Advertisement

ತುಳುಕೂಟ ಡೊಂಬಿವಲಿ ವತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮ

12:08 PM Feb 11, 2018 | |

ಡೊಂಬಿವಲಿ: ಗೃಹಿಣಿಯೊಬ್ಬಳು ಕೇವಲ ಮನೆಯೊಡತಿಯಾಗದೆ, ಸಮಾಜಪರ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕು. ಎಲ್ಲಾ ಗುಣಗಳನ್ನು ಹೊಂದಿರುವ ಮಹಿಳೆಯು ತನ್ನಿಂದ ಎಲ್ಲಾ ಸಾಧ್ಯ ಎಂಬುವುದನ್ನು ಸಾಧಿಸಿ ತೋರಿಸುವಲ್ಲಿ ಗುರುತಿಸಿಕೊಳ್ಳಬೇಕು. ಆಗ ಮಾತ್ರ ಆಕೆ ಯುವ ಪೀಳಿಗೆಗೆ ಮಾದರಿಯಾಗಿ ನಿಲ್ಲುತ್ತಾಳೆ ಎಂದು ಭಂಡಾರಿ ಸೇವಾ ಸಮಿತಿ ಮುಂಬಯಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೋಭಾ ಎಸ್‌. ಭಂಡಾರಿ ಕಡಂದಲೆ ಅವರು ನುಡಿದರು.

Advertisement

ಇತ್ತೀಚೆಗೆ ತುಳುಕೂಟ ಡೊಂಬಿವಲಿ ವತಿಯಿಂದ ಆಯೋಜಿಸಲಾಗಿತ್ತ ಅರಸಿನ ಕುಂಕುಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿ, ಪಾಲ್ಗೊಂಡ ಎಲ್ಲರಿಗೂ ಶುಭಹಾರೈಸಿದರು.

ಓಂ ಶಕ್ತಿ ಮಹಿಳಾ ಮಂಡಳಿಯ ಅಧ್ಯಕ್ಷೆ ಚಿತ್ರಾ ಆರ್‌. ಶೆಟ್ಟಿ ಅವರು ಮಾತನಾಡಿ, ಹೆಣ್ಣಾಗಿ ಹುಟ್ಟುವುದೇ ಭಾಗ್ಯ. ಈ ಆಧುನಿಕ ಯುಗದಲ್ಲಿ ಹೆಣ್ಣಿಗೆ ಎಲ್ಲಾ ಕ್ಷೇತ್ರಗಳಲ್ಲೂ ಹೆಚ್ಚಿನ ಪ್ರಾಧಾನ್ಯತೆ ದೊರೆಯುತ್ತಿದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅಭಿಪ್ರಾಯಿಸಿದರು.

ಇನ್ನೋರ್ವೆ ಅತಿಥಿ ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಕೃಷಿ¡ ಮುರಳಿ ಶೆಟ್ಟಿ ಅವರು ಮಾತನಾಡಿ, ಅರಸಿನ ಕುಂಕುಮ ಕಾರ್ಯಕ್ರಮವು  ಒಂದು ಮಂಗಳದಾಯಕವಾದ ಆಚರಣೆಯಾಗಿದೆ. ಮಹಿಳೆಯೊಬ್ಬಳು ಸಂಸಾರದ ಕರ್ತವ್ಯಗಳನ್ನು ನಿಭಾಯಿಸಿ ಸಮಾಜದ ಬಂಧು-ಬಾಂಧವರ ಜೊತೆ ಬೆರೆತು ತನ್ನನ್ನು ಸಾಮರಸ್ಯದ ಬದುಕಿನಲ್ಲಿ ರೂಪಿಸಿಕೊಳ್ಳುತ್ತಾಳೆ. ಹೆಣ್ಣೊಬ್ಬಳ ಬದುಕು, ಅರಸಿನದಂತೆ ತಾತ್ವಿಕವಾಗಿಯೂ, ಕುಂಕುಮದಂತೆ ಶಕ್ತಿಯುತವಾಗಿರಲಿ ಎಂದರು.

ಕರ್ನಾಟಕ ಸಂಘ ಡೊಂಬಿವಲಿ ಇದರ ಮಹಿಳಾ ವಿಭಾಗದ ನಿಕಟಪೂರ್ವ ಅಧ್ಯಕ್ಷೆ ವಿಮಲಾ ವಿಠuಲ್‌ ಶೆಟ್ಟಿ ಅವರು ಮಾತನಾಡಿ, ಮರಾಠಿ ನೆಲದ ಆಚರಣೆಯನ್ನು ಪರವೂರಿನಿಂದ ಬಂದು ಇಲ್ಲಿ ನೆಲೆಸಿರುವ ತುಳು-ಕನ್ನಡಿಗರು ಸಂತೋಷದಿಂದ ಆಚರಣೆ ಮಾಡುವುದು ನಮ್ಮ ಸದ್ಗುಣಕ್ಕೆ ಒಂದು ನಿದರ್ಶನವಾಗಿದೆ. ನಮ್ಮ ಜನ್ಮಭೂಮಿಯ ಆಚರಣೆಗಳನ್ನು ಆಚರಿಸುವ ಜೊತೆಗೆ ನಮ್ಮ ಕರ್ಮಭೂಮಿಯ ಆಚರಣೆಗಳನ್ನು ನಮ್ಮದಾಗಿಸಿಕೊಳ್ಳಬೇಕು. ಹೆಣ್ಣು ಮನೆಯ ನಂಟಿನ ರೂಪಕ ಎಂದು ತಿಳಿಸಿದರು.

