ಕುಣಿಗಲ್ : ಪತ್ನಿಯನ್ನು ಹಿಡಿದುಕೊಂಡಿದ್ದ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ತೋಟದ ಕೆಲಸಗಾರನನ್ನು ಸಾಯಿಸಿ ಸುಟ್ಟು ಹಾಕಿದ್ದ ಆರೋಪಿ ಲೋಕೇಶ ಎಂಬವನಿಗೆ ತುಮಕೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶೆ ಕೆ.ಬಿ.ಗೀತಾ ಜೀವಾವಧಿ ಶಿಕ್ಷೆ ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ತಾಲೂಕಿನ ಹುಲಿಯೂರುದುರ್ಗ ಹೋಬಳಿ ನಿಡಸಾಲೆ ಗ್ರಾಮದ ಜಯರಾಮನ ಕೊಲೆ ಸಂಬಂಧಪಟ್ಟಂತೆ ಲೋಕೇಶ ಎಂಬವರಿಗೆ ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಘಟನೆ ವಿವರ : ಆರೋಪಿ ಲೋಕೇಶನ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ನಿಡಸಾಲೆ ಗ್ರಾಮದ ಜಯರಾಮನ್ನು 2016ರ ಸೆ. 7 ರಂದು ತೋಟದಲ್ಲಿ ಕೆಲಸ ಮಾಡುವಾಗ ಲೋಕೇಶನ ಪತ್ನಿಯನ್ನು ಜಯರಾಮ ಹಿಡಿದುಕೊಳ್ಳಲು ಹೋಗಿದ್ದಾನೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿ ಲೋಕೇಶ ಎಂಬಾತ ಜಯರಾಮನನ್ನು ಕೊಲೆ ಮಾಡಲು ನಿಶ್ಚಯಿಸಿಕೊಂಡಿದ್ದ.
ಅದರಂತೆ ಲೋಕೇಶ ಸೆ. 8 ರಂದು ಸಂಜೆ ಕೂಲಿಯಾಳು ಜಯರಾಮನ ಜತೆ ಅಂಗಡಿ ಬಳಿಗೆ ಹೋಗಿ 200 ರೂ. ಯ ಮಧ್ಯಪಾನದ ಪ್ಯಾಕೆಟ್‌ಗಳನ್ನು ತೆಗೆದುಕೊಂಡು ಆತನ ಅಡಿಕೆ ಮತ್ತು ಬಾಳೆ ತೋಟಕ್ಕೆ ಹೋಗಿ ಬರೋಣ ಎಂದು ಬೈಕ್‌ನಲ್ಲಿ ಕರೆದುಕೊಂಡು ಹೋಗಿ ಜಯರಾಮನಿಗೆ ಮಧ್ಯಪಾನ ಕುಡಿಸಿದ್ದು, ಆತ ಮಧ್ಯಪಾನದ ನಶೆಯಲ್ಲಿದ್ದಾಗ ಲೋಕೇಶ ಬಿದಿರು ದೊಣ್ಣೆಯಿಂದ ಜಯರಾಮನ ತಲೆಗೆ ಹೊಡೆದು ಪ್ರಜ್ಞೆ ತಪ್ಪಿಸಿ ನಂತರ ಜಯರಾಮನ ಲುಂಗಿಯಿಂದ ಕುತ್ತಿಗೆ ಬಿಗಿದು ಆತ ಮೃತಪಟ್ಟ ಬಳಿಕ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ರೀತಿಯಲ್ಲಿ ಜಯರಾಮನನ್ನು ಲುಂಗಿಯಿಂದ ಅಡಿಕೆ ಮರಕ್ಕೆ ನೇತು ಹಾಕಿ ಲೋಕೇಶ ಮನೆಗೆ ವಾಪಸ್ಸಾಗಿದ್ದಾನೆ.
ಮಾರನೇ ದಿನ ಎಂದರೆ ಸೆ.9 ರಂದು ವೈಕುಂಠಮೂರ್ತಿ ಎಂಬವರು ದೇವರ ಪೂಜೆಗೆ ಬಾಳೆಕಂದನ್ನು ಕೊಯ್ಯಲು ಲೋಕೇಶನ ತೋಟಕ್ಕೆ ಹೋಗಿದ್ದಾಗ ಮೃತ ಜಯರಾಮ ಬಿದ್ದಿರುವುದನ್ನು ನೋಡಿ ಮಧ್ಯಪಾನ ಮಾಡಿ ಮಲಗಿರಬಹುದೆಂದು ತಿಳಿದು ವಾಪಸ್ಸಾಗಿದ್ದಾರೆ.
ಕೃತ್ಯ ಎಸಗಿದ್ದ ಲೋಕೇಶ ಕೃತ್ಯ ಮರೆಮಾಚುವ ಉದ್ದೇಶದಿಂದ ಎರಡನೇ ಆರೋಪಿ ಮೇಘೇಶನೊಂದಿಗೆ ಚರ್ಚೆಸಿ ಮೃತ ಜಯರಾಮನ ಶವವನ್ನು ಸುಟ್ಟು ಹಾಕಲು ನಿಶ್ಚಯಿಸಿ ಮೇಘೇಶನನ್ನು ಕರೆದುಕೊಂಡು ಟ್ಯಾಕ್ಟರ್ ಶೇಡ್‌ನಲ್ಲಿ ಇಟ್ಟಿದ್ದ ಡೀಸೆಲ್ ಹಾಗೂ ಹಳೇ ಟಯರ್ ಹಾಗೂ ಮೃತದೇಹವನ್ನು ಓಮಿನಿ ಕಾರಿನಲ್ಲಿ ಇಟ್ಟುಕೊಂಡು ಮದ್ದೂರು ತಾಲೂಕು ಆತಗೂರು ಹೋಬಳಿ ಗೊಲ್ಲರದೊಡ್ಡಿಗೆ ಹೋಗುವ ಸಾರ್ವಜನಿಕ ರಸ್ತೆ ಪಕ್ಕದ ಸಾಮಾಜಿಕ ಅರಣ್ಯ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಶವಕ್ಕೆ ಡೀಸಲ್ ಸುರಿದು, ಟೈರ್ ಇಟ್ಟು ಸುಟ್ಟು ಶವವನ್ನು ಹಾಕಿದ್ದಾರೆ ಎಂದು ಅಂದಿನ ಕುಣಿಗಲ್ ವೃತ್ತ ನಿರೀಕ್ಷ ಎ.ಎನ್.ಅಶೋಕ್‌ಕುಮಾರ್ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದರು.
ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಆರೋಪಿ ಲೋಕೇಶನಿಗೆ ಜೀವವಾಧಿ ಶಿಕ್ಷೆ ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಿದೆ. ದಂಡ ಕಟ್ಟಲು ತಪ್ಪಿದರೇ ಹೆಚ್ಚುವರಿಯಾಗಿ ಆರು ತಿಂಗಳು ಶಿಕ್ಷೆ ನೀಡಿದೆ.
ವಾದವನ್ನು ತುಮಕೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸಾರ್ವಜನಿಕ ಅಭಿಯೋಜಕ ಹನುಮಂತರಾಯತಾಳಿಕೇರಿ ಮಂಡಿಸಿದರು. ಎರಡನೇ ಆರೋಪಿ ಮೇಘೇಶನನ್ನು ದೋಷಮುಕ್ತಗೊಳಿಸಿ ನ್ಯಾಯಾಲಯ ಆದೇಶಿಸಿದೆ.