ಕುಣಿಗಲ್: ಪೆಟ್ಟಿಗೆಗೆ ಅಂಗಡಿಗಳನ್ನು ತೆರವುಗೊಳಿಸಲು ಮೀನಮೇಷ, ಕುಪಿತಗೊಂಡ ಸದಸ್ಯೆ ಜಯಲಕ್ಷ್ಮೀ ಪರಿಸರ ಎಂಜಿನಿಯರ್ ಚಂದ್ರಶೇಖರ್ ಅವರನ್ನು ಏಕ ವಚನದಲ್ಲಿ ನಿಂದಿಸಿ, ನೀರಿನ ಬಾಟಲ್‌ನಿಂದ ಹಲ್ಲೆಗೆ ಯತ್ನಿಸಿದ ಘಟನೆ ಪುರಸಭಾ ಸಾಮಾನ್ಯ ಸಭೆಯಲ್ಲಿ ಶನಿವಾರ ನಡೆಯಿತು.
ಇಲ್ಲಿನ ಪುರಸಭೆಯ ಸಭಾಂಗಣದಲ್ಲಿ ಅಧ್ಯಕ್ಷ ಎಸ್.ಕೆ.ನಾಗೇಂದ್ರ ಅವರ ಅಧ್ಯಕ್ಷೆತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ 13ನೇ ವಾರ್ಡ್‌ನ ಸದಸ್ಯೆ ಕೆ.ಆರ್.ಜಯಲಕ್ಷ್ಮೀ ಮಾತನಾಡಿ, ತುಮಕೂರು ರಸ್ತೆಯ, ಕಾಂಗ್ರೆಸ್ ಕಚೇರಿ ಹಾಗೂ ಕೃಷಿ ಇಲಾಖೆಯ ಎದುರಲ್ಲಿ ಕೆಲ ವ್ಯಕ್ತಿಗಳು ಅಕ್ರಮವಾಗಿ ಪೆಟ್ಟಿಗೆಗೆ ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರೆ, ಇದರಿಂದ ವಾಹನ ಸಂಚಾರ ಹಾಗೂ ನಾಗರಿಕರಿಗೆ ತಿರುಗಾಡಲು ತೊಂದರೆ ಉಂಟಾಗಿ, ಅಪಘಾತಗಳು ಸಂಭವಿಸಿ ಹಲವು ಮಂದಿ ಗಾಯಗೊಂಡಿದ್ದಾರೆ. ಹಾಗಾಗಿ ಪೆಟ್ಟಿಗೆಗೆ ಅಂಗಡಿಗಳನ್ನು ತೆರವುಗೊಳಿ ಸುವಂತೆ, ಕಳೆದ ವಿಶೇಷ ಸಭೆಯಲ್ಲಿ ಪ್ರಸ್ತಾಪಿಸಲಾಗಿತ್ತು, ಈ ಸಂಬಂಧ ಏನು ಕ್ರಮಕೈಗೊಂಡಿದ್ದೀರಾ ಎಂದು ಪರಿಸರ ಎಂಜಿನಿಯರ್ ಚಂದ್ರಶೇಖರ್ ಅವರನ್ನು ಏರು ಧ್ವನಿಯಲ್ಲಿ ಪ್ರಶ್ನಿಸಿದರು.
ಅಂಗಡಿ ಗಳಿಗೆ ಅಳವಡಿಸಿರುವ ವಿದ್ಯುತ್ ಸಂಪರ್ಕ ಕಡಿತಕ್ಕೆ ಬೆಸ್ಕಾಂಗೆ ಮನವಿ ಸಲ್ಲಿಸಲಾಗಿದೆ, ಆದಾದ ಬಳಿಕ ಅಂಗಡಿಗಳನ್ನು ತೆರವುಗೊಳಿಸುವುದಾಗಿ ಪರಿಸರ ಎಂಜಿನಿಯರ್ ಚಂದ್ರಶೇಖರ್ ಉತ್ತರಿಸಿದರು. ಇದರಿಂದ ಕೆಂಡಾಮಂಡಲರಾದ ಸದಸ್ಯೆ ಜಯಲಕ್ಷ್ಮೀ ಮೂರು ನಾಲ್ಕು ದಿನದ ಒಳಗೆ ಅಂಗಡಿಗಳು ತೆರವುಗೊಳಿಸುವುದಾಗಿ ತಿಳಿಸಿ ಈಗ ಸಬೂಬು ಹೇಳುತ್ತಿದ್ದೀರಾ ಎಂದು ತರಾಟೆ ತೆಗೆದುಕೊಂಡರು, ಪೆಟ್ಟಿಗೆಗೆ ಅಂಗಡಿ ಮಾಲೀಕ ರಿಂದ ಹಣ ಪಡೆದಿದ್ದೇನೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ, ನನಗೆ ಅಪಮಾನವಾಗಿದೆ ಎಂದು ಚಂದ್ರಶೇಖರ್ ಅವರನ್ನು ಏಕ ವಚನದಲ್ಲಿ ನಿಂದಿಸಿ ಟೇಬಲ್ ಮೇಲೆ ಇದ್ದ ನೀರಿನ ಬಾಟಲ್ ಹಾಗೂ ಖುರ್ಚಿಯಿಂದ ಹಲ್ಲೆ ಮಾಡಲು ಯತ್ನಿಸಿದರು, ಪಕ್ಕದಲ್ಲೇ ಕುಳಿತಿದ್ದ ಪುರಸಭೆ ಸಿಬ್ಬಂದಿ ರೂಪ ಹಲ್ಲೆಯನ್ನು ತಡೆದರು.
ತೆರವಿಗೆ ಕ್ರಮ: ಮುಖ್ಯಾಧಿಕಾರಿ ಕೆ.ಪಿ. ರವಿಕುಮಾರ್ ಮಾತನಾಡಿ, ಮಂಗಳವಾರ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸಲಾಗುವುದು ಆದರೆ ಸದಸ್ಯರು ಫೋನ್ ಮಾಡಿ ಕರ್ತವ್ಯಕ್ಕೆ, ಅಡ್ಡಿ ಪಡಿಸಬಾರದೆಂದು ತಿಳಿಸಿದರು. ಸದಸ್ಯ ಕೆ.ಎಸ್.ಕೃಷ್ಣ ಮಾತನಾಡಿ, ಬಿದನಗೆರೆ ಸರ್ವೇ ನಂ 54/1, 54/3 ನಂಬರ್‌ನ ಜಾಗಕ್ಕೆ ಅಭಿವೃದ್ಧಿ ಶುಲ್ಕ ಎಂದು 4.7 ಲಕ್ಷ ರೂ. ಹಣವನ್ನು ಅಧಿಕಾರಿಗಳು ಕಟ್ಟಿಸಿಕೊಂಡಿದ್ದಾರೆ, ಇದು ಕಾನೂನು ನಿಯಮ ಉಲ್ಲಂಘನೆಯಾಗಿದೆ. ಬಡವರಿಗೆ ಒಂದು ನ್ಯಾಯ, ಬಲಾಡ್ಯರಿಗೆ ಒಂದು ನ್ಯಾಯ ಆಗಬಾರದು. ಎಲ್ಲರಿಗೂ ಒಂದೇ ನ್ಯಾಯ ಇರಬೇಕು ಎಂದು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
ಈ ಅವ್ಯವಹಾರದಲ್ಲಿ ಅಧ್ಯಕ್ಷರು, ಮುಖ್ಯಾಧಿಕಾರಿ ಶಾಮೀಲಾಗಿ ಬಲಾಡ್ಯರಿಂದ ಹಣ ಪಡೆದಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ದೂರು ಕೇಳಿ ಬರುತ್ತಿದೆ ಎಂದು ಆರೋಪಿಸಿದರು. ಇದಕ್ಕೆ ಸದಸ್ಯ ರಂಗಸ್ವಾಮಿ ಧ್ವನಿಗೂಡಿಸಿದರು, ಇದರಿಂದ ಕೆರಳಿದ ಅಧ್ಯಕ್ಷ ಎಸ್.ಕೆ.ನಾಗೇಂದ್ರ ನನ ° ಅಧಿಕಾರ ಅವಧಿಯಲ್ಲಿ ಯಾವೊಬ್ಬ ವ್ಯಕ್ತಿಯಿಂದ ಒಂದು ನಯಾ ಪೈಸೆ ಪಡೆದಿಲ್ಲ ಪ್ರಾಮಾಣಿಕವಾಗಿ ಜನರ ಕೆಲಸ ಮಾಡುತ್ತಿದ್ದೇನೆ ಎಂದು ತಿರುಗೇಟು ನೀಡಿದರು. ಉಪಾಧ್ಯಕ್ಷೆ ಮಂಜುಳಾ, ಸ್ಥಾಯಿ ಸಮಿತಿ ಅಧ್ಯಕ್ಷ ಸಮಿವುಲ್ಲಾ, ಸದಸ್ಯರಾದ ಅರುಣ್‌ಕುಮಾರ್, ರಾಮು, ನಾಗರಾಜು, ದೇವರಾಜು ಇದ್ದರು.