Advertisement

ವಿಶೇಷ ಆಕರ್ಷಣೆಯಾಗಿ ಆಗಮಿಸಿದ್ದ ತುಳು ಚಲನಚಿತ್ರ ನಟ ಸೌರಭ್‌ ಭಂಡಾರಿ ಅವರು ಮಾತನಾಡಿ, ತುಳು ಭಾಷೆ, ಸಂಸ್ಕೃತಿಯನ್ನು ಉಳಿಸುವಲ್ಲಿ ತುಳುಕೂಟ ಡೊಂಬಿವಲಿ ಮಾಡುತ್ತಿರುವ ಕಾರ್ಯಗಳನ್ನು ಶ್ಲಾಘಿಸಿದರು. ಯುವಪೀಳಿಗೆ ತುಳುವ ಸಂಸ್ಕೃತಿಯನ್ನು ಉಳಿಸುವಲ್ಲಿ ಮುಂದೆ ಬರಬೇಕು ಎಂದರು.

ಭಂಡಾರಿ ಚಾರಿಟೇಬಲ್‌ ಟ್ರಸ್ಟ್‌ನ ಮುಖ್ಯಸ್ಥೆ ಅನಿತಾ ಭಂಡಾರಿ, ತುಳುಕೂಟ ಡೊಂಬಿವಲಿ ಅಧ್ಯಕ್ಷ ಹೇಮಂತ್‌ ಶೆಟ್ಟಿ, ಕೃಷ್ಣ ಶೆಟ್ಟಿ, ಚಿತ್ರಾ ಶೆಟ್ಟಿ, ವಿಮಲಾ ಶೆಟ್ಟಿ, ಸೌರಭ್‌ ಭಂಡಾರಿ ಅವರು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ರಾರಂಭದಲ್ಲಿ ಚಂದ್ರಹಾಸ್‌ ರೈ ಪುತ್ತೂರು ಮತ್ತು ಬಳಗದವರಿಂದ ಸಂಗೀತ ರಸಮಂಜರಿ ನಡೆಯಿತು. ಯೋಗ ಗುರು ಜಯಶೀಲ ಭಂಡಾರಿ ಇವರ ಬಳಗದಿಂದ  ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸ್ಥಳೀಯ ಮಕ್ಕಳಿಂದ ನೃತ್ಯ ವೈವಿಧ್ಯ ನಡೆಯಿತು. 

ಸಾಹಿತಿ, ವಿದ್ವಾನ್‌ ಮಿತ್ರಪಟ್ಣ ನಾರಾಯಣ ಬಂಗೇರ ದಂಪತಿ ಹಾಗೂ ಜೊತೆ ಕೋಶಾಧಿಕಾರಿ ಹೇಮಾನಂದ ದೇವಾಡಿಗ ಅವರನ್ನು  ಸಂಸ್ಥೆಯ ವತಿಯಿಂದ ಸಮ್ಮಾನಿಸಲಾಯಿತು.

ತುಳುಕೂಟ ಡೊಂಬಿವಲಿಯ ಅಧ್ಯಕ್ಷ ಹೇಮಂತ್‌ ಶೆಟ್ಟಿ ಅವರು ಮಾತನಾಡಿ, ರಂಗಕರ್ಮಿ ತೋನ್ಸೆ ವಿಜಯ ಕುಮಾರ್‌ ಶೆಟ್ಟಿ ಅವರ ಕಲ್ಪನೆ, ಅವರು ನಿರ್ಮಿಸಿಕೊಟ್ಟ ಈ ಸಂಸ್ಥೆಯನ್ನು ತುಂಬಾ ಉತ್ತಮ ರೀತಿಯಲ್ಲಿ ನಾವು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ. ಸಂಸ್ಥೆಯ ಉದ್ದೇಶಗಳಿಗೆ ಪ್ರಾಮುಖ್ಯತೆ ಕೊಟ್ಟು, ಕಲೆಯ ಮುಖಾಂತರ ಭಾಷೆ, ಸಂಸ್ಕೃತಿಯನ್ನು ರಕ್ಷಿಸುವ ಕಾರ್ಯ ಮಾಡುತ್ತಿದ್ದೇವೆ. ಅದಕ್ಕಾಗಿ ಎಲ್ಲರ ಸಹಕಾರ ಸದಾಯಿರಲಿ. ಹೆಣ್ಣು ಎಂದರೆ ಶಕ್ತಿ. ಆಕೆ ಮನಸ್ಸು ಮಾಡಿದರೆ, ಈ ಬದುಕಿನಲ್ಲಿ ಯಾವುದೇ ಕಾರ್ಯಕ್ರಮಗಳನ್ನೂ ಮಾಡಬಲ್ಲಳು. ಜೀವನದಲ್ಲಿ ತನ್ನೆಲ್ಲಾ ಪಾತ್ರಗಳನ್ನು ಸರಳವಾಗಿ ನಿಭಾಯಿಸಲು ಹೆಣ್ಣೊಬ್ಬಳಿಗೆ ಸಾಧ್ಯ ಎಂದರು.

ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ತುಳು-ಕನ್ನಡಿಗ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಮಹಿಳೆಯರು ಪರಸ್ಪರ ಅರಸಿನ ಕುಂಕುಮವನ್ನು ಹಚ್ಚಿಕೊಂಡು ಶುಭಹಾರೈಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next