Advertisement

Kunigal; ರಸ್ತೆ ಅಪಘಾತದ ಬಳಿಕ ಜಟಾಪಟಿ; ಹಾಸನ ಎಸ್ಪಿ ತಾಯಿ ಮೇಲೆ ಹಲ್ಲೆ, ಆಸ್ಪತ್ರೆಗೆ ದಾಖಲು

11:43 AM Jan 02, 2024 | Team Udayavani |

ಕುಣಿಗಲ್: ರಸ್ತೆ ಅಪಘಾತ ಸಂಬಂಧ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಸಂಬಂಧಿಗಳ ಮತ್ತು ಬಿದನಗೆರೆ ಗ್ರಾಮಸ್ಥರ ನಡುವೆ ಜಟಾಪಟಿ ನಡೆದು ಜಿಲ್ಲಾ ಎಸ್ಪಿ ಅವರ ತಾಯಿ ಮೇಲೆ ಹಲ್ಲೆ ನಡೆದಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 75 ರ ಬಿದನಗೆರೆ ಬೈಪಾಸ್‌ನಲ್ಲಿ ನಡೆದಿದೆ.

Advertisement

ಘಟನೆಯಲ್ಲಿ ಹಾಸನ ಜಿಲ್ಲಾ ಎಸ್ಪಿ ಮೊಹಮ್ಮದ್ ಸುಜಿತಾ ಅವರ ತಾಯಿ ಎ.ಜೆ.ಮಹಮದ್ ಅಜೀಜಾ (60) ಹಲ್ಲೆಗೆ ಒಳಗಾದ ಮಹಿಳೆಯಾಗಿದ್ದು, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಘಟನೆ ಸಂಬಂಧ ಬಿದನಗೆರೆ ಗ್ರಾಮದ ಮೂರು ಮಂದಿ ವಿರುದ್ದ ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ವಿವರ: ಜ. 1 ಸೋಮವಾರದಂದು ಮಧ್ಯಾಹ್ನ ಎ.ಜೆ.ಮಹಮದ್ ಅಜೀಜಾ ಹಾಗೂ ಅವರ ಸಂಬಂಧಿಕರು ಹಾಸನದಿಂದ ಕುಣಿಗಲ್ ಮಾರ್ಗವಾಗಿ ಎರ್ಟಿಗಾ ಕಾರಿನಲ್ಲಿ ಬೆಂಗಳೂರಿಗೆ ತೆರಳುತ್ತಿರಬೇಕಾದರೆ, ಬಿದನಗೆರೆ ಬೈಪಾಸ್‌ ನಲ್ಲಿ ಯಾವುದೋ ಒಂದು ವಾಹನ ವ್ಯಕ್ತಿಯೋರ್ವನಿಗೆ ಅಪಘಾತ ಮಾಡಿ ಪರಾರಿಯಾಗಿತ್ತು, ತಕ್ಷಣ ನಾವು ಕಾರು ನಿಲ್ಲಿಸಿ ಅಪಘಾತವಾದ ವ್ಯಕ್ತಿಗೆ ಅಸ್ಪತ್ರೆಗೆ ಸೇರಿಸಬೇಕೆಂದು ಪರಿಶೀಲಿಸಲು ನಾವು ಪ್ರಯತ್ನಿಸಿದ್ದಾಗ 10 ಜನರ ಗುಂಪೊಂದು ನಮ್ಮನು ಸುತ್ತುವರೆದು, ನಮ್ಮೊಂದಿಗೆ ಜಗಳವಾಡಲು ಪ್ರಾರಂಭಿಸಿದರು, ಆ ವ್ಯಕ್ತಿಯನ್ನು ಪರೀಕ್ಷಿಸಲು ಅವರು ಅವಕಾಶ ಕೊಡಲಿಲ್ಲ,  ಬದಲಾಗಿ ಅವರು ನಮ್ಮನು ನಿಂದಿಸಿ, ಹಣಕ್ಕೆ ಬೇಡಿಕೆ ಇಟ್ಟರು, ಆ ಗುಂಪಿನಲ್ಲಿ ಇದ್ದ ಕೆಲವರು ನಮಗೆ ಹಣ ನೀಡುವಂತೆ ಬೆದರಿಕೆ ಹಾಕಿದರು, ಕೈಯಲ್ಲಿ ಛತ್ರಿ ಹಿಡಿದಿದ್ದ ವ್ಯಕ್ತಿಯೋರ್ವರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ.

ನನ್ನ ರಕ್ಷಣೆಗೆ ಬಂದ ನನ್ನ ಸಹೋದರ ಎ.ಜೆ.ಹಸನ್‌ ಅಲಿ ಶೇಕ್ ಗೂ ಹೊಡೆದರು, ನನ್ನ ಅಣ್ಣನ ಬೆನ್ನಿಗೆ ತೀವ್ರ ಹೊಡೆತ ಬಿದ್ದಿದೆ. ನಂತರ ಏಕಾಏಕಿ ಎರಡು ಮೂರು ಮಂದಿ ಕೂಡ ನನ್ನ ಮೇಲೆ ಹಲ್ಲೆ ನಡೆಸಿದರು, ಗುಂಪಿನಲ್ಲಿ ಇದ್ದ ಮಹಿಳೆಯೋರ್ವಳು ತನ್ನ ಕೈಯಲ್ಲಿ ಚಾಕು ತೆಗೆದುಕೊಂಡು ನನ್ನ ಗಂಟಲ ಬಳಿ ಇಟ್ಟು ಹಣ ನೀಡುವಂತೆ ಒತ್ತಾಯಿಸಿದರು, ಇಲ್ಲದಿದ್ದರೆ ನಮ್ಮನು ಕೊಲ್ಲುವುದಾಗಿ ಬೆದರಿಕೆ ಹಾಕಿದರು. ಮತ್ತೊಬ್ಬ ವ್ಯಕ್ತಿ ನನ್ನ ತಲೆ ಹಿಂಭಾಗಕ್ಕೆ ಹೊಡೆದಿದ್ದು, ತಕ್ಷಣ ನಾನು ಪ್ರಜ್ಞೆ ತಪ್ಪಿದೆ ಎಂದು ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ಎ.ಜೆ.ಮಹಮದ್ ಅಜೀಜಾ ಆರೋಪಿಸಿದ್ದಾರೆ.

ಇದನ್ನೂ ಓದಿ:Sydney; ವಿದಾಯ ಪಂದ್ಯಕ್ಕೆ ಮುನ್ನ ಬ್ಯಾಗಿ ಗ್ರೀನ್ ಕ್ಯಾಪ್ ಕಳೆದುಕೊಂಡ ಡೇವಿಡ್ ವಾರ್ನರ್

Advertisement

ಈ ಸಂಬಂಧ ಕುಣಿಗಲ್ ಠಾಣೆಯಲ್ಲಿ ಬಿದನಗೆರೆ ಗ್ರಾಮದ ಚಂದ್ರು, ದಯಾನಂದ್ ಸೇರಿದಂತೆ ಮೂರು ಮಂದಿ ವಿರುದ್ದ ಪ್ರಕರಣ ದಾಖಲಾಗಿದೆ.

ಪ್ರತ್ಯೇಕ ದೂರು: ಅಪಘಾತ ಸಂಬಂಧ  ಬಿದನಗೆರೆ ಗ್ರಾಮದ ಗೋವಿಂದಯ್ಯ ಕುಣಿಗಲ್ ಪೊಲೀಸ್ ಠಾಣೆಗೆ ದೂರು ನೀಡಿ ಸೋಮವಾರ ಮಧ್ಯಾಹ್ನ ಒಂದು ಗಂಟೆ ವೇಳೆಯಲ್ಲಿ ರಾಷ್ಟ್ರೀಯ ಹೆದ್ದಾರಿ 75 ರ ಮುಖ್ಯ ರಸ್ತೆಯಿಂದ ನಮ್ಮ ಮನೆ ಹತ್ತಿರದಿಂದ  ನಮ್ಮ ಹೊಲಕ್ಕೆ ಸರ್ವಿಸ್ ರಸ್ತೆಯಲ್ಲಿ ಹೋಗುತ್ತಿರುವಾಗ ಗ್ರಾಮದ ವಾಸಿ ಚಂದ್ರಪ್ಪ ಮತ್ತು ಕುಮಾರ ಅವರು ರಸ್ತೆಯ ಎಡ ಭಾಗದಲ್ಲಿ ದಾಟಲು ನಿಂತಿರುವಾಗ ಹಾಸನ ಕಡೆಯಿಂದ ಬಂದ ಟಿ.ಎನ್.11, ಬಿಎಫ್ 1492 ನಂಬರ್‌ ನ ಕಾರಿನ ಚಾಲಕ ಕಾರನ್ನು ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ರಸ್ತೆಯಲ್ಲಿ ನಿಂತಿದ್ದ ಕುಮಾರನಿಗೆ ಡಿಕ್ಕಿ ಹೊಡೆದಿದೆ. ಕುಮಾರನ್ನು ಕೆಳಗೆ ಬಿದ್ದು ತಲೆಗೆ ರಕ್ತ ಗಾಯವಾಯಿತು, ಆಗ ನಮ್ಮ ಗ್ರಾಮದ ವಾಸಿಗಳಾದ ದಯಾನಂದ, ನಾಗಣ್ಣ, ಕಿರಣ ಸೇರಿಕೊಂಡು ಅವರನ್ನು ಉಪಚರಿಸಿದೆವು. ಆಗ ಕಾರಿನ ಚಾಲಕ ಹಾಗೂ ಅದರಲ್ಲಿ ಇದ್ದವರು ಕಾರನ್ನು ನಿಲ್ಲಿಸದೆ ಹೊಗುತ್ತಿದ್ದರು ಆಗ ನಾವುಗಳು ಅವರನ್ನು ತಡೆದು ಕೇಳಿದೆವು. ಆಗ ಅವರು ತಮಿಳು ಭಾಷೆಯಲ್ಲಿ ನಮ್ಮನು ಬೈದು ನಿಂದಿಸಿದರು. ಅದರ ಚಾಲಕ ಮತ್ತು ಇಬ್ಬರು ಮಹಿಳೆಯರು ನಮ್ಮನು ತಳ್ಳಿ ನೂಕಿದರು ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ಎರಡು ಪ್ರಕರಣ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿ, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next