ಕುಣಿಗಲ್ : ಪ.ಜಾತಿ, ಪ.ಪಂಗಡ ಜನ ಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳ ಸಂಬಂಧ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್‌ದಾಸ್ ಆಯೋಗದ ವರದಿ ಕೂಡಲೇ ಜಾರಿಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿಯು ಪಟ್ಟಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಪ.ಜಾತಿ, ಪ.ಪಂಗಡದ ಈಗಿರುವ ಮೀಸಲಾತಿ ಪ್ರಮಾಣವನ್ನು ಅನುಕ್ರಮವಾಗಿ 15 ರಿಂದ 17 ಹಾಗೂ ಮೂರರಿಂದ 7.5 ಕ್ಕೆ ಹೆಚ್ಚಳ ಮಾಡುವಂತೆ ಆಗ್ರಹಿಸಿ ಹಾಗೂ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸಾನ್ನಾನಂದ ಪುರಿ ಸ್ವಾಮೀಜಿಯ ಹೋರಾಟವನ್ನು ಬೆಂಬಲಿಸಿ ಬೆಂಬಲಿಸಿ ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿಯ ಪದಾಧಿಕಾರಿಗಳು ಪಟ್ಟಣದ ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ದಿಕ್ಕಾರ ಕೂಗಿದರು, ಪ್ರತಿಭಟನೆಗೆ ಶಾಸಕ ಡಾ.ಹೆಚ್.ಡಿ.ರಂಗನಾಥ್, ಪುರಸಭಾಧ್ಯಕ್ಷ ರಂಗಸ್ವಾಮಿ ಬೆಂಬಲ ನೀಡಿದರು.
ಶಾಸಕ ಡಾ.ಹೆಚ್.ಡಿ.ರಂಗನಾಥ್ ಮಾತನಾಡಿ ಡಾ. ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನತೆಯ ಹಕ್ಕು ಕಲ್ಪಿಸಿಕೊಟ್ಟಿದ್ದಾರೆ ಇದನ್ನು ಕಸಿದುಕೊಳ್ಳುವಂತ ಕೆಲಸ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಮಾಡುತ್ತಿವೆ ಎಂದು ಆರೋಪಿಸಿದರು, ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದ್ದ ಸಮಯದಲ್ಲಿ ಪ.ಜಾತಿ. ಪಂಗಡದವರಿಗೆ ಗುತ್ತಿಗೆಯಲ್ಲೂ ಮೀಸಲಾತಿ ತಂದಿದರು ಹಾಗೂ ದಲಿತ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರಿಗೆ ಸಾಕಷ್ಟು ಯೋಜನೆಗಳನ್ನು ರೂಪಿಸಿ ಆ ಸಮುದಾಯ ಜನರನ್ನು ಮೇಲೆತ್ತುವಂತ ಕೆಲಸ ಮಾಡಿದರು, ಆದರೆ ಈ ಸರ್ಕಾರದಲ್ಲಿ ಬರೀ ಚುನಾವಣೆ ಸಂದರ್ಭದಲ್ಲಿ ಆಶ್ವಾಸನೆ ಕೊಡುವ ಮೂಲಕ ಆ ಜನರಿಗೆ ಯಾವುದೇ ಸೌಲಭ್ಯ ಹಾಗೂ ನ್ಯಾಯಮೂರ್ತಿ ಹೆಚ್.ಎನ್.ನಾಗಮೋಹನ್‌ದಾಸ್ ಆಯೋಗದ ವರದಿಯನ್ನು ಜಾರಿಗೊಳಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಒಕ್ಕೂಟ ರಾಷ್ಟ್ರಕ್ಕೆ ಗಂಡಾಂತರ : ಪ.ಜಾತಿ, ಪ.ಪಂಗಡದ ಸಮುದಾಯಗಳಿಗೆ ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯಗಳು ಕೊಡದಿದ್ದರೇ ಭಾರತದ ಒಕ್ಕೂಟ ರಾಷ್ಟ್ರಕ್ಕೆ ಗಂಡಾಂತರ ಎದುರಾಗಲಿದೆ ಎಂದು ಸರ್ಕಾರಕ್ಕೆ ಶಾಸಕರು ಎಚ್ಚರಿಸಿದರು. ಈ ವೇಳೆ ವಿ.ಶಿವಶಂಕರ್, ಎಸ್.ಆರ್.ಚಿಕ್ಕಣ್ಣ, ಜಿ.ಕೆ.ನಾಗಣ್ಣ, ಬಿ.ಡಿ.ಕುಮಾರ್, ದಲಿತ್ ನಾರಾಯಣ್, ರಾಜುವೆಂಕಟಪ್ಪ ಮಾತನಾಡಿದರು, ಪ್ರತಿಭಟನೆಯಲ್ಲಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಪಾಳ್ಯ ಶ್ರೀನಿವಾಸ್, ಸದಸ್ಯ ದೇವರಾಜು, ದಲಿತ ಮುಖಂಡರಾದ ವರದರಾಜು, ರಾಮು, ತಿಮ್ಮರಾಜು ಪಾಲ್ಗೊಂಡಿದರು.