Advertisement

Kunigal: ಬರದ ತಾಲೂಕಿಗೆ ಹರಿದ ಹೇಮೆ ನೀರು : ಶಾಸಕರಿಂದ ನಾಲೆ ಪರಿಶೀಲನೆ   

03:23 PM Oct 29, 2023 | Team Udayavani |

ಕುಣಿಗಲ್: ಮೂಡಲ್ ಕುಣಿಗಲ್ ದೊಡ್ಡಕೆರೆಗೆ ಎರಡನೇ ಭಾರಿ ಹೇಮಾವತಿ ನೀರು ಹರಿದ ಹಿನ್ನಲೆ ತಾಲೂಕಿನ ಕುರುಡಿಹಳ್ಳಿ ಗ್ರಾಮದ ಬಳಿಯ ನಾಲೆಯನ್ನು ಶಾಸಕ ಡಾ.ಹೆಚ್.ಡಿ.ರಂಗನಾಥ್ ಪರಿಶೀಲನೆ ನಡೆಸಿದರು.

Advertisement

ಕುಣಿಗಲ್ ತಾಲೂಕಿಗೆ ಈ ವರ್ಷದಲ್ಲಿ ಎರಡನೇ ಭಾರಿ ಹೇಮಾವತಿ ನೀರು ಹರಿದ ಕಾರಣ ಶಾಸಕ ಡಾ.ಹೆಚ್.ಡಿ.ರಂಗನಾಥ್ ಇಲ್ಲಿನ ಕುರುಡಿಹಳ್ಳಿ ಹೇಮಾವತಿ ನಾಲೆ ಬಳಿ ಭೇಟಿ ನೀಡಿ ನೀರು ಬರುವಿಕೆಯನ್ನು ಪರಿಶೀಲಿಸಿದರು.

ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈ ಭಾರಿ ಮುಂಗಾರು ಮತ್ತು ಹಿಂಗಾರು ಮಳೆ ಕೈ ಕೊಟ್ಟ ಪರಿಣಾಮ ತಾಲೂಕು ಬರಕ್ಕೆ ತುತ್ತಾಗಿದೆ. ರೈತರ ಕೃಷಿಗೆ ಹಾಗೂ ಜನ -ಜಾನುವಾರಗಳ ಕುಡಿಯುವ ನೀರಿಗೆ ತೊಂದರೆಯಾಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ನಾನು ಮತ್ತು ಸಂಸದ ಡಿ.ಕೆ.ಸುರೇಶ್ ನೀರಾವರಿ ಸಲಹ ಸಮಿತಿ ಸಭೆಯಲ್ಲಿ ಹೇಮಾವತಿ ಕೊನೆ ಭಾಗದಲ್ಲಿ ಕುಣಿಗಲ್ ತಾಲೂಕಿಗೆ ಹೇಮಾವತಿ ನೀರು ಹರಿಸುವಂತೆ ಮನವಿ ಮಾಡಿದೆವು ಎಂದರು.

ಮನವಿಗೆ ಸ್ಪಂದಿಸಿದ ನೀರಾವರಿ ಸಲಹ ಸಮಿತಿ ಅಧ್ಯಕ್ಷ ಹಾಗೂ ಸಚಿವ ಕೆ.ಎನ್.ರಾಜಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್, ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಎರಡನೇ ಭಾರಿ ತಾಲೂಕಿಗೆ ನೀರು ಹರಿಸಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

10 ದಿನ ನೀರು: ನಾಲೆಯಲ್ಲಿ 350 ಕ್ಯೂಸೆಕ್ಸ್ ನೀರು ಹರಿಯುತ್ತಿದ್ದು, ಈ ನೀರು 10 ದಿನಗಳ ಕಾಲ ಹರಿಯಲಿದೆ. ಇದರಿಂದ ಕುಣಿಗಲ್ ದೊಡ್ಡಕೆರೆ, ಕೊತ್ತಗೆರೆ ಹಾಗೂ ಗುನ್ನಾಗರೆ ಕೆರೆಗಳಿಗೆ ಸದ್ಯಕ್ಕೆ ನೀರು ತುಂಬಿಸಲಾಗುತ್ತಿದೆ, ಬಳಿಕ ಎಡಿಯೂರು ಸೇರಿದಂತೆ ಎಲ್ಲಾ ಸಣ್ಣ ಪುಟ್ಟ ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ಹೇಳಿದರು.

Advertisement

ರಾಜ್ಯದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ, ಹಲವು ತಾಲೂಕುಗಳು ಬರಗಾಲಕ್ಕೆ ತುತ್ತಾಗಿದೆ. ಹರೆ ಮಲೆನಾಡು ಹಾಸನ ಜಿಲ್ಲೆಯಲ್ಲಿ ಮಳೆ ಕೈ ಕೊಟ್ಟ ಕಾರಣ ಗೂರೂರು ಜಲಾಶಯಕ್ಕೆ ಸಾಕಷ್ಟು ನೀರು ಹರಿದಿಲ್ಲ. ಜಲಾಶಯದಲ್ಲಿ ಲಭ್ಯವಿರುವ ನೀರು ಜನ ಜಾನುವಾರಗಳಿಗೆ, ಕುಡಿಯುವ ನೀರಿಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಇದಕ್ಕೆ ರೈತರು ಮತ್ತು ಸಾರ್ವಜನಿಕರು ಸಹಕರಿಸಬೇಕೆಂದು ಶಾಸಕರು ಮನವಿ ಮಾಡಿದರು.

ಜನರ ಹಿತ ಕಾಯುವೆ: ತಾಲೂಕಿನ ಇತಿಹಾಸದಲ್ಲೇ ಕುಣಿಗಲ್ ವಿಧಾನಸಭಾ ಕ್ಷೇತ್ರದಿಂದ ಸತತ ಎರಡನೇ ಭಾರಿ ಯಾವೊಬ್ಬರು ಜಯಗಳಿಸಿರುವುದಿಲ್ಲ, ಆದರೆ ಕ್ಷೇತ್ರದ ಮತದಾರರು ನನ್ನ ಮೇಲೆ, ಸಂಸದ ಡಿ.ಕೆ.ಸುರೇಶ್ ಹಾಗೂ ಕಾಂಗ್ರೆಸ್ ಸರ್ಕಾರದ ಮೇಲೆ ವಿಶ್ವಾಸ ಇಟ್ಟು ಎರಡನೇ ಭಾರಿ ನನ್ನಗೆ ಅತ್ಯದಿಕ ಮತ ನೀಡಿ ದಾಖಲೆ ಅಂತರದಲ್ಲಿ ಗೆಲ್ಲಿಸಿದ್ದಾರೆ. ಅವರ ಋಣವನ್ನು ಕ್ಷೇತ್ರದ ಅಭಿವೃದ್ದಿ ಮಾಡುವ ಮೂಲಕ ತೀರಿಸಲು ಪ್ರಯತ್ನಿಸುತ್ತೇನೆ ಎಂದರು.

ಸರ್ಕಾರ ಕುಣಿಗಲ್ ತಾಲೂಕನ್ನು ಬರಗಾಲ ಪೀಡಿತ ತಾಲೂಕು ಎಂದು ಘೋಷಣೆ ಮಾಡಿದೆ ಇದ್ದುದರಿಂದ ಬರುವ ವಿಶೇಷ ಅನುದಾನವನ್ನು ತಾಲೂಕಿನ ಅಭಿವೃದ್ದಿಗೆ ಬಳಸುತ್ತೇನೆ. ಜನರು ಯಾವುದೇ ಅತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಅವರೊಂದಿಗೆ ನಾನು ಇದ್ದೇನೆ ಜನರ ಹಿತ ಕಾಯುವುದೇ ನನ್ನ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಈ ವೇಳೆ ತಾ.ಪಂ ಮಾಜಿ ಸದಸ್ಯರಾದ ಜೆಸಿಬಿ ರಾಜಣ್ಣ, ಗಂಗರಂಗಯ್ಯ(ರಾಜಣ್ಣ), ಗ್ರಾ.ಪಂ ಮಾಜಿ ಅಧ್ಯಕ್ಷ ಬಿ.ಡಿ.ಕುಮಾರ್, ಬೇಗೂರು ಮೂರ್ತಿ, ಮುಖಂಡರಾದ ಸುಂದರಕುಪ್ಪೆಪಾಪಣ್ಣ, ನರಸೇಗೌಡ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next