ಕುಣಿಗಲ್ : ಅಪರಿಚಿತ ವ್ಯಕ್ತಿಗಳು ತರಕಾರಿ ವ್ಯಾಪಾರಿಗಳೆಂದು ವೃದ್ದೆಯನ್ನು ನಂಬಿಸಿ, ಆಕೆಯ ಮನೆಯನ್ನು ಬಾಡಿಗೆ ಪಡೆದು, ಮೂರು ದಿನದ ಬಳಿಕ ವೃದ್ದೆಯ ಬಳಿ ಇದ್ದ ಲಕ್ಷಾಂತರೂ ಮೌಲ್ಯದ ಚಿನ್ನಾಭರಣವನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ತಾಲೂಕು ಹುಲಿಯೂರುದುರ್ಗ ಟೌನ್ ಹೊಸಪೇಟೆಯಲ್ಲಿ ನಡೆದಿದೆ.
ಹುಲಿಯೂರುದುರ್ಗ ಹಳೇವೂರು ರಸ್ತೆ ಹೊಸಪೇಟೆಯ ಜಯಲಕ್ಷ್ಮಮ್ಮ (80) ವಡವೆ ಕಳೆದುಕೊಂಡ ವೃದ್ದೆ.
ಘಟನೆ ವಿವರ : ವೃದ್ದೆ ಜಯಲಕ್ಷ್ಮಮ್ಮ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು ಒಬ್ಬ ಮಗಳು ಬೆಂಗಳೂರು ಮತೊಬ್ಬ ಮಗಳು ಮೈಸೂರಿನಲ್ಲಿ ವಾಸವಾಗಿದ್ದಾರೆ. ಜಯಲಕ್ಷ್ಮಮ್ಮಒಬ್ಬರೇ ಹುಲಿಯೂರುದುರ್ಗ ಟೌನ್ ಹೊಸಪೇಟೆಯಲ್ಲಿ ವಾಸವಾಗಿದ್ದಾರೆ. ಮೂರು ದಿನದ ಹಿಂದೆ ಅಪರಿಚಿತ ತಾಯಿ, ಮಗ ಜಯಲಕ್ಷ್ಮಮ್ಮ ಅವರ ಮನೆಗೆ ಹೋಗಿ ನಾವು ಬಡವರು ನಾವು ತರಕಾರಿ ವ್ಯಾಪಾರ ಮಾಡುತ್ತಿದ್ದೇವೆ. ಹೀಗಾಗಿ ನಿಮ್ಮ ಮನೆ ಪಕ್ಕದಲ್ಲಿ ಇರುವ ಮನೆಯನ್ನು ಬಾಡಿಗೆ ನೀಡುವಂತೆ ಅಜ್ಜಿಯನ್ನು ನಂಬಿಸಿ ಹತ್ತು ಸಾವಿರ ರೂ.ಗಳನ್ನು ಮುಂಗಡವಾಗಿ ನೀಡಿ ಮನೆಗೆ ಸೇರಿಕೊಂಡರ., ಕಳೆದ ಮೂರು ದಿನಗಳಿಂದ ಮನೆಯಲ್ಲಿ ವಾಸವಾಗಿದ್ದ ಅಪರಿಚಿತರು ರಾತ್ರಿ ಅಜ್ಜಿ ಜೊತೆಯೊಂದಿಗೆ ಊಟ ಮಾಡಿದರು. ಅಜ್ಜಿ ಮಲಗಿದ ಬಳಿಕ ಅಪರಿಚಿತರು ಅಜ್ಜಿಯ ಮನೆಯ ಮತ್ತೊಂದು ಬಾಗಿಲು ಮೂಲಕ ಮನೆ ಒಳಗೆ ಪ್ರವೇಶಿಸಿ ಮನೆಯಲ್ಲಿ ಇದ್ದ ಸುಮಾರು ನಾಲ್ಕು ಲಕ್ಷ ರೂ ಬೆಲೆ ಬಾಳುವ ಬಂಗಾರದ ಒಡವೆಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಅಜ್ಜಿ ಜಯಲಕ್ಷ್ಮಿಮ್ಮ ಬೆಳಗ್ಗೆ ಎದ್ದು ನೋಡಿದಾಗ, ಅಪರಿಚಿತ ತಾಯಿ ಮಗ ಇಬ್ಬರು ಮನೆಯಲ್ಲಿ ಇರಲಿಲ್ಲ. ಗಾಬರಿಗೊಂಡ ಜಯಲಕ್ಷ್ಮಮ್ಮ ತನ್ನ ಮನೆ ಒಳಗೆ ಹೋಗಿ ಒಡವೆ ನೋಡಿದಾಗ ಒಡವೆಗಳು ಕಳವಾಗಿದ್ದವು.
ಜಯಲಕ್ಷ್ಮಮ್ಮ ಹುಲಿಯೂರುದುರ್ಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ,
ಎಚ್ಚರ ವಹಿಸಿ ಪಿಎಸ್‌ಐ : ಗುರುತು ಪರಿಚಯ ಇಲ್ಲದವರಿಗೆ ಮನೆ ಬಾಡಿಗೆ ಕೊಡಬಾರದು ಅವರಿಂದ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಮೊದಲಾದ ದಾಖಲೆಗಳನ್ನು ಪಡೆದು ಪರಿಶೀಲಿಸಿ ಮನೆ ಬಾಡಿಗೆಗೆ ನೀಡಬೇಕು ಇಲ್ಲವಾದಲ್ಲಿ ಅಪರಿಚಿತ ವ್ಯಕ್ತಿಗಳು ನಂಬಿಸಿ ಮೋಸ ಮಾಡಲಿದ್ದಾರೆ. ಸಾರ್ವಜನಿಕರು ಈ ಸಂಬಂಧ ಎಚ್ಚರ ವಹಿಸುವಂತೆ ಪಿಎಸ್‌ಐ ಸುನೀಲ್‌ಕುಮಾರ್ ಸಾರ್ವಜನಿಕರಿಗೆ ತಿಳಿಸಿದ್ದಾರೆ.