುತ್ತಿದೆ. ಅಂಗಳದ ತುಂಬೆಲ್ಲಾ ಹರಿಯುವ ನೀರು, ಅದೆಷ್ಟು ಸಲೀಸು… ಮಳೆಯ ನೀರಿಗೆ ನೆನಪುಗಳ ಹಂಗಿಲ್ಲ.
ಹೊಟ್ಟೆಯಲ್ಲಿ ಮಗು ಬೆಳೆಯುತ್ತಿರುವಾಗ ಒಳ್ಳೆಯ ಪುಸ್ತಕ ಓದಬೇಕು ಅಂತ ಮಹಾಭಾರತವನ್ನು ತಂದುಕೊಟ್ಟಿದ್ದೂ ಅವನೇ.ಸಂತಸದ ಕ್ಷಣಗಳಲ್ಲಿ ಖುಷಿಯಿಂದ ಓದಿದ್ದ ಭಾರತ ಕತೆಯಲ್ಲಿ ಈಗ ನನ್ನ ಮನಸ್ಸನ್ನು ಪೂರ್ತಿಯಾಗಿ ಕಲಕ್ಕಿದ್ದು ಮಾತ್ರ ಕುಂತಿಯ ಪಾತ್ರ. ದೂರ್ವಾಸರು ಉಪದೇಶಿಸಿದ ಮಂತ್ರದ ಕುರಿತು ಕುತೂಹಲಿಯಾಗಿ ಮದುವೆಯ ಮೊದಲೇ ಬಸಿರಾಗಿದ್ದಳು. ಆತಂಕ, ಭಯದ ನಡುವೆಯೇ ಮಗುವನ್ನು ಹಡೆದಿದ್ದಳು. ಮುದ್ದಾಗಿದ್ದ ಗಂಡು ಮಗು. ಮಗುವಿನ ಮುಖ ನೋಡಿ ಲೋಕವನ್ನೇ ಮರೆತಳು ಕುಂತಿ. ತನ್ನೊಡಲೇ ಚಿಗುರಾಗಿ ಬೆಳೆದು ನಗುತ್ತಿದೆ. ಅಮ್ಮನಾದಳು ಕುಂತಿ! ಹಾಲುಣಿಸುವ ಅಮ್ಮನಾದಳು, ಲಾಲಿ ಹಾಡಿ ಕಂದನ ತಬ್ಬಿಕೊಳ್ಳುವ ಅಮ್ಮನಾದಳು. ಸಂಭ್ರಮ… ಸಂಭ್ರಮ ಸಂಭ್ರಮ… ಎಲ್ಲಿಯವರೆಗೆ? ದಾಸಿ ಬಂದು ಎಚ್ಚರಿಸಿದಳು. ಸುಖದ ಕ್ಷಣಗಳು ಅದೆಷ್ಟು ಕ್ಷಣಿಕ. ಸಂತಸದ ಕಾರಣವಾಗಿದ್ದ, ಎದುರಿಗೆ ನಿರಾಳವಾಗಿ ಮಲಗಿದ್ದ ಮಗು, ನನ್ನ ಮಗು ಈಗ ಪ್ರಶ್ನೆಯಾಗಿ ಕಾಡುತ್ತಿದೆ. ಇದು ಯಾರ ಮಗು? ನನ್ನದೇ? ಏನೆಂದು ಉತ್ತರಿಸಲಿ ಈ ಲೋಕಕ್ಕೆ? ಮದುವೆಯ ಮೊದಲೇ ಮಗು? ಅಂದರೆ… ಅಂದರೆ, ಕುಂತಿ ಕನ್ಯೆಯಲ್ಲ…! ನನ್ನ ಮದುವೆಯ ಕನಸು? ಭವಿಷ್ಯ? ಇಲ್ಲ ಹಾಗಾಗಬಾರದು, ನನ್ನದಲ್ಲ ಮಗು. ಈ ಮಗು ನನ್ನದಲ್ಲ! ಅಯ್ಯೋ ನನ್ನ ವಿಧಿಯೇ! ಬಿಟ್ಟೇ ಬಿಟ್ಟಳು ನಗುವ ಮಗುವನ್ನು ಹರಿಯುವ ನೀರಿನಲ್ಲಿ. ಜೊತೆಗೆ ನೆನಪುಗಳನ್ನೂ. ಹರಿಯುವ ನದಿಗೆ ನೆನಪುಗಳ ಹಂಗಿಲ್ಲ !
ಎಲ್ಲವನ್ನೂ ಕಳೆದುಕೊಂಡು ಬರಿಯ ಸಂತಾಪದ ಕಣ್ಣುಗಳಿಗೆ ಕಾರಣವಾಗಿದ್ದ ಕ್ಷಣಗಳಲ್ಲೂ ಬಿಡದೇ ಕಾಡಿದಳು ಮತ್ತೆ ಮತ್ತೆ ಕುಂತಿ. ಕಣ್ಣೆದುರು ತೇಲಿಬಿಟ್ಟ ತೊಟ್ಟಿಲಲ್ಲಿ ನಗುವ ಮಗು! ಇಲ್ಲ, ಇದು ಸರಿಯಲ್ಲ. ತಪ್ಪು ಮಾಡಿದಳು ಕುಂತಿ. ಹಾಗಾದರೆ, ಯಾವುದು ಸರಿ? ಏನಿತ್ತು ಅವಳ ಮುಂದೆ ಬೇರೆ ಆಯ್ಕೆ? ಎದುರಲ್ಲಿ ಶಾಂತವಾಗಿ ಹರಿಯುವ ನದಿ. ನದಿಯೊಂದು ತೊಟ್ಟಿಲು. ಆದರೆ, ಮಗುವಿಲ್ಲ! ಇಲ್ಲ, ತೊಟ್ಟಿಲಲ್ಲಿ ಮಗುವಿಲ್ಲ. ನನ್ನ ಮಗು… ನನ್ನ ಮಗು…! ಕನಸೇ? ಇದು ಕನಸೇ? ಕೂತಲ್ಲಿ ನಿಂತಲ್ಲಿ ಕಾಡಿದ ಕುಂತಿ ಕೊನೆಗೂ ನನ್ನೊಳಗಿಳಿದಳು. ಇಲ್ಲ ಹಾಗಾಗಬಾರದು. ಕರ್ಣ ಪಟ್ಟ ಪಾಡು ನನ್ನ ಮಗುವಿಗೆ ಬರಬಾರದು.ಹಾಂ… ಹರಿಯುತ್ತಲೇ ಇರಬೇಕು ಎಲ್ಲವನ್ನು ಕೊಚ್ಚಿಕೊಂಡು ಹೋದರೂ ಹರಿಯುತ್ತಲೇ ಇರಬೇಕು. ನಿಂತ ನೀರಾಗಬಾರದು. ನಾನು ಮಳೆಯಾಗಬೇಕು, ಬಿಡದೇ ಸುರಿಯುವ ಮಳೆಯಾಗಬೇಕು. ನೆನಪುಗಳನ್ನೆಲ್ಲ ಕೊಚ್ಚಿಕೊಂಡು ಸದಾ ಹರಿಯುವ ನೀರಾಗಬೇಕು. ಕುಂತಿಯಂತೆ ಮಗುವನ್ನು ನೀರಲ್ಲಿ ತೇಲಿ ಬಿಡಲಾರೆ. ಈ ಮಗುವನ್ನುಳಿಸಿ ಬದುಕನ್ನು ನಿಂತ ನೀರಾಗಿಸಲಾರೆ. ನಾನು ಹರಿಯುವ ನದಿ. ನನಗೆ ಅಣೆಕಟ್ಟುಗಳಿಲ್ಲ. ಅಳು, ದುಃಖ, ಸಾಂತ್ವನ, ಸಮಾಧಾನ ಎಷ್ಟು ದಿನ? ಎಲ್ಲವನ್ನೂ ಕಳೆದುಕೊಂಡೆ. ಎದುರಿಗೆ ಶಾಂತವಾಗಿ ಹರಿಯುವ ನದಿ. ತೇಲಿ ದೂರ ದೂರ ಸಾಗುತ್ತಿರುವ ತೊಟ್ಟಿಲು. ಬರಿಯ ತೊಟ್ಟಿಲು. ಕಂದನಿಲ್ಲದ ತೊಟ್ಟಿಲು. ಬರಿದಾದೆ, ಹಗುರಾದೆ. ಮತ್ತೆ ಹರಿಯುವ ನೀರಾದೆ.
ಹರಿಯುವ ನೀರಿಗೆ ನೆನಪುಗಳ ಹಂಗಿಲ್ಲ.
ಯಾವುದೂ ನಿಲ್ಲುವುದಿಲ್ಲ. ಹರಿಯುವುದೇ ಬದುಕು! ಮತ್ತೆ ಮದುವೆ, ಮತ್ತೆ ಮಗು, ನಗು… ಬದುಕು ಸದಾ ಚಲನಶೀಲ.ಎಡಬಿಡದೇ ಸುರಿಯುವ ಮಳೆ, ಹರಿಯುತ್ತಿರುವ ನೀರು… ಈಗ ಮಗಳ ಪ್ರಶ್ನೆ. ಕೆಟ್ಟವಳು ಕುಂತಿ. ಕುಂತಿ ಕೆಟ್ಟವಳು. ಕುಂತಿ… ನಿಜಕ್ಕೂ ಕುಂತಿ ಕೆಟ್ಟವಳೆ? ಹೇಗೆ ಎದುರಿಗೆ ಇರಿಸಲಿ ಈ ಕುಂತಿಯನ್ನು? ಅರ್ಥವಾದಳೇ, ಕುಂತಿ ನನ್ನ ಮಗಳ ಕಣ್ಣಿಗೆ? ಕುಂತಿಯಾಗದ ಹೊರತು ಕುಂತಿ ದಕ್ಕುವವಳಲ್ಲ. ಲೋಕಕ್ಕೆ ಹೇಳಲು ನನ್ನಲ್ಲಿ ನಿಜಕ್ಕೂ ಉತ್ತರಗಳಿಲ್ಲ. ನಾನು ಸುರಿಯುತ್ತಿರುವ ಮಳೆ. ಕೊಚ್ಚಿಕೊಂಡು ಹೋಗುವ ಮಳೆ. ಹರಿಯುವ ನೀರಿಗೆ ನೆನಪುಗಳ ಹಂಗಿಲ್ಲ.
– ರವೀಂದ್ರ ನಾಯಕ